ಕಾಮಗಾರಿ ಬಿಲ್ ಸಿಗದಿದ್ದಕ್ಕೆ ಬಿಬಿಎಂಪಿ ಗುತ್ತಿಗೆದಾರ ಗೌತಮ್ ಆತ್ಮಹತ್ಯೆ; ಆರೋಪ
ಬೆಂಗಳೂರು, ಆಗಸ್ಟ್ 10: ಕಾಮಗಾರಿ ಬಿಲ್ ಸಿಗದಿದ್ದಕ್ಕೆ ಬೆಂಗಳೂರಿನ ವಿಜಯನಗರದಲ್ಲಿ ಬಿಬಿಎಂಪಿ ಗುತ್ತಿಗೆದಾರ ಗೌತಮ್ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಂತೆ ಈಗ ಕಾಮಗಾರಿ ಬಿಲ್ ಸಿಗದಿದ್ದಕ್ಕೆ ಗೌತಮ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ರಾಜ್ಯ ಸರ್ಕಾರ ಮತ್ತು ಗುತ್ತಿಗೆದಾರರ ಹಗ್ಗಾಜಗ್ಗಾಟಕ್ಕೆ ಬೆಂಗಳೂರಿನಲ್ಲಿ ಮೊದಲ ಬಲಿ ಆಗಿದ್ದು, ವಿಜಯನಗರದ ನಿವಾಸಿಯಾಗಿರುವ ಬಿಬಿಎಂಪಿ ಗುತ್ತಿಗೆದಾರ ಗೌತಮ್(29) ತಮ್ಮ ಮನೆಯಲ್ಲಿಯೇ ಫ್ಯಾನ್‍ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ವಿಜಯನಗರದ ಅತ್ತಿಗುಪ್ಪೆ ವಾರ್ಡ್ ಮಾಜಿ ಕಾರ್ಪೊರೇಟರ್ ದೊಡ್ಡಯ್ಯ ಪುತ್ರನಾಗಿರುವ ಗೌತಮ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತನ ಆತ್ಮಹತ್ಯೆಗೆ ಕಾಮಗಾರಿಗಳ ಗುತ್ತಿಗೆ ಬಿಲ್ ಬಾಕಿಯೇ ಕಾರಣವೆಂದು ಶಂಕೆ ವ್ಯಕ್ತವಾಗಿದೆ. ಗೌತಮ ಆತ್ಮಹತ್ಯೆ ಮಾಡಿಕೊಂಡ ಮನೆಗೆ ವಿಜಯನಗರ ಶಾಸಕ ಎಂ. ಕೃಷ್ಣಪ್ಪ ಭೇಟಿ ನೀಡಿದ್ದಾರೆ.
ಬಿಬಿಎಂಪಿ ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಲು ಸಿಎಂ ಸಿದ್ದರಾಮಯ್ಯ ನಿರಾಕರಿಸಿದ್ದಾರೆ. ನೋ ರಿಯಾಕ್ಷನ್. Nothing To React ಎಂದು ಹೇಳಿ ಹೊರಟಿದ್ದಾರೆ.
ಬಿಬಿಎಂಪಿ ಗುತ್ತಿಗೆದಾರ ಗೌತಮ್ ಬುಧವಾರ ರಾತ್ರಿಯೇ ಆತ್ಮಹತ್ಯೆ ಮಾಡಿದ್ದಾರೆ. ಆದರೆ ಈ ಆತ್ಯಹತ್ಯೆ ಪ್ರಕರಣಕ್ಕೆ ಬೇರೆಂದು ಕಥೆ ಎಣೆದುಕೊಂಡಿದ್ದು, ಈ ಸಂಬಂಧ ಅವರ ಮಾವನವರ ಸ್ಪಷ್ಟಣೆ ನೀಡಿದ್ದಾರೆ. ನಾವು ಕಾಂಗ್ರೆಸ್ ಪಕ್ಷದವರು ನಮ್ಮ ವಿರುದ್ಧ ಬಿಜೆಪಿಯವರು ಪಿತೂರಿ ಮಾಡಿದ್ದಾರೆ. ಗೌತಮ್ ಯಾವುದೇ ಗುತ್ತಿಗೆದಾರನಲ್ಲ. ಗೌತಮ್ ಹೆಸರಿನಲ್ಲಿ ಯಾವುದೇ ಪರವಾನಗಿ ಇಲ್ಲ ಎಂದಿದ್ದಾರೆ.
ಮುಂದುವರೆದು ಗೌತಮ್ ವೈಯುಕ್ತಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿದ್ದಾರೆ. ಗೌತಮ್‌ಗೆ ಮದುವೆ ಮಾಡಲು ಎರಡು ತಿಂಗಳಿಂದ ಹೆಣ್ಣು ಹುಡುಕಾಟ ಮಾಡಿದ್ದೆವು. ಗುತ್ತಿಗೆದಾರ ಆತ್ಮಹತ್ಯೆ ಎಂಬುದೆಲ್ಲಾ ಸುಳ್ಳು, ಬಿಜೆಪಿಯವರು ಪಿತೂರಿ ಮಾಡಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಕೆಎಸ್ ಈಶ್ವರಪ್ಪ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಾಗಿದ್ದಾಗ ತಮಗೆ ಇಲಾಖೆಯಲ್ಲಿ ಕಮಿಷನ್‌ಗಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಉಡುಪಿಯ ಶಾಂಭವಿ ಲಾಡ್ಜ್‌ನಲ್ಲಿ 2022 ಏಪ್ರಿಲ್ 12 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಈ ಘಟನೆ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗುರಿಯಾಗಿತ್ತು. ಕೊನೆಗೆ ಸಂತೋಷ್ ಪಾಟೀಲ್ ಅವರು ಕಮಿಷನ್ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪಕ್ಕೆ ನೈತಿಕ ಹೊಣೆ ಹೊತ್ತು ಈಶ್ವರಪ್ಪ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಅಧಿಕಾರಕ್ಕೆ ಬಂದ ದಿನದಿಂದ ಕಲೆಕ್ಷನ್, ಕಮಿಷನ್ ಎನ್ನುತ್ತಾ ಲೂಟಿಗಿಳಿದ ಪರಿಣಾಮವೇ ಇಂದು ಬಿಬಿಎಂಪಿ ಗುತ್ತಿಗೆದಾರ ಗೌತಮ್ ಕಾಮಗಾರಿ ಬಿಲ್ ಸಿಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಉತ್ತರ ಕೊಡಲ್ಲ, ಆಣೆ ಮಾಡೋಲ್ಲ, ಪ್ರತಿಭಟನೆ ಮಾಡಿದ್ರೆ ಬ್ಲ್ಯಾಕ್ ಮೇಲ್ ಎನ್ನುತ್ತ ಬೇಜವಾಬ್ದಾರಿಯಿಂದ ವರ್ತಿಸಿದ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಇದಕ್ಕೆ ನೇರ ಹೊಣೆ. ಆಡಳಿತ ನಡೆಸಲು ಕಾಂಗ್ರೆಸ್ ಅಸಮರ್ಥ ಎನ್ನುವುದು ಸಾಬೀತಾಗಿದೆ. ಇನ್ನಷ್ಟು ಜೀವಗಳನ್ನು ಬಲಿ ಪಡೆಯುವ ಮೊದಲು ರಾಜೀನಾಮೆ ನೀಡಿ ಮನೆಗೆ ಹೋಗಿ ಎಂದು ಬಿಜೆಪಿ ಟ್ವೀಟ್ ಮಾಡಿದೆ.












Click it and Unblock the Notifications