ಬೆಂಗಳೂರಿನಲ್ಲಿ ಈ ವರ್ಷದ 'ಕನ್ನಡ ರಾಜ್ಯೋತ್ಸವ' ವಿಶೇಷ ಆಚರಣೆ ಬಗ್ಗೆ ಬಿಬಿಎಂಪಿ ಆದೇಶ
ಬೆಂಗಳೂರು, ಅಕ್ಟೋಬರ್ 30: ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷಗಳು ಪೂರ್ಣಗೊಂಡಿರುವ ಹಿನ್ನಲೆಯಲ್ಲಿ ಈ ವರ್ಷದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ವಿಶೇಷ ರೀತಿಯಲ್ಲಿ ಆಚರಿಸಲು ಉದ್ದೇಶಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದಾರೆ.
ಕಾರ್ಯಕ್ರಮದ ಸ್ವರೂಪ ಸಿದ್ದಪಡಿಸಲಾಗಿದೆ. ಇಡೀ ರಾಜ್ಯದಲ್ಲಿ ಈ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸೂಚನೆಗಳನ್ನು ನೀಡಲಾಗಿದೆ. ಅದರಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿಯೂ ಸಹ ಈ ಕೆಳಕಂಡ ಅಂಶಗಳ ಬಗ್ಗೆ ಗಮನ ಹರಿಸಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ವಲಯ ಜಂಟಿ ಆಯುಕ್ತರಿಗೆ ಆದೇಶಿಸಿದ್ದಾರೆ.

ಬಿಬಿಎಂಪಿ ರಾಜ್ಯೋತ್ಸವ ವೇಳಾಪಟ್ಟಿ
1. ಬಿಬಿಎಂಪಿ ವ್ಯಾಪ್ತಿಯಲ್ಲಿ ನವೆಂಬರ್ 01 ರಂದು ಆಚರಿಸುವ ರಾಜ್ಯೋತ್ಸವ ಕಾರ್ಯಕ್ರಮ ವೇಳಾಪಟ್ಟಿಯಲ್ಲಿರುವಂತೆ ಧ್ವಜಾರೋಹಣ ರಾಷ್ಟ್ರಗೀತೆ, ನಾಡಗೀತೆ, ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆಯಾದ ನಂತರ ಕ್ರಮವಾಗಿ ಈ ಕೆಳಗಿನ 05 ಕನ್ನಡ ಗೀತೆಗಳನ್ನು ಕಡ್ಡಾಯವಾಗಿ ಹಾಡುವ ಮೂಲಕ ನುಡಿ ನಮನ ಸಲ್ಲಿಸುವುದು.
* ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು - ಹುಯಿಲಗೊಳ ನಾರಾಯಣರಾಯರು.
* ಎಲ್ಲಾದರು ಇರು ಎಂತಾದರು ಇರು - ಕುವೆಂಪು.
* ಒಂದೇ ಒಂದೇ ಕರ್ನಾಟಕ ಒಂದೇ - ದ.ರಾ.ಬೇಂದ್ರೆ.
* ಹೊತ್ತಿತೋ ಹೊತ್ತಿತೋ ಕನ್ನಡದ ದೀಪ - ಸಿದ್ದಯ್ಯ ಪುರಾಣಿಕ.
* ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ - ಚನ್ನವೀರಕಣವಿ.
ಇನ್ನೂ ನವೆಂಬರ್ 1 ರಂದು ಬೆಂಗಳೂರು ನಗರದ ಎಲ್ಲಾ ಮನೆಗಳ ಮುಂದೆ ಕೆಂಪು ಮತ್ತು ಹಳದಿ ಬಣ್ಣದ ರಂಗೋಲಿಗಳನ್ನು ಬಿಡಿಸಿ ಕರ್ನಾಟಕ ಸಂಭ್ರಮ-50 ಹೆಸರಾಯಿತು. ಕರ್ನಾಟಕ, ಉಸಿರಾಗಲಿ ಕನ್ನಡ' ಎಂಬ ಘೋಷ ವಾಕ್ಯವನ್ನು ಬರೆಯುವಂತೆ ನಾಗರಿಕರಲ್ಲಿ ಮನವಿ ಮಾಡಲಾಗಿದೆ.

ಸಂಜೆವರೆಗೆ ವಿವಿಧ ಕಾರ್ಯಕ್ರಮ
ಬೆಳಗ್ಗೆ 9 ಗಂಟೆಗೆ ಎಲ್ಲಾ ಆಕಾಶವಾಣಿ ಕೇಂದ್ರಗಳಲ್ಲಿ (ರೇಡಿಯೋ) ನಾಡ ಗೀತೆಯನ್ನು ಪ್ರಸಾರ ಮಾಡಲಾಗುವುದು. ಆ ಸಮಯದಲ್ಲಿ ಕನ್ನಡ ನಾಡಿನ ಸಮಸ್ತ ನಾಗರೀಕರು ಎದ್ದು ನಿಂತು ರಾಷ್ಟ್ರಗೀತೆಗೆ ಗೌರವ ಸಲ್ಲಿಸುವ ರೀತಿಯಲ್ಲಿ ನಾಡ ಗೀತೆಗೂ ಗೌರವ ಸಲ್ಲಿಸಬೇಕೆಂದು ಅವರು ಮನವಿ ಮಾಡಿದರು.
ನವೆಂಬರ್ 1ರ ಸಂಜೆ 5.00 ಗಂಟೆಗೆ ಬೆಂಗಳೂರು ನಗರದ ಎಲ್ಲಾ ಮೈದಾನಗಳಲ್ಲಿ ಕೆಂಪು ಹಳದಿ ಬಣ್ಣದ ಗಾಳಿಪಟಗಳನ್ನು ಆಕಾಶಕ್ಕೆ ಹಾರಿ ಬಿಡುವ ಮೂಲಕ ಸುವರ್ಣ ಸಂಭ್ರಮ ಗಾಳಿಪಟ ಉತ್ಸವ ಆಚರಿಸಬೇಕು. ನಂತರ ಸಂಜೆ 7.00 ಗಂಟೆಗೆ ಬೆಂಗಳೂರು ನಗರದ ಎಲ್ಲಾ ಮನೆಗಳ ಮುಂದೆ, ಕಛೇರಿಗಳ ಮುಂದೆ ಹಾಗೂ ಅಂಗಡಿ-ಮಳಿಗೆಗಳ ಮುಂದೆ ಹಣತೆ (ದೀಪ) ಹಚ್ಚಿ ಜ್ಯೋತಿ ಬೆಳಗಬೇಕು.
ಮೇಲ್ಕಂಡ ಎಲ್ಲಾ ಕಾರ್ಯಕ್ರಮಗಳನ್ನು ಬೆಂಗಳೂರು ನಗರದ ಆಟದ ಮೈದಾನಗಳು, ಉದ್ಯಾನವನಗಳು, ಕೆರೆ ಆವರಣ, ಅಪಾರ್ಟ್ಮೆಂಟ್‌ಗಳಲ್ಲಿ, ಮಾಲ್‌ಗಳಲ್ಲಿ ಹಾಗೂ ಪ್ರಮುಖ ಸ್ಥಳಗಳಲ್ಲಿಯೂ ಸಹ ಆಚರಿಸಬೇಕಾಗಿರುವುದರಿಂದ ಬೆಂಗಳೂರು ನಗರದ ಸಂಘ ಸಂಸ್ಥೆಗಳು, ಅಪಾರ್ಟ್ಮೆಂಟ್ಸ್ ಯೂನಿಯನ್‌ಗಳು, ಹೋಟೆಲ್ ಯೂನಿಯನ್‌ಗಳು ಹಾಗೂ ಇತರ ಸಂಘ ಸಂಸ್ಥೆಗಳ ಸಹಯೋಗ ಪಡೆದು ಕಾರ್ಯಕ್ರಮ ಯಶಸ್ವಿಗೊಳಿಸಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ನಿರ್ದೇಶಿಸಲಾಗಿದೆ ಎಂದು ತುಷಾರ್ ಗಿರಿನಾಥ್ ತಿಳಿಸಿದರು.












Click it and Unblock the Notifications