ಬೆಂಗಳೂರಲ್ಲಿ 696 ಕಡೆ ಚರಂಡಿ ಒತ್ತುವರಿ; ನೋಟಿಸ್ ಕೊಟ್ಟ ಬಿಬಿಎಂಪಿ
ಬೆಂಗಳೂರು, ಸೆಪ್ಟೆಂಬರ್ 4: ಭಾರೀ ಮಳೆಯಿಂದಾಗಿ ಬೆಂಗಳೂರಿನ ಮಹದೇವಪುರ ಮತ್ತು ಬೊಮ್ಮನಹಳ್ಳಿ ವಲಯಗಳಲ್ಲಿ ತೀವ್ರ ಪ್ರವಾಹ ಪರಿಸ್ಥಿತಿ ಉಂಟಾದ ನಂತರ ಎಚ್ಚೆತ್ತಿರುವ ಬಿಬಿಎಂಪಿ ಸಮಸ್ಯೆ ಸರಿಪಡಿಸಲು ಮುಂದಾಗಿದೆ. ಮಳೆನೀರು ಹರಿಯುವ ಚರಂಡಿಗಳನ್ನು ಒತ್ತುವರಿಯನ್ನು ತೆರವು ಮಾಡಲು ಮುಂದಾಗಿದ್ದು, ಪ್ರಮುಖವಾಗಿ ಅಡಚಣೆಗಳನ್ನು ಗುರುತಿಸಿ ನೋಟಿಸ್ ನೀಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಬಿಬಿಎಂಪಿ ಒಟ್ಟು 696 ಕಡೆ ಚರಂಡಿ ಒತ್ತುವರಿಯಾಗಿರುವುದನ್ನು ಗುರುತಿಸಿದೆ. ಇದರಲ್ಲಿ ಮಹದೇವಪುರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಂದರೆ 175 ಕಡೆಗಳಲ್ಲಿ ಒತ್ತುವರಿಯಾಗಿದೆ. ಬೆಂಗಳೂರು ಪೂರ್ವ ವಲಯದಲ್ಲಿ 110 ಕಡೆಗಳಲ್ಲಿ ಒತ್ತುವರಿಯಾಗಿದ್ದರೆ, ಪಶ್ಚಿಮ ವಲಯದಲ್ಲಿ 59 ಕಡೆಗಳಲ್ಲಿ, ದಕ್ಷಿಣ ವಲಯದಲ್ಲಿ 20 ಕಡೆಗಳಲ್ಲಿ ಮತ್ತು ದಾಸರಹಳ್ಳಿ ವಲಯದಲ್ಲಿ 126 ಕಡೆಗಳಲ್ಲಿ ಒತ್ತುವರಿಯಾಗಿದೆ ಎಂದು ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದಾರೆ.
ಬಿಬಿಎಂಪಿ ಆಯುಕ್ತರ ಪ್ರಕಾರ, ಜಲಾವೃತ ಪ್ರದೇಶಗಳಲ್ಲಿ ಚರಂಡಿಗಳನ್ನು ಅತಿಕ್ರಮಣ ಮಾಡಿಕೊಂಡಿದ್ದ 32 ಜನರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಶೀಘ್ರದಲ್ಲೇ ಒತ್ತುವರಿಯನ್ನು ತೆರವು ಮಾಡಲಾಗುವುದು, ಮುಂದಿನ ದಿನಗಳಲ್ಲಿ ಮತ್ತೆ ಈ ರೀತಿ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸುವುದಾಗಿ ಬಿಬಿಎಂಪಿ ಹೇಳಿದೆ.

ಒತ್ತುವರಿ ತೆರವು ಕಾರ್ಯಾಚರಣೆ
ಇನ್ನೂ ಸುಮಾರು 500 ಕಡೆಗಳಲ್ಲಿ ಒತ್ತುವರಿ ತೆರವು ಮಾಡುವ ಕಾರ್ಯ ಬಾಕಿ ಇದೆ. ಬಿಬಿಎಂಪಿ ಅಧಿಕಾರಿಗಳು ಅತಿಕ್ರಮಣ ತೆರವು ಪ್ರಕ್ರಿಯೆಯನ್ನು ನೋಡಿಕೊಳ್ಳಲಿದ್ದಾರೆ, ಎಲ್ಲಾ ರೀತಿಯ ಅತಿಕ್ರಮಣ ತೆರವು ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ದೊಡ್ಡ ಬೊಮ್ಮಸಂದ್ರದಲ್ಲಿ ಒತ್ತುವರಿ ತೆರವಿಗೆ ಕಾರ್ಯಾಚರಣೆ ನಡೆದಿದೆ. ಜಿಡಿ ಲೇಔಟ್ ಬಳಿ ಒತ್ತುವರಿ ತೆರವು ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಬೇಗೂರು ಕೆರೆಯ ಸುತ್ತ 81 ಅತಿಕ್ರಮಣ ಪತ್ತೆ
ಬೇಗೂರು ಕೆರೆಯ ಸುತ್ತ 81 ಅತಿಕ್ರಮಣಗಳು ಪತ್ತೆಯಾಗಿವೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕರ್ನಾಟಕ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಬೆಂಗಳೂರು ದಕ್ಷಿಣ ವಿಭಾಗದ ಬಿಬಿಎಂಪಿ ಕಾರ್ಯಪಾಲಕ ಇಂಜಿನಿಯರ್, ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ವಿಭಾಗೀಯ ಪೀಠಕ್ಕೆ ಅಫಿಡವಿಟ್ ಸಲ್ಲಿಸಿದ್ದು, ಜುಲೈ 26, 2022 ರ ನ್ಯಾಯಾಲಯ ಹೊರಡಿಸಿದ ನಿರ್ದೇಶನಗಳ ಪ್ರಕಾರ ಕೆರೆಯ ಒತ್ತುವರಿ ಭಾಗಗಳ ಸಮೀಕ್ಷೆ ಮತ್ತು ಭೌತಿಕ ಗುರುತು ಮಾಡಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.

ಅತಿಕ್ರಮಣದಾರರಿಗೆ ನೋಟಿಸ್ ಕೊಟ್ಟ ಬಿಬಿಎಂಪಿ
ಜುಲೈ 27, 2022 ರಂದು ಅತಿಕ್ರಮಣ ಮಾಡಿಕೊಂಡಿರುವ ಎಲ್ಲರಿಗೂ ನೋಟಿಸ್ ನೀಡಲಾಗಿದೆ ಎಂದು ಅವರು ಹೇಳಿದರು. 81 ಅತಿಕ್ರಮಣದಾರರ ಪೈಕಿ 33 ಅನ್ನು ತೆರವುಗೊಳಿಸಲಾಗಿದೆ, ಅವರು ಕೆಡವಲಾದ ಅನಧಿಕೃತ ನಿರ್ಮಾಣಗಳ ಛಾಯಾಚಿತ್ರಗಳನ್ನು ಸಹ ಸಲ್ಲಿಸಿದರು.
45 ಅತಿಕ್ರಮಣದಾರರು ತಮ್ಮ ಆಸ್ತಿಗಳಿಗೆ ಸಂಬಂಧಿಸಿದಂತೆ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳದಂತೆ ನಿಯೋಜಿತ ಅಧಿಕಾರಿ (ಕಾರ್ಯನಿರ್ವಾಹಕ ಇಂಜಿನಿಯರ್) ವಿರುದ್ಧ ತಡೆಯಾಜ್ಞೆ ಪಡೆದಿದ್ದಾರೆ ಎಂದು ಕಾರ್ಯಪಾಲಕ ಎಂಜಿನಿಯರ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ನಿಷೇಧಾಜ್ಞೆ ಆದೇಶದ ವಿರುದ್ಧವೂ ಆಕ್ಷೇಪಣೆಗಳು ಸಲ್ಲಿಕೆಯಾಗಿವೆ.

ಅಧಿಕಾರಿಗಳಿಗೆ ಸೂಚನೆ ನೀಡಿದ ಸಿಎಂ ಬೊಮ್ಮಾಯಿ
ಮಹದೇವಪುರ, ಬೊಮ್ಮನಹಳ್ಳಿ ಪ್ರದೇಶದಲ್ಲಿ ಒಆರ್ ಆರ್ ರಸ್ತೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಖುದ್ದು ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಒತ್ತುವರಿ ತೆರವು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಚರಂಡಿಗಳನ್ನು ಒತ್ತುವರಿ ಮಾಡಿಕೊಂಡಿರುವುದೇ ರಸ್ತೆಗಳಿಗೆ ನೀರು ನುಗ್ಗಲು ಕಾರಣ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದರು.











Click it and Unblock the Notifications