ಬಿಬಿಎಂಪಿ ಆಸ್ತಿ ತೆರಿಗೆ ಹೆಚ್ಚಿಸಿದರೆ ಉಗ್ರ ಹೋರಾಟ ಎಂದ ಎಎಪಿ: ಡಿಸಿಎಂ ಹೇಳಿದ್ದೇನು?
ಬೆಂಗಳೂರು, ಮೇ 31: ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ತನ್ನ 5 ಗ್ಯಾರಂಟಿಗಳನ್ನು ಪೂರೈಸಲು ಬಿಬಿಎಂಪಿ ಆಸ್ತಿ ತೆರಿಗೆಯನ್ನು ಹೆಚ್ಚಿಸಲು ಕೈಗೊಂಡಿರುವ ನಿರ್ಧಾರ ನಿಜಕ್ಕೂ ನಾಚಿಕೆಗೇಡಿತನ ಎಂದು ಆಮ್ ಆದ್ಮಿ ಪಕ್ಷ (AAP) ದೂರಿದೆ.
ಬುಧವಾರ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ಮುಖಂಡ ಮತ್ತು ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ಸದಂ ಮಾತನಾಡಿದರು. ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿ ಮಾಡಬೇಕಿದೆ. ಇದಕ್ಕೆ ಚರ್ಚೆ, ಹಣಕಾಸು ಕರಿತು ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಬಿಬಿಎಂಪಿ ತೆರಿಗೆ ಹೆಚ್ಚಳಕ್ಕೆ ನಿರ್ಧರಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸದಂ ಅವರು ಯಾವ ಕಾರಣಕ್ಕೂ ತೆರಿಗೆ ಹೆಚ್ಚಳಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲಿಯೂ ಶೂನ್ಯ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಲೇ ಇಲ್ಲ. ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯನ್ನು ಸಾಧಿಸಿ ರಾಜಸ್ವ ಸಂಗ್ರಹ ಹೆಚ್ಚಿಸಿ, ಸಂಪನ್ಮೂಲ ಕ್ರೂಡೀಕರಣ ಗೊಳಿಸುವ ತಾಕತ್ತು ಕಾಂಗ್ರೆಸ್ ಸರ್ಕಾರಕ್ಕೆ ಇದೆಯೇ ಎಂದು ಪ್ರಶ್ನಿಸಿದರು.
ಸಾಲ ಪಡೆಯದೇ ಗ್ಯಾರಂಟಿ ಈಡೇರಿಕೆ ಸಾಧ್ಯವೇ?
ಚುನಾವಣಾ ಅಕ್ರಮಗಳಿಗಾಗಿ ಈಗಾಗಲೇ ಸಾವಿರಾರು ಕೋಟಿ ರೂಪಾಯಿಗಳನ್ನು ವ್ಯಯ ಮಾಡಿರುವ ಕಾಂಗ್ರೆಸ್ ಪಕ್ಷ ಒಂದು ಕಡೆಯಾದರೆ ಈ ಇಂದಿನ ಬಿಜೆಪಿ ಸರ್ಕಾರ 3,00,000 ಕೋಟಿಗೂ ಹೆಚ್ಚು ಸಾಲವನ್ನು ಮಾಡಿ ರಾಜ್ಯದ ಬೊಕ್ಕಸವನ್ನು ಬರ್ಬಾದ್ ಮಾಡಿದೆ. ಕಾಂಗ್ರೆಸ್ ಸರ್ಕಾರವು ಯಾವುದೇ ಸಾಲಗಳನ್ನು ಪಡೆಯದೆ ಐದು ಗ್ಯಾರಂಟಿಗಳನ್ನು ಈಡೇರಿಸಲು ಸಾಧ್ಯವಿದೆಯೇ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಒಂದು ಕೈಯಲ್ಲಿ ಉಚಿತ ಕೊಡುಗೆಗಳನ್ನು ನೀಡಿ ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುವ ರೀತಿಯಲ್ಲಿ ಬಿಬಿಎಂಪಿ ಆಸ್ತಿ ತೆರಿಗೆಯನ್ನು ಹೆಚ್ಚಿಸಬಾರದು ಎಂದು ಅವರು ಆಗ್ರಹಿಸಿದರು. ಒಂದು ವೇಳೆ ತೆರಿಗೆ ಹೆಚ್ಚಿಸಿದ್ದೇ ಆದಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಬೀದಿಗಿಳಿದು ತೀವ್ರವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ತೆರಿಗೆ ಹೆಚ್ಚಳದ ಪ್ರಸ್ತಾವನೆ: ಡಿಸಿಎಂ ಹೇಳಿದ್ದೇನು?
ಬೆಂಗಳೂರು ನಗರ ಜಿಲ್ಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಒಂದು ವೇಳೆ ಬಿಬಿಎಂಪಿಯ ಈ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಅಂಗೀಕರಿಸಿದರೆ ಬೆಂಗಳೂರಿನ 25 ಲಕ್ಷ ಮಂದಿ ಆಸ್ತಿ ಮಾಲೀಕರ ಜೇಬಿಗೆ ಕತ್ತರಿ ಬೀಳಲಿದೆ ಎಂದು ಅಂದಾಜಿಸಲಾಗಿದೆ. ಈ ಮೂಲಕ ಆಸ್ತಿ ತೆರಿಗೆ ಪ್ರಮಾಣದಲ್ಲಿ ಏರಿಕೆ ಆಗಲಿದೆ. ಈ ಬಗ್ಗೆ ಸದ್ಯ ಭಾರೀ ಚರ್ಚೆ ನಡೆದಿದೆ.
ತೆರಿಗೆ ಹೆಚ್ಚಳ ಸಂಬಂಧ ಮಾಹಿತಿ ನೀಡಿದ ಉಪಮುಖ್ಯಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಬಿಬಿಎಂಪಿಯ ಪ್ರಸ್ತಾವವನ್ನು ರಾಜ್ಯ ಸರ್ಕಾರ ಅಂಗೀಕಾರ ಮಾಡುವ ಸುಳಿವು ನೀಡಿದ್ದಾರೆ. ನಗರದಲ್ಲಿ ಕೈಗೊಂಡಿದ್ದ ಕಾಮಗಾರಿಗಳನ್ನು ಪರಿಶೀಲಿಸಿದ ಅವರು, ಬಳಿಕ ತೆರಿಗೆ ಹೆಚ್ಚಳ ಪ್ರಸ್ತಾವನಗೆ ಒಪ್ಪಿಗೆ ಸೂಚಿಸುವ ಬಗ್ಗೆ ಮಾತನಾಡಿದರು. ಈ ಮೂಲಕ ಕೆಲವೇ ದಿನಗಳಲ್ಲಿ ನಗರದಲ್ಲಿ ತೆರಿಗೆ ಹೆಚ್ಚಾಗುವ ಸಾಧ್ಯತೆ ಇದ್ದು, ಇದಕ್ಕೆ ಎಎಪಿ ಆಕ್ಷೇಪ ವ್ಯಕ್ತಪಡಿಸಿದೆ.












Click it and Unblock the Notifications