Ganesha Chaturthi : ಗಣೇಶ ನಿಮಜ್ಜನ ಸುರಕ್ಷತೆಗಾಗಿ 80 ಈಜುಗಾರರನ್ನು ನೇಮಿಸಿದ ಬಿಬಿಎಂಪಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗಣೇಶ ಮೂರ್ತಿ ನಿಮಜ್ಜನಕ್ಕೆ ನಗರದಾದ್ಯಂತ ಇರುವ ಕಲ್ಯಾಣಿಗಳಲ್ಲಿ (ವಿಗ್ರಹ ನಿಮಜ್ಜನ ತೊಟ್ಟಿಗಳು) ಶನಿವಾರ 80 ಈಜುಗಾರರನ್ನು ನಿಯೋಜಿಸಲಿದೆ. ಉತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳು ವರದಿಯಾಗದಂತೆ ಬಿಬಿಎಂಪಿ ಈ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಹಲಸೂರು, ಹೆಬ್ಬಾಳ, ಯಡಿಯೂರು, ಸ್ಯಾಂಕಿ ಸೇರಿದಂತೆ 39 ಕಲ್ಯಾಣಿಗಳಲ್ಲಿ ಸೆಪ್ಟೆಂಬರ್ 18ರಿಂದ ನಿಮಜ್ಜನ ಆರಂಭವಾಗಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ವಿಗ್ರಹ ನಿಮಜ್ಜನಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಖಚಿತಪಡಿಸಿಕೊಳ್ಳಲು, ಬಿಬಿಎಂಪಿ ಅಧಿಕಾರಿಗಳು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುತ್ತಿದ್ದಾರೆ ಮತ್ತು ಸಾರ್ವಜನಿಕರಿಗೆ ಬ್ಯಾರಿಕೇಡ್‌ಗಳನ್ನು ಹಾಕುವ ಜೊತೆಗೆ ಇತರ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ಬಿಬಿಎಂಪಿ 418 ಮೊಬೈಲ್ ಇಮ್ಮರ್ಶನ್ ಟ್ಯಾಂಕರ್‌ಗಳನ್ನು ಆಯಕಟ್ಟಿನ ವಸತಿ ಸ್ಥಳಗಳಲ್ಲಿ ಇರಿಸಲಾಗುವುದು ಮತ್ತು ನಾಗರಿಕರ ಅನುಕೂಲಕ್ಕಾಗಿ ಎಲ್ಲಾ 27 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಂತೆ ನಗರದಾದ್ಯಂತ ಸಂಚರಿಸಲಿದ್ದು ಅಲ್ಲಿಯೇ ಗಣೇಶನನ್ನು ನೀರಿಗೆ ಬಿಡಬಹುದಾಗಿದೆ.
ಮಣ್ಣಿನ ಗಣೇಶಮೂರ್ತಿಗಳಿಗೆ ಅವಕಾಶ
ಪಾಲಿಕೆಯ ನಿರ್ದೇಶನದಂತೆ 5 ಇಂಚುಗಳಿಂದ 3 ಅಡಿ ಎತ್ತರದವರೆಗಿನ ಎಲ್ಲಾ ಮಣ್ಣಿನ ಗಣೇಶ ಮೂರ್ತಿಗಳನ್ನು ಮೊಬೈಲ್ ನಿಮಜ್ಜನ ಟ್ಯಾಂಕರ್‌ಗಳಲ್ಲಿ ನಿಮಜ್ಜನಗೊಳಿಸಬೇಕು. ಪಿಒಪಿ ಗಣೇಶ ಮೂರ್ತಿಗಳನ್ನು ಮಾರಿದರೆ ಕಠಿಣ ಕ್ರಮ ತೆಗೆದುಕೊಳ್ಳಲು ಬಿಬಿಎಂಪಿ ಅಧಿಕಾರಿಗಳು ಸ್ಥಳಗಳನ್ನು ಪರಿಶೀಲಿಸುತ್ತಿದ್ದಾರೆ.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು 63 ಉಪ ವಿಭಾಗಗಳಿಂದ ಗಣೇಶ ಮಂಟಪಗಳಿಗೆ ಸಾರ್ವಜನಿಕರು ಅನುಮತಿ ಪಡೆಯುವಂತೆ ಆದೇಶಿಸಿದ್ದು, ಸಿಂಗಲ್ ವಿಂಡೋ ಕ್ಲಿಯರೆನ್ಸ್ ವ್ಯವಸ್ಥೆಯಡಿ ಅನುಮತಿ ನೀಡಲಾಗುವುದು ಎಂದು ಹೇಳಿದ್ದಾರೆ.
ಗಣೇಶನ ಕೂರಿಸಲು ಹಲವು ನಿಯಮಗಳು
ಗಣೇಶನ ಮೂರ್ತಿ ಸ್ಥಾಪನೆ ಮಾಡಲು ಪೊಲೀಸರು ಕಠಿಣ ಕ್ರಮಗಳನ್ನು ರೂಪಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಸ್ಥಾಪನೆ ಮಾಡಲು ಸ್ಥಳೀಯ ಪೊಲೀಸ್ ಠಾಣೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಗಣೇಶನನ್ನು ಕೂರಿಸಲು ಕಾನೂನು ಬಾಹಿರವಾಗಿ ಹಣ ಸಂಗ್ರಹಿಸುವಂತಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಚಪ್ಪರ, ಶಾಮಿಯಾನ, ಪೆಂಡಾಲ್ ಹಾಕಲು ವಿಶೇಷ ಅನುಮತಿ ಪಡೆಯುವುದು ಕಡ್ಡಾಯ. ವಿವಾದಿತ ಜಾಗದಲ್ಲಿ ಕೂಡ ಗಣೇಶನ ಮೂರ್ತಿ ಸ್ಥಾಪನೆ ಮಾಡುವಂತಿಲ್ಲ. ಗಣೇಶ ಮೂರ್ತಿ ವೇಳೆ ಯಾವುದೇ ಅಹಿತಕರ ಘಟನೆ ನಡೆದರೂ ಅದಕ್ಕೇ ಸಂಘಟಕರನ್ನೇ ನೇರ ಹೊಣೆ ಮಾಡಲಾಗುತ್ತದೆ. ಕಾರ್ಯಕ್ರಮ ನಡೆಸುವ ಜಾಗದಲ್ಲಿ ಬೆಂಕಿನಂದಿಸುವ ಸಾಮಗ್ರಿ, ಸಿಸಿಟಿವಿ ಸೇರಿದಂತೆ ಸುರಕ್ಷತಾ ಕ್ರಮಗಳನ್ನು ವಹಿಸುವುದು ಕಡ್ಡಾಯವಾಗಿರುತ್ತದೆ.
ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಮಾತ್ರ ಧ್ವನಿವರ್ಧಕ ಬಳಸಲು ಅವಕಾಶ ಇರುತ್ತದೆ. ಗಣೇಶ ಮೂರ್ತಿ ಸ್ಥಾಪನೆ ಜಾಗಕ್ಕೆ ವಿದ್ಯುತ್ ಸಂಪರ್ಕ ಬೇಕಾದರೆ ಬೆಸ್ಕಾಂ ಮತ್ತು ಅಗ್ನಿ ಶಾಮಕ ಇಲಾಖೆಯಿಂದ ಎನ್‌ಒಸಿ ಪಡೆಯುವುದು ಕಡ್ಡಾಯವಾಗಿದೆ.












Click it and Unblock the Notifications