ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಚುನಾವಣೆ : ಮತ ಹಾಕಲು ಬೆಂಗಳೂರಿಗರಿಗೆ ಏನಾಗಿದೆ?

|
Google Oneindia Kannada News

ಬೆಂಗಳೂರು, ಆಗಸ್ಟ್ 22 : ಉದ್ಯಾನ ನಗರಿ ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಮತದಾನ ಮುಕ್ತಾಯಗೊಂಡಿದೆ. 197 ವಾರ್ಡ್‌ಗಳಿಗೆ ಚುನಾವಣೆ ನಡೆದಿದ್ದು ಸಂಜೆ 5 ಗಂಟೆ ವೇಳೆಗೆ ಲಭ್ಯವಾದ ಮಾಹಿತಿಯಂತೆ ಶೇ 38ರಷ್ಟು ಮತದಾನವಾಗಿದೆ. [ಬಿಬಿಎಂಪಿ ಚುನಾವಣೆ : ಮತದಾನದ ಚಿತ್ರಗಳು]

ಶನಿವಾರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭಗೊಂಡಿತ್ತು. ಸಂಜೆ 5 ಗಂಟೆಯ ತನಕ ಮತದಾನ ಮಾಡಲು ಅವಕಾಶವಿತ್ತು. ಆದರೆ, ಜನರು ಚುನಾವಣೆ ಬಗ್ಗೆ ನೀರಸ ಪ್ರತಿಕ್ರಿಯೆ ಕೊಟ್ಟಿದ್ದು ಮತ ಕೇಂದ್ರ ಸಂಪೂರ್ಣ ಖಾಲಿ-ಖಾಲಿ ಇತ್ತು. 6,759 ಮತಗಟ್ಟೆಗಳನ್ನು ತೆರೆಯಲಾಗಿತ್ತು. ಜನರು ಕಡಿಮೆ ಇದ್ದ ಕಾರಣ ಪೊಲೀಸರು ಕೆಲಸವೂ ಕಡಿಮೆ ಇತ್ತು. [ಈ ಗುರುತಿನ ಚೀಟಿ ತೋರಿಸಿ ಮತದಾನ ಮಾಡಬಹುದು]

ಬಿಜೆಪಿಯ 197, ಕಾಂಗ್ರೆಸ್‌ನ 197, ಜೆಡಿಎಸ್‌ನ 187, ಬಿಎಸ್‌ಪಿಯ 34, ಎಐಎಡಿಎಂಕೆಯ 7, 399 ಪಕ್ಷೇತರರು ಸೇರಿದಂತೆ ಒಟ್ಟು 1,121 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿದ್ದು, ಆ.25ರ ಮಂಗಳವಾರ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಇಂದು ನಡೆದ ಮತದಾನದ ಕ್ಷಣ-ಕ್ಷಣದ ಮಾಹಿತಿ ಇಲ್ಲಿದೆ...... [ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದ್ಯಾ? ಪರೀಕ್ಷಿಸಿ]

bbmp polls

ಸಮಯ 5.30 : ಸಂಜೆ 5.30ಕ್ಕೆ ಲಭ್ಯವಾದ ಮಾಹಿತಿ ಪ್ರಕಾರ ಬಿಬಿಎಂಪಿ ಚುನಾವಣೆಯಲ್ಲಿ ಶೇ 38ರಷ್ಟು ಮತದಾನವಾಗಿದೆ.

ಸಮಯ 5 ಗಂಟೆ : 197 ವಾರ್ಡ್‌ಗಳಿಗೆ ನಡೆದ ಮತದಾನ ನಿಗದಿಯಂತೆ 5 ಗಂಟೆಗೆ ಮುಕ್ತಾಯಗೊಂಡಿದೆ. ಸರದಿ ಸಾಲಿನಲ್ಲಿ ನಿಂತವರಿಗೆ ಮತಹಾಕಲು ಅವಕಾಶ ನೀಡಲಾಗಿದೆ. ಬೆಂಗಳೂರಿನ ಜನರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. [ಮತದಾನ ಮಾಡಿದ ಗಣ್ಯರ ಚಿತ್ರಗಳು]

ಸಮಯ 4.31 : ಜಯನಗರ, ಬಸವೇಶ್ವರ ನಗರ ಸೇರಿದಂತೆ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಮಳೆ ಆರಂಭವಾಗಿದ್ದು ಮತದಾನಕ್ಕೆ ಮತ್ತೆ ತೊಂದರೆ ಉಂಟಾಗಿದೆ.

ಸಮಯ 4 ಗಂಟೆ : ಮಧ್ಯಾಹ್ನ 3.30ಕ್ಕೆ ಲಭ್ಯವಾದ ಮಾಹಿತಿಯಂತೆ ಶೇ 25.17ರಷ್ಟು ಮತದಾನ ನಡೆದಿದೆ.

ಸಮಯ 3.30 : 'ನೀವು ಬನ್ನಿ ನಿಮ್ಮ ಅಕ್ಕ-ಪಕ್ಕದ ಮನೆಯವರನ್ನೂ ತಪ್ಪದೇ ಮತದಾನ ಮಾಡಲು ಕರೆದುಕೊಂಡು ಬನ್ನಿ' ಎಂದು ಬಿಬಿಎಂಪಿ ಆಯುಕ್ತ ಜಿ.ಕುಮಾರ್ ನಾಯಕ್ ಬೆಂಗಳೂರಿಗೆ ಕರೆ ನೀಡಿದ್ದಾರೆ. ಮತದಾನ ಪ್ರಮಾಣ ಕಡಿಮೆಯಾಗಿರುವುದಕ್ಕೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಸಮಯ 3.15 : ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಜ್ಞಾನಭಾರತಿ ವಾರ್ಡ್ (129) ನಲ್ಲಿ ಮತದಾನ ಆರಂಭ. ಬೆಳಗ್ಗೆಯಿಂದ ಮತದಾನ ಬಹಿಷ್ಕಾರ ಮಾಡಿದ್ದ ಗ್ರಾಮಸ್ಥರು.

ಸಮಯ 2 ಗಂಟೆ : ಹೃದಯಾಘಾತದಿಂದ ಮತದಾರರೊಬ್ಬರು ಮೃತಪಟ್ಟ ಘಟನೆ ವೃಷಭಾವತಿನಗರ ವಾರ್ಡ್‍ನಲ್ಲಿ ನಡೆದಿದೆ.
ಮೃತಪಟ್ಟವರನ್ನು ನಾರಾಯಣಪ್ಪ (75) ಎಂದು ಗುರುತಿಸಲಾಗಿದೆ. ಕುಟುಂಬ ಸಮೇತರಾಗಿ ನಾರಾಯಣಪ್ಪ ಅವರು ಮತಚಲಾಯಿಸಲು ಬಂದಿದ್ದರು.

ಸಮಯ 1.30 : ಮಧ್ಯಾಹ್ನ 1.30ರ ತನಕ ಶೇ 21ರಷ್ಟು ಮತದಾನವಾಗಿದೆ.

ಸಮಯ 1 ಗಂಟೆ : ಮಧ್ಯಾಹ್ನ 1 ಗಂಟೆಯ ತನಕ ಶೇಕಡಾ 13.57ರಷ್ಟು ಮತದಾನವಾಗಿದೆ. ಬೆಂಗಳೂರು ಸೆಂಟ್ರಲ್‌ನಲ್ಲಿ ಶೇ 13.28ರಷ್ಟು, ಬೆಂಗಳೂರು ಉತ್ತರದಲ್ಲಿ 11.34ರಷ್ಟು ಮತ್ತು ಬೆಂಗಳೂರು ದಕ್ಷಿಣದಲ್ಲಿ ಶೇ 14.89ರಷ್ಟು ಮತದಾನವಾಗಿದೆ.

ಸಮಯ 12.40 : ಕತ್ರಿಗುಪ್ಪೆ ವಾರ್ಡ್‌ನಲ್ಲಿ ನಟ, ನಿರ್ದೇಶಕ ಉಪೇಂದ್ರ ಪತ್ನಿ ಪ್ರಿಯಾಂಕ ಉಪೇಂದ್ರ ಅವರ ಜೊತೆ ಹಕ್ಕು ಚಲಾವಣೆ ಮಾಡಿದರು

ಸಮಯ 12.20 : ಬಸವೇಶ್ವರ ನಗರದಲ್ಲಿ 90 ವರ್ಷದ ವೃದ್ಧೆ ಮತದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ವೆಳ್ಳಿಯಮ್ಮ ಎಂಬುವವರು ಇತರರ ಸಹಾಯದಿಂದ ಬೂತ್‌ಗೆ ಬಂದು ಹಕ್ಕು ಚಲಾಯಿಸಿದರು

ns megarik

ಸಮಯ 12.10 : ಮಧ್ಯಾಹ್ನ 12 ಗಂಟೆಯ ತನಕ ಶೇಕಡಾ 10.80ರಷ್ಟು ಮತದಾನವಾಗಿದೆ. ಬೆಂಗಳೂರು ಸೆಂಟ್ರಲ್‌ನಲ್ಲಿ ಶೇ 11.35ರಷ್ಟು, ಬೆಂಗಳೂರು ಉತ್ತರದಲ್ಲಿ 10.46ರಷ್ಟು ಮತ್ತು ಬೆಂಗಳೂರು ದಕ್ಷಿಣದಲ್ಲಿ ಶೇ 12.71ರಷ್ಟು ಮತದಾನವಾಗಿದೆ.

ಸಮಯ 12 ಗಂಟೆ : ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬಾವುಟ, ಚಿಹ್ನೆ ಮುಚ್ಚಿಲ್ಲ ಎಂದು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಚೇರಿ ಸಮೀಪ ಮತಗಟ್ಟೆ ಇದೆ. ಬಾವುಟ, ಚಿಹ್ನೆ ಮುಚ್ಚುವಂತೆ ಹೈಕೋರ್ಟ್ ಆದೇಶ ನೀಡಿದೆ. ಆದರೆ, ಬಿಜೆಪಿ ಈ ಆದೇಶವನ್ನು ಉಲ್ಲಂಘನೆ ಮಾಡಿ ನ್ಯಾಯಾಂಗ ನಿಂದನೆ ಮಾಡಿದೆ ಎಂದು ಕಾರ್ಯಕರ್ತರು ಹೇಳಿದ್ದಾರೆ.

ಸಮಯ 11.30 : ಮತದಾನದ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಇಂದು ವಿದ್ಯುತ್ ವ್ಯತ್ಯಯವಿಲ್ಲ

ಸಮಯ 11.10 : ಬೆಳಗ್ಗೆ 11 ಗಂಟೆಯ ತನಕ 8.57 ರಷ್ಟು ಮತದಾನವಾಗಿದೆ.


ಸಮಯ 10.30 : ವಾರ್ಡ್ ಸಂಖ್ಯೆ 3ರ ಮತಗಟ್ಟೆ ಬಳಿ ಗದ್ದಲ ಮಾಡುತ್ತಿದ್ದ ಮೂವರನ್ನು ಯಲಹಂಕ ಉಪನಗರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಸಮಯ 10 ಗಂಟೆ : ಬೆಂಗಳೂರು ನಗರ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ, ವಿಧಾನಪರಿಷತ್ ಸದಸ್ಯೆ ತಾರಾ, ಸಂಸದ ಪಿ.ಸಿ.ಮೋಹನ್, ನಟ ಜಗ್ಗೇಶ್ ಮುಂತಾದವರು ತಮ್ಮ ಹಕ್ಕು ಚಲಾಯಿಸಿದರು.

samyutha hornad

ಸಮಯ 9.40 : ಬೆಳಗ್ಗೆ 9 ಗಂಟೆಯ ತನಕ ಶೇ 3.5ರಷ್ಟು ಮತದಾನವಾಗಿದೆ.

ಸಮಯ 9.30 : ಮತದಾನ ಮಾಡಲು ತೆರಳುತ್ತಿದ್ದ 22 ವರ್ಷದ ಫಯಾಜ್ ಎಂಬ ಯುವಕ ಸಾವನ್ನಪ್ಪಿರುವ ಘಟನೆ ಶಿವಾಜಿನಗರದ ಜೂನಿಯರ್ ಕಾಲೇಜು ಬಳಿ ನಡೆದಿದೆ. ಮರದ ಕೊಂಬೆ ತಲೆ ಮೇಲೆ ಬಿದ್ದಿ ಫಯಾಜ್ ಮೃತಪಟ್ಟಿದ್ದು, ಶವವನ್ನು ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ.

ಸಮಯ 9.20 : ವಸಂತ ನಗರ ವಾರ್ಡ್‌ನ ಮೌಂಟ್ ಕಾರ್ಮಲ್ ಕಾಲೇಜು ಮತಗಟ್ಟೆಯಲ್ಲಿ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗಡೆ ಮತದಾನ ಮಾಡಿದರು.

ಸಮಯ 9 ಗಂಟೆ : ಮೂಲಸೌಕರ್ಯ ಅಭಿವೃದ್ಧಿ ಆಗಿಲ್ಲ ಎಂದು ಆರೋಪಿಸಿ ವೀರನ ಪಾಳ್ಯದ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದ್ದಾರೆ. ಜ್ಞಾನಭಾರತಿ ವಾರ್ಡ್‌ (129) ವ್ಯಾಪ್ತಿಗೆ ಬರುವ ವೀರನ ಪಾಳ್ಯದಲ್ಲಿ 600 ಮತದಾರರಿದ್ದಾರೆ.

poll

ಸಮಯ 8.40 : ಮತದಾರರಿಗೆ ಹಣ ಹಂಚುತ್ತಿದ್ದ ಆರೋಪದ ಮೇಲೆ ಜೆ.ಪಿ.ಪಾರ್ಕ್ ವಾರ್ಡ್ ಜೆಡಿಎಸ್ ಅಭ್ಯರ್ಥಿ ವರಲಕ್ಷ್ಮೀ ಗಂಗಣ್ಣ ಅವರ ಪತಿ ಗಂಗಣ್ಣ ಅವರನ್ನು ಪೊಲೀಸರು ಬಂಧಿಸಿದ್ದಾರೆ. [ಜೆಡಿಎಸ್ ಅಭ್ಯರ್ಥಿ ಪತಿ ಬಂಧನ]

ಸಮಯ 8.21 : ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ವಾರ್ಡ್ 45ರ ಕೇಂದ್ರಿಯ ವಿದ್ಯಾಲಯದಲ್ಲಿ ಹಕ್ಕು ಚಲಾಯಿಸಿದರು. [ಹಲೋ ಬೆಂಗಳೂರು. ಫಸ್ಟ್ ಓಟು ಮಾಡು, ಆಮೇಲೆ ಮಾತಾಡು!]

ಸಮಯ 8.10 : ಮತದಾನ ಆರಂಭವಾಗಿ ಒಂದು ಗಂಟೆ ಕಳೆದರೂ ಜೆಸಿನಗರದ ವಾರ್ಡ್‌ನಂ 46ರ ಬೂತ್ ನಂಬರ್ 26ರಲ್ಲಿ ಮತದಾನ ಆರಂಭವಾಗಿಲ್ಲ. ಇವಿಎಂ ಕೈಕೊಟ್ಟ ಹಿನ್ನಲೆಯಲ್ಲಿ ಮತದಾನ ವಿಳಂಬವಾಗಿದ್ದು, ಜನರು ಸರದಿ ಸಾಲಿನಲ್ಲಿ ಕಾಯುತ್ತಿದ್ದಾರೆ.

ಸಮಯ 8 ಗಂಟೆ : ಬೆಂಗಳೂರಿನ ಒಟ್ಟು ಮತದಾರರ ಸಂಖ್ಯೆ ಒಟ್ಟು ಮತದಾರರು 73,88,256. ಪುರುಷ ಮತದಾರರು 38,76,244. ಮಹಿಳಾ ಮತದಾರರು 35,10,828

bbmp

ಸಮಯ 07.50 : ಜೀವನ್ ಭೀಮಾನಗರ ಪೊಲೀಸರು ಜೆಡಿಎಸ್ ಅಭ್ಯರ್ಥಿ ಬೆಂಬಲಿಗರ ಮೇಲೆ ದೌರ್ಜನ್ಯ ಮಾಡಿದ್ದಾರೆ ಎಂದು ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಆರೋಪಿಸಿದರು. ವಾರ್ಡ್‌ ನಂಬರ್ 88ರ ಜೆಡಿಎಸ್ ಅಭ್ಯರ್ಥಿ ಆಯೇಷಾ ಬೇಗಂ ಬೆಂಬಲಿಗರನ್ನು ಬಂಧಿಸಿ ರಾತ್ರಿಯಿಂದ ಪೊಲೀಸ್ ಠಾಣೆಯಲ್ಲಿ ಇಟ್ಟುಕೊಂಡಿದ್ದಾರೆ. ಸ್ವತಃ ದೇವೇಗೌಡರು ಈಗ ಪೊಲೀಸ್ ಠಾಣೆಗೆ ತೆರಳಿದ್ದಾರೆ.

ಸಮಯ 07.42 : ಕಾಮಾಕ್ಷಿಪಾಳ್ಯದ ವಾರ್ಡ್‌ನಂ 101ರಲ್ಲಿನ ಸೆಂಟ್ ಮೀರಾಸ್ ಶಾಲೆಯಲ್ಲಿ ಮಾಜಿ ಸಚಿವ ಸುರೇಶ್ ಕುಮಾರ್ ಕುಟುಂಬದವರೊಂದಿಗೆ ಬಂದು ಮತದಾನ ಮಾಡಿದರು.

suresh kumar

ಸಮಯ 07.37 : ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪೂರ್ವಪ್ರಜ್ಞಾ ಶಿಕ್ಷಣ ಕೇಂದ್ರದಲ್ಲಿ ನಟ ಪುನೀತ್ ರಾಜ್ ಕುಮಾರ್ ತಮ್ಮ ಹಕ್ಕು ಚಲಾಯಿಸಿದರು.

ಸಮಯ 7.20 : ಚಾಮರಾಜಪೇಟೆಯ 1, ಜೀವನ್ ಭೀಮಾ ನಗರ 2 ಬೂತ್‌ಗಳಲ್ಲಿ ಇವಿಎಂನಲ್ಲಿನ ತೊಂದರೆಯಿಂದಾಗಿ ಮತದಾನ ವಿಳಂಬವಾಗಿದೆ. ಮತದಾನ ಮಾಡಲು ಬಂದ ಜನರು ಸರದಿ ಸಾಲಿನಲ್ಲಿ ಕಾಯುತ್ತಿದ್ದಾರೆ.

ಸಮಯ 07.10 : ತಾರಾ ಪ್ರಚಾರಕರಂತೆ ತಾರಾ ಮತಗಟ್ಟೆ ಅಧಿಕಾರಿಗಳನ್ನು ನೇಮಿಸಲಾಗಿದೆ. ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಬಂದರೆ ತಾರಾ ಅಧಿಕಾರಿಗಳನ್ನು ನೋಡಬಹುದು. ಅಂತರರಾಷ್ಟ್ರೀಯ ಹಾಕಿ ಆಟಗಾರ ಸಿ.ಎಸ್‌. ಪೂಣಚ್ಚ ಹಾಗೂ ಅಥ್ಲೀಟ್‌ ಆಗಿರುವ ಅವರ ಪತ್ನಿ ಸವಿತಾ ಪೂಣಚ್ಚ ಇಬ್ಬರೂ ಮತಗಟ್ಟೆ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

vote

ಸಮಯ 07.3 : ಮಲ್ಲೇಶ್ವರಂ ಮತಗಟ್ಟೆಯಲ್ಲಿ ಕೇಂದ್ರ ನಗರಾಭಿವರದ್ಧಿ ಸಚಿವ ವೆಂಕಯ್ಯ ನಾಯ್ಡ ಹಕ್ಕು ಚಲಾಯಿಸಿದರು

ಸಮಯ 7 ಗಂಟೆ : ತುಂತುರು ಮಳೆಯ ನಡುವೆಯೇ ಮತಗಟ್ಟೆ ಬಳಿ ಸರದಿ ಸಾಲಿನಲ್ಲಿ ಕಾಯುತ್ತಿರುವ ಜನರು

English summary
Voting ended peacefully for 197 wards of Bruhat Bengaluru Mahanagara Palike (BBMP) election 2015. Counting of votes will be held at August 25, Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X