Tunnel Road: ಬಿಬಿಎಂಪಿಯಿಂದ ಮೊದಲ ಬಾರಿಗೆ ಸುರಂಗ ರಸ್ತೆ ನಿರ್ಮಾಣದ ಯೋಜನೆ, ಉದ್ದ, ವೆಚ್ಚದ ಮಾಹಿತಿ
ಬೆಂಗಳೂರು, ಜನವರಿ 28: ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಇದೇ ಮೊದಲ ಬಾರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ಹೊಸ ಸಾಹಸಕ್ಕೆ ಕೈಹಾಕಿದೆ. ಅದೇನೆಂದರೆ ಸುರಂಗ ಮಾರ್ಗ ನಿರ್ಮಿಸುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಯೋಜನೆ ರೂಪಿಸಿದೆ. ಜತೆಗೆ ಇದಕ್ಕಾಗಿ ಅತ್ಯಧಿಕ ದಟ್ಟಣೆಯ ಮಾರ್ಗವನ್ನು ಸಹ ಆಯ್ಕೆ ಮಾಡಿಕೊಂಡಿದೆ.
ಬಿಬಿಎಂಪಿಯು ಹೆಬ್ಬಾಳದಿಂದ ಮೇಖ್ರಿ ವೃತ್ತದವರೆಗೆ ಮೊದಲ ಹಂತದಲ್ಲಿ ಸುರಂಗ ರಸ್ತೆ ನಿರ್ಮಾಣಕ್ಕೆ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ಈ ಭಾಗದ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಉತ್ತಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವ ಉದ್ದೇಶ ಹೊಂದಿದೆ.

ಈ ಮಾರ್ಗದಲ್ಲಿ ಸ್ಥಳೀಯರು, ವಿದೇಶಿಗರು ಸೇರಿದಂತೆ ಗಣ್ಯರು ಹೆಚ್ಚು ಓಡಾಡುತ್ತಿರುತ್ತಾರೆ. ಇಲ್ಲಿ ಹೆಚ್ಚು ಟ್ರಾಫಿಕ್, ಅತ್ಯಧಿಕ ದಟ್ಟಣೆ ಕಂಡು ಬರುತ್ತದೆ. ಹೀಗಾಗಿ ಇಲ್ಲಿನ ಸಂಚಾರ ದಟ್ಟಣೆಗೆ ಮುಕ್ತಿಕೊಡಲು ಈ ಮಾರ್ಗದಲ್ಲಿ ಮೊದಲ ಹಂತದಲ್ಲಿ ಸುರಂಗ ರಸ್ತೆಗೆ ಪಾಲಿಕೆ ಚಿಂತಿಸಿದೆ.
ಟೆಂಡರ್ ಪಡೆದ ವಿದೇಶಿ ಕಂಪನಿ
ಬೆಂಗಳೂರಿನ ಟ್ರಾಫಿಕ್ ನಿಯಂತ್ರಣಕ್ಕಾಗಿ ಸಮಗ್ರ ರಸ್ತೆ ಮೂಲಸೌಕರ್ಯ ಯೋಜನೆ ರೂಪಿಸಲು ಹಾಗೂ ಆಯ್ದ ಕಾರಿಡಾರ್‌ಗಳಲ್ಲಿ ಸಂಚಾರ ನಿರ್ವಹಣೆಗೆ ಸುರಂಗ, ಗ್ರೇಡ್ ಸೆಪರೇಟರ್, ರಸ್ತೆ ವಿಸ್ತರಣೆ ಕಾಮಗಾರಿ ಕೈಗೊಳ್ಳುವ ಸಂಬಂಧ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿಕೊಡಲು ಪಾಲಿಕೆ ಅಲ್ಪಾವಧಿ ಟೆಂಡರ್ ಆಹ್ವಾನಿಸಿತ್ತು. ಈ ಕಾಮಗಾರಿಗಳನ್ನು ಟರ್ಕಿ ಮೂಲದ ಕಂಪನಿ ಗುತ್ತಿಗೆ ಪಡೆದಿದೆ.
ಒಂದು ವರದಿ ಸಲ್ಲಿಸಿದ ಕಂಪನಿ
ಹೈಡೆನ್ಸಿಟಿ ಕಾರಿಡಾರ್ ನಿರ್ಮಾಣ, ಯೋಜನೆ ಅನುಷ್ಠಾನ ಸಾಧ್ಯವೇ ಇಲ್ಲವೇ ಎಂಬುದರ ಬಗ್ಗೆ ಈ ಕಂಪನಿ ವರದಿ ಸಲ್ಲಿಸಲಿದೆ. ಸದ್ಯ ತನ್ನ ಮಧ್ಯಂತರ ವರದಿಯಲ್ಲಿ ಮೇಖ್ರಿ ವೃತ್ತದಿಂದ ಹೆಬ್ಬಾಳವರೆಗೆ ಸುರಂಗ ರಸ್ತೆ ನಿರ್ಮಿಸಬಹುದೆಂದು ಉಲ್ಲೇಖಿಸಿದೆ.
ಬೆಂಗಳೂರಿನ ಟ್ರಾಫಿಕ್ ನಿವಾರಣೆಗೆ ಸರ್ಕಾರ ಹಿಂದಿನಿಂದಲೂ ಗ್ರೇಡ್ ಸಪರೇಟರ್, ಮೆಟ್ರೋಗೆ ಆದ್ಯತೆ, ಮೇಲ್ಸೇತುವೆ ಯಂತಹ ಯೋಜನೆಗಳನ್ನು ರೂಪಿಸುತ್ತಲೆ ಇದೆ. ಆದರೆ ಹೆಚ್ಚುತ್ತಿರುವ ದಟ್ಟಣೆಯ ಪರಿಣಾಮ ಹೊಸ ಹೊಸ ಯೋಜನೆ ರೂಪಿಸುವುದು ಸರ್ಕಾರಕ್ಕೆ ಅಗತ್ಯವಾಗಿದೆ.

ಸುರಂಗ ರಸ್ತೆಯ ವೆಚ್ಚ, ಉದ್ದದ ಮಾಹಿತಿ
ಇದೆಲ್ಲ ಗಮನದಲ್ಲಿಟ್ಟುಕೊಂಡು ಬಿಬಿಎಂಪಿ ಮೇಖ್ರಿ ವೃತ್ತದಿಂದ ಹೆಬ್ಬಾಳವರೆಗೆ ಮೂರು ಕಿಲೋ ಮೀಟರ್ ಸುರಂಗ ರಸ್ತೆ ನಿರ್ಮಿಸಲಿದೆ. ಇದೆಲ್ಲ ಸಾಧ್ಯವಾದರೆ, ಯಾವುದೇ ತೊಂದರೆ, ಸಂಚಾರ ಸಮಸ್ಯೆ ಎದುರಾಗದಿದ್ದರೆ ಇದೇ ರಸ್ತೆಯನ್ನು ಸಿಲ್ಕ ಬೋರ್ಡ್ ವರೆಗೆ ವಿಸ್ತರಣೆ ಮಾಡುವ ಉದ್ದೇಶವು ಪಾಲಿಕೆಯದ್ದಾಗಿದೆ.
ಟ್ರಾಫಿಕ್ ಕಡಿಮೆ ಮಾಡಲು ಬಿಬಿಎಂಪಿ ಉದ್ದೇಶಿತ ಈ ಮೂರು ಕಿಮೀ ಸುರಂಗ ಮಾರ್ಗ ನಿರ್ಮಾಣಕ್ಕೆ ಪ್ರತಿ ಕಿಲೋ ಮೀಟರ್‌ಗೆ 500 ಕೋಟಿ ರೂ.ನಂತೆ ಒಂದೂವರೆ ಸಾವಿರ ಕೋಟಿ ರೂಪಾಯಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಇದು ದ್ವಿಮುಖ ರಸ್ತೆಯಾಗಿರಲಿದ್ದು, ಒಟ್ಟು ನಾಲ್ಕು ಲೈನ್ ಒಳಗೊಂಡಿಲಿದೆ ಎಂದು ಪಾಲಿಕೆ ಮೂಲಗಳು ಮಾಹಿತಿ ನೀಡಿವೆ.
ಈ ಹಿಂದೆ ಸರ್ಕಾರ ಬೃಹತ್ ಸುರಂಗ ರಸ್ತೆ ನಿರ್ಮಾಣಕ್ಕೆ ಕೈ ಹಾಕಿತ್ತು. ಆದರೆ ಆ ಯೋಜನೆಗೆ ತಜ್ಞರ ಸಹಮತ ಸಿಗಲಿಲ್ಲ. ಇದೀಗ ಮೂರು ಕಿಮೀಯ ಸುರಂಗಕ್ಕೆ ಪಾಲಿಕೆ ಸಜ್ಜಾಗಿದೆ. ಎಲ್ಲವು ಅಂದುಕೊಂಡಂತಾದರೆ ಭವಿಷ್ಯ ಹೆಬ್ಬಾಳ ಜಂಕ್ಷನ್ ನಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಬರುವ ಸಾಧ್ಯತೆ ಇದೆ.












Click it and Unblock the Notifications