Bengaluru Potholes : ದುರಸ್ತಿಗೆ ಕೋಟಿ ಕೋಟಿ ಹಣ ಬಳಕೆ ವಿಚಾರ: ಬಿಬಿಎಂಪಿ ಆಯುಕ್ತರ ಪ್ರತಿಕ್ರಿಯೆ
ಬೆಂಗಳೂರು, ಜನವರಿ 12: ರಾಜ್ಯ ಸರ್ಕಾರ ವಿವಿಧ ಯೋಜನೆಗಳಡಿ ನೀಡುವ ಕೋಟ್ಯಂತರ ಅನುದಾನವನ್ನು ಕೇವಲ ರಸ್ತೆಗುಂಡಿ ಮಾತ್ರವಲ್ಲದೇ ರಸ್ತೆ ಅಭಿವೃದ್ಧಿ, ತ್ಯಾಜ್ಯ ವಿಲೇವಾರಿ ಇನ್ನಿತರ ಕಾರ್ಯಗಳಿಗೆ ಬಳಕೆ ಆಗುತ್ತದೆ. ಕೇವಲ ರಸ್ತೆಗುಂಡಿಗೆ ಕೋಟ್ಯಂತರ ರೂ. ಹಣ ಖರ್ಚಾಗಲ್ಲ ಎಂದು ಬಿಬಿಎಂಪಿ ಹೇಳಿದೆ.
ರಸ್ತೆಗುಂಡಿ ಮುಚ್ಚಲು ಅಪಾರವಾದ ಹಣ ಬಳಕೆ ಬಗ್ಗೆ ಸುದ್ದಿಗಾರರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್, ಅಪಾರ ಹಣ ಕೇವಲ ರಸ್ತೆಗುಂಡಿಗೆ ಬಳಕೆ ಆಗಿಲ್ಲ. ಪ್ರಸಕ್ತ ವರ್ಷ ರಸ್ತೆಗುಂಡಿಗಳನ್ನು ಮುಚ್ಚಲು ಒಟ್ಟು 18 ಕೋಟಿ ಹಣ ಖರ್ಚು ಮಾಡಲಾಗಿದೆ. 25,000 ಕೋಟಿ ರೂ. ಹಣ ರಸ್ತೆಗುಂಡಿ ಮುಚ್ಚಲು ಬಳಕೆ ಆಗಿದೆ ಎಂಬುದು ತಪ್ಪು ಎಂದು ಹೇಳಿದರು.
25,000 ಕೋಟಿ ರೂ.ಹಣ ರಸ್ತೆಗುಂಡಿ ಮುಚ್ಚಲು ಬಳಕೆ ಆಗುತ್ತಿದೆ ಎಂದು ಹೇಳುತ್ತಿರುವುದು ಜನರಿಗೆ ದಾರಿ ತಪ್ಪಿಸುವ ವಿಚಾರ. ರಾಜ್ಯ ಸರ್ಕಾರ ಅಮೃತ್ ನಗರೋತ್ಥಾನ, ನವ ನಗರೋತ್ಥಾನ ಸೇರಿದಂತೆ ವಿವಿಧ ಯೋಜನೆಗಳಡಿ ಅನುದಾನ ನಿಡುತ್ತದೆ. ಆ ಹಣದಲ್ಲಿ ರಸ್ತೆ ಗುಂಡಿ ಜೊತೆಗೆ ರಸ್ತೆ ಅಭಿವೃದ್ಧಿ, ಶಾಲೆಗೆ ಮೂಲಸೌಕರ್ಯ, ಇನ್ನಿತರ ಕಾಮಗಾರಿಗಳನ್ನು ಬಿಬಿಎಂಪಿ ಮಾಡುತ್ತದೆ ಅದಕ್ಕೆ ಹಣ ವಿನಿಯೋಗಿಸಲಾಗುತ್ತದೆ ಎಂದರು.

ಕಳೆದ ವರ್ಷ 40-50ಕೋಟಿ ಖರ್ಚು
ನಗರದ ರಸ್ತೆಗುಂಡಿ ಮುಚ್ಚಲು ಈ ವರ್ಷ 18ಕೋಟಿ ಹಣ ಖರ್ಚು ಮಾಡಿದ್ದೇವೆ. ಸುಮಾರು 60 ಕೋಟಿ ಹಣ ಬಿಬಿಎಂಪಿಯಲ್ಲಿದೆ. ಹೋದ ವರ್ಷ ರಸ್ತೆಗುಂಡಿ ದುರಸ್ತಿಗಾಗಿ 40ರಿಂದ 50ಕೋಟಿ ಖರ್ಚು ಮಾಡಲಾಗಿದೆ. ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ (BWSSB) 110 ಹಳ್ಳಿಗಳಿಗೆ ನೀರು ಸರಬರಾಜು ಮಾಡಲು ಯೋಜನೆ ರೂಪಿಸಿದೆ. ಅದಕ್ಕಾಗಿ ಜಲಮಂಡಳಿ ನಗರದಲ್ಲಿ 2000 ಕಿ.ಮೀ. ರಸ್ತೆ ಅಗೆದಿದೆ.
ಅಗೆದ 2000 ಕಿ.ಮೀ. ರಸ್ತೆ ದುರಸ್ತಿ, ಸುಧಾಕರಣೆಗೆಂದು ಇತ್ತೀಚೆಗಷ್ಟೇ 1000 ಸಾವಿರ ಕೋಟಿ ಬಂದಿದೆ. ಅದಲ್ಲದೇ ವಿದ್ಯುತ್ ಪೂರೈಕೆಗಾಗಿ ಭೂಗತ ಕೇಬಲ್ ಅಳವಡಿಕೆ ಸೇರಿದಂತೆ ಇನ್ನಿತರ ಕಾರ್ಯಗಳಿಗಾಗಿ ಕೆಪಿಟಿಸಿಎಲ್ ನವರು ಸುಮಾರು 6000 ಕಿ.ಮೀ ರಸ್ತೆ ಅಗೆದಿದ್ದಾರೆ ಎಂದು ತಿಳಿಸಿದರು.
ಈಜಿಪುರ ಕಾಮಗಾರಿ ಟೆಂಡರ್, ಪೇ ಆಂಡ್ ಪಾಕಿಂಗ್ ವ್ಯವಸ್ಥೆ
ಅರ್ಧಕ್ಕೆ ನಿಂತಿರುವ ಈಜಿಪುರ ಕಾಮಗಾರಿ ಪೂರ್ಣಕ್ಕೆ ಟೆಂಡರ್ ಕರೆಯಲಿದ್ದೇವೆ. ಟೆಂಡರ್ ನಿಯಮಗಳ ಷರತ್ತು ಪರಿಶೀಲಿಸಿ, ಅಂದಾಜು ವೆಚ್ಚದಲ್ಲಿನ ವ್ಯತ್ಯಾಸ ಹಾಗೂ ಈಗ ಖರ್ಚಾಗಲಿರುವ ವೆಚ್ಚ ನೋಡಿಕೊಂಡು ಪಾಲ್ಗೊಳ್ಳುವ ಕಂಪನಿಗಳಿಗೆ ಟೆಂಡರ್ ನೀಡಲಾಗುವುದು.

ನಗರದ ಹೃದಯಭಾಗ ಗಾಂಧಿನಗರದಲ್ಲಿ ಬಿಬಿಎಂಪಿ ಪೇ ಆಂಡ್ ಪಾರ್ಕಿಂಗ್ ಗೆ ವ್ಯವಸ್ಥೆ ಮಾಡಿದೆ. ಆದರೆ ಕಳೆದ ಆರು ಭಾರಿ ಬಿಬಿಎಂಪಿ ಟೆಂಡರ್‌ಗೆ ಕರೆದರೂ ಯಾರು ಭಾಗವಹಿಸಿಲ್ಲ. ಈ ಸಂಬಂಧ ನಿಗದಿಪಡಿಸಲಾದ ಟೆಂಡರ್ ಹಣ ಕಡಿಮೆ ಮಾಡುವ ಕುರಿತು ನಗರ ಭೂ ಸಾರಿಗೆ ನಿರ್ದೇಶನಾಲಯ (DULT) ಜೊತೆ ಮಾತನಾಡಿ ನಿರ್ಧರಿಸುತ್ತೇವೆ. ಮತ್ತೆ ಟೆಂಡರ್ ಕರೆಯುತ್ತೇವೆ.
ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಜೆಸಿ ರಸ್ತೆಯಲ್ಲಿನ ಪೇ ಆಂಡ್ ಪಾರ್ಕಿಂಗ್ ವ್ಯವಸ್ಥೆ ಟೆಂಡರ್‌ನಲ್ಲಿ ಎರಡು ಕಂಪನಿಗಳು ಪಾಲ್ಗೊಂಡಿದ್ದರು. ಅಲ್ಲಿ ಹಿಂದಿನಗಿಂತಲೂ ಹೆಚ್ಚು ಹಣ ಸಂಗ್ರಹ ಆಗುತ್ತಿದೆ ಎಂದು ಆಯುಕ್ತರು ವಿವರಿಸಿದರು.












Click it and Unblock the Notifications