ನಿಷೇಧಿತ ಪ್ಲಾಸ್ಟಿಕ್ ಬಳಕೆ : ಐದು ತಿಂಗಳುಗಳಲ್ಲಿ 75 ಲಕ್ಷ ರೂ ದಂಡ ವಸೂಲಿ ಮಾಡಿದ ಬಿಬಿಎಂಪಿ!
ಬೆಂಗಳೂರು, ಡಿಸೆಂಬರ್ 10 : ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧಿಸಿದ ಹಿನ್ನಲೆಯಲ್ಲಿ ಎಚ್ಚೆತ್ತುಗೊಂಡಿರುವ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಕಳೆದ ಜುಲೈ ತಿಂಗಳಿನಿಂದ ನವೆಂಬರ್‌ವರೆಗೆ ದಾಖಲೆ ಮೊತ್ತದ ದಂಡವನ್ನು ವಸೂಲಿ ಮಾಡಿದ್ದಾರೆ.
ನಿಷೇಧಿತ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟ ಮಾಡುತ್ತಿದ್ದ ಅಂಗಡಿ ಮುಗ್ಗಟ್ಟುಗಳ ಮೇಲೆ ದಾಳಿ ನಡೆಸಿದ ಬಿಬಿಎಂಪಿ ಅಧಿಕಾರಿಗಳು ಕೇವಲ ಐದು ತಿಂಗಳುಗಳಲ್ಲಿ 26,000ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸುವುದರೊಂದಿಗೆ 75 ಲಕ್ಷ ರೂಪಾಯಿ ದಂಡ ವಸೂಲಿ ಮಾಡಿ ಪ್ಲಾಸ್ಟಿಕ್ ಬಳಕೆ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಪಾಲಿಕೆಯ ಮುಖ್ಯಾಧಿಕಾರಿ ರಾಜಬೀರ್ ಸಿಂಗ್ ಅವರು ಮಾತನಾಡಿ, ಪಾಲಿಕೆಯ ಮಾರ್ಷಲ್ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳ ಸಹಯೋಗದೊಂದಿಗೆ ವಿವಿಧ ವಾರ್ಡ್‌ಗಳಲ್ಲಿ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸುವ ಮೂಲಕ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗುತ್ತಿದ್ದು, ಬಳಕೆದಾರರಿಗಿಂತ ಪ್ಲಾಸ್ಟಿಕ್ ಉತ್ಪಾದಕ ಘಟಕಗಳ ಮೇಲೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಕಂದಾಯ ಅಧಿಕಾರಿ,ವೈದ್ಯಕೀಯ ಅಧಿಕಾರಿ ಮತ್ತು ಮಾರ್ಷಲ್ ಒಳಗೊಂಡ ತಂಡದ ಮೂಲಕ ನಿಷೇಧಿತ ಪ್ಲಾಸ್ಟಿಕ್ ಸಂಗ್ರಹಿಸಿಟ್ಟುಕೊಂಡಿರುವ ಗೋದಾಮುಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಈ ತಂಡವು ದಾಳಿ ವೇಳೆ ಲಭ್ಯವಾದ ನಿಷೇಧಿತ ಪ್ಲಾಸ್ಟಿಕ್ ತೂಕದ ಮೇಲೆ ದಂಡವನ್ನು ವಿಧಿಸಲಾಗುತ್ತಿದೆ. ಮೊದಲ ಬಾರಿ 100 ರಿಂದ 200 ರೂ ವರಗೆ ದಂಡ ವಿಧಿಸಲಾಗುತ್ತಿದ್ದು, ಅದೇ ವ್ಯಕ್ತಿ ಮತ್ತೇ ಸಿಕ್ಕಿ ಬಿದ್ದಲ್ಲಿ ದಂಡವನ್ನು ದ್ವಿಗುಣಗೊಳಿಸಲಾಗುವುದು ಎಂದು ಸಿಂಗ್ ಹೇಳಿದರು.
23,649 ಕೆಜಿ ಪ್ಲಾಸ್ಟಿಕ್ ವಶ !
ಪಾಲಿಕೆ ವ್ಯಾಪ್ತಿಯಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಕಳೆದ ಐದು ತಿಂಗಳುಗಳಲ್ಲಿ ಒಟ್ಟು 23,649 ಕೆ.ಜಿ ತೂಕದ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದಾರೆ. ಜುಲೈನಲ್ಲಿ 11,127, ಅಗಸ್ಟ್‌ನಲ್ಲಿ 7,093, ಸೆಪ್ಟಂಬರ್‌ನಲ್ಲಿ 648, ಅಕ್ಟೋಬರ್‌ನಲ್ಲಿ 2,887 ಮತ್ತು ನವೆಂಬರ್‌ನಲ್ಲಿ 1,848 ಕೆ.ಜಿ ತೂಕದ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗಿದೆ.

ಜಾಗೃತೆಯ ಕೊರತೆ:
ಅಧಿಕಾರಿಗಳು ಕೇವಲ ದಾಳಿ ನಡೆಸಿ ಪ್ಲಾಸ್ಟಿಕ್ ವಶಪಡಿಸಿಕೊಂಡು ದಂಡ ವಿಧಿಸುತ್ತಿದ್ದಾರೆ ಹೊರತು ಪ್ಲಾಸ್ಟಿಕ್ ಬಳಕೆಯ ಮಾರಕ ಪರಿಣಾಮಗಳ ಕುರಿತ ಜಾಗೃತಿ ಮೂಡಿಸುವ ಕೆಲಸವು ಆಗಬೇಕಿದೆ. ಸಾರ್ವಜನಿಕ ಸ್ಥಳಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಕೆಲಸವೂ ಆಗಬೇಕು ಎನ್ನುವುದು ಜನರ ಆಶಯವಾಗಿದೆ.
ಹೀಗೆ ಮೇಲಿಂದ ಮೇಲೆ ಬಳಕೆ ಮತ್ತು ಮಾರಾಟ ಮಾಡುತ್ತಿರುವ ಅಂಗಡಿಗಳ ಮೇಲೆ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಳ್ಳುವ ಬದಲು ಪ್ಲಾಸ್ಟಿಕ್ ಉತ್ಪಾದನೆಯನ್ನೇ ಬಂದ್ ಮಾಡುವುದರಿಂದ ಮುಂಬರುವ ಪೀಳಿಗೆಗೆ ಒಳ್ಳೆಯದಾಗಲಿದೆ ಎನ್ನುವುದು ಜನರ ಆಶಯವಾಗಿದೆ.












Click it and Unblock the Notifications