ಜನರ ನೆರವಿಗೆ ಬಿಬಿಎಂಪಿಯಿಂದ 'ಸಹಾಯ ಸೇತುವೆ' ಅಪ್ಲಿಕೇಶನ್
ಬೆಂಗಳೂರು, ಏಪ್ರಿಲ್ 14: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜನರಿಗೆ ನೆರವಾಗಲು 'ಸಹಾಯ ಸೇತುವೆ' ಎಂಬ ಅಪ್ಲಿಕೇಶನ್ ಬಿಡುಗಡೆ ಮಾಡಿದೆ. ಇಂದಿರಾ ಕ್ಯಾಂಟೀನ್, ಫೀವರ್ ಕ್ಲಿನಿಕ್ ಸೇರಿದಂತೆ ಇನ್ನಿತರ ಅಗತ್ಯ ಮಾಹಿತಿಗಳನ್ನು ಇಲ್ಲಿ ಪಡೆಯಬಹುದು.
ಕೊರೊನಾ ಹರಡದಂತೆ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಆದ್ದರಿಂದ, ಜನರ ಸುರಕ್ಷತೆ ಹಾಗೂ ನಿರ್ಗತಿಕರ ಬಗ್ಗೆ ಕಾಳಜಿ ವಹಿಸಲು ಬಿಬಿಎಂಪಿ 'ಸಹಾಯ ಸೇತುವೆ' ಎಂಬ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದೆ.
ಮಂಗಳವಾರ ಕಂದಾಯ ಸಚಿವರು ಆರ್. ಅಶೋಕ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅಪ್ಲಿಕೇಶನ್ ಬಿಡುಗಡೆ ಮಾಡಿದರು. ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಜೈನ್, ಆಯುಕ್ತ ಬಿ. ಎಚ್. ಅನಿಲ್ ಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಅಪ್ಲಿಕೇಷನ್‌ನಲ್ಲಿ ನಾಗರಿಕರು/ ಸರ್ಕಾರೇತರ ಸಂಘ ಸಂಸ್ಥೆಗಳು ನೀಡುವ ಆಹಾರ ಸಾಮಗ್ರಿಗಳನ್ನು ಫಲಾನುಭವಿಗಳಿಗೆ ತಲುಪಿಸುವ, ಸ್ವಯಂ ಸೇವಕರಾಗಲು ಇಚ್ಛಿಸುವವರು ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ಇಂದಿರಾ ಕ್ಯಾಂಟೀನ್, ಫೀವರ್ ಕ್ಲಿನಿಕ್‌ಗಳು ಎಲ್ಲಿವೆ? ಎಂಬುದರಿಂದ ಹಿಡಿದು ಅಗತ್ಯ ಮಾಹಿತಿಗಳಿವೆ. ಜನರು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಈ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಳ್ಳಬಹುದು ಎಂದು ಬಿಬಿಎಂಪಿ ಹೇಳಿದೆ.

ನಗರದಲ್ಲಿ ವಿಸ್ತರಣೆ: ಪ್ರಸ್ತುತ ಬೆಂಗಳೂರು ದಕ್ಷಿಣ ಪೊಲೀಸ್ ವಿಭಾಗದ ವ್ಯಾಪ್ತಿಯಲ್ಲಿ ನಡೆಯುತ್ತಿರುವ 'ಹೋಮ್ ಡಿಲಿವರಿ ಸಹಾಯವಾಣಿ' ಸೇವೆಯನ್ನು ನಗರದಾದ್ಯಂತ ವಿಸ್ತರಿಸುವ ಕುರಿತು ಇಂದು ಆರ್. ಅಶೋಕ ನೇತೃತ್ವದಲ್ಲಿ ಸಭೆ ನಡೆಯಿತು.
ವಲಯ ಜಂಟಿ ಆಯುಕ್ತರು ಹಾಗೂ ಡಿಸಿಪಿಗಳ ನೇತೃತ್ವದಲ್ಲಿ ವಲಯವಾರು ದಿನಸಿ, ತರಕಾರಿ, ಔಷಧಿ ಮಳಿಗೆಗಳ ಸಮೀಕ್ಷೆ ನಡೆಸಿ ಜಿಯೋ ಟ್ಯಾಗಿಂಗ್ ಮಾಡಿ ಮಾಹಿತಿ ನೀಡಿದ ಬಳಿಕ ಹೋಮ್ ಡಿಲಿವರಿ ಸೇವೆ ಒದಗಿಸುವ ಕಾರ್ಯವನ್ನು ಆರಂಭಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.












Click it and Unblock the Notifications