ಮಳೆಗಾಲದ ಆರಂಭದಲ್ಲಿ ಮನೆಯಿಂದ ಹೊರಗೆ ಬರುವ ಮುನ್ನ ಎಚ್ಚರ!
ಬೆಂಗಳೂರು, ಏಪ್ರಿಲ್ 15 : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೇಸಿಗೆಯ ನಡುವೆಯೂ ಕಳೆದ ಎರಡು ದಿನಗಳಿಂದ ಭಾರಿ ಮಳೆ ಸುರಿದಿದೆ. ಪರಿಣಾಮ ಧಾರಕಾರ ಮಳೆಗೆ ನಗರದ ಹಲವು ಕಡೆ ಮರಗಳು ನೆಲಕ್ಕುರುಳಿವೆ. ಹೀಗಾಗಿ ಬೆಂಗಳೂರಿಗರು ಮುಂಗಾರು ಮಳೆ ಆರಂಭವಾಗುವ ಸಮಯದಲ್ಲಿ ಜಾಗೃತರಾಗಿ ಹೊರಗಡೆ ಓಡಾಡಬೇಕಾದ ಪರಿಸ್ಥಿತಿ ಇದೆ. ಏಕೆಂದರೆ ನಗರದಲ್ಲಿ ದುರ್ಬಲವಾಗಿರುವ ಮರಗಳು, ಕೊಂಬೆಗಳನ್ನ ತೆರವು ಮಾಡುವಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಫಲವಾಗಿದೆ.
ಮುಂಗಾರು ಆರಂಭಕ್ಕೂ ಮುನ್ನವೇ ಕಳೆದು ಎರಡು ದಿನಗಳಲ್ಲಿ ಸುರಿದ ಮಳೆಗೆ ಬೆಂಗಳೂರಿನಲ್ಲಿ ಹತ್ತಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಆದರೆ ಬಿದ್ದ ಮರಗಳನ್ನ ಹಾಗೂ ಒಣಗಿದ ಮರಗಳು, ರೆಂಬೆಗಳನ್ನು ಕತ್ತರಿಸಿ ತೆರವು ಮಾಡಲು ಬಿಬಿಎಂಪಿ 21 ತಂಡಗಳನ್ನು ಹೊಂದಿದ್ದರೂ ಸಹ ಇದುವರೆಗೂ ದುರ್ಬಲಗೊಂಡ ಯಾವುದೇ ಮರಗಳ ತೆರವು ಕಾರ್ಯವನ್ನ ಸರಿಯಾಗಿ ಮಾಡಲಾಗಿಲ್ಲ. ಇದರಿಂದಾಗಿ ಅಕಾಲಿಕ ಮಳೆಯಾದಗಲೂ ನಗರದಲ್ಲಿ ಮರಗಳು, ರೆಂಬೆ ಕೊಂಬೆಗಳು ಮುರಿದು ಬೀಳುವ ಪರಿಸ್ಥಿತಿ ಇದೆ.

ಆದರೆ ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳನ್ನ ಪ್ರಶ್ನೆ ಮಾಡಿದರೆ ಹೇಳೋದೆ ಬೇರೆ, ಹಳೆಯದಾದ ಮರ, ಕೊಂಬೆ ತೆರವು ಮಾಡಲು ನಮ್ಮಲ್ಲಿ ನಿರ್ವಹಣಾ ತಂಡ ಇದೆ. ಅಲ್ಲದೆ ಬುಧವಾರ ನಮ್ಮ ತಂಡ 39ಕ್ಕೂ ಹೆಚ್ಚು ಸ್ಥಳಗಳಲ್ಲಿ ಮರದ ಕೊಂಬೆಗಳನ್ನ ತೆರವು ಮಾಡಿದೆ. ಇನ್ನು ಪೊಲೀಸರು, ಸಾರ್ವಜನಿಕರಿಂದ ದೂರು ಬಂದಾಗಲೆಲ್ಲಾ ನಮ್ಮ ತಂಡ ಶೀಘ್ರವೇ ಆ ಸ್ಥಳವನ್ನು ತಲುಪಿ ತೆರವು ಮಾಡುತ್ತದೆ. ಮರ ತೆರವು ಮಾಡಲು ನಮ್ಮಲ್ಲಿ ಅಗತ್ಯ ಸಲಕರಣೆಗಳು ಇವೆ. ಹೀಗಾಗಿ ನಗರದಲ್ಲಿರುವ ಹಳೆಯ ಹಾಗೂ ಒಣಗಿದ ಮರಗಳ ತೆರವು ಕಾರ್ಯ ಮಾಡುತ್ತಿದೆ ಅಂತ ಬಿಬಿಎಂಪಿಯ ಅರಣ್ಯ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಹೇಳಿಕೊಂಡಿದ್ದಾರೆ.

ನಗರದಲ್ಲಿ ಪ್ರತಿವರ್ಷ ಮಳೆಗಾಲದಲ್ಲಿ 1000 ಕ್ಕೂ ಹೆಚ್ಚು ಮರಗಳು ನೆಲಕ್ಕುರುಳುತ್ತವೆ. ಈ ಸಮಯದಲ್ಲಿ ಒಣಗಿದ ಮರ ಹಾಗೂ ರೆಂಬೆಗಳು ನಾಗರಿಕರ ಮೇಲೂ ಬಿದ್ದು, ಕೆಲವರು ಸಾವನ್ನಪ್ಪಿದ್ರೆ, ಇನ್ನು ಕೆಲವರೂ ಗಾಯಗೊಂಡಿದ್ದಾರೆ. ಮತ್ತು ಕೆಲವರು ವಾಹನಗಳು ಜಖಂಗೊಂಡಿದೆ. ಸದ್ಯ ಈಗಲಾದರೂ ಬಿಬಿಎಂಪಿ ಮಳೆಗಾಲ ಆರಂಭಕ್ಕೂ ಮುನ್ನವೇ ದುರ್ಬಲ ಮರಗಳ ತೆರವು ಕಾರ್ಯ ಮಾಡಬೇಕಿದೆ.












Click it and Unblock the Notifications