ಬಿಬಿಎಂಪಿ ಬಜೆಟ್‌ಗೆ ಸಿದ್ಧತೆ: ಪ್ರತಿ ವಾರ್ಡ್‌ಗೆ 3 ಕೋಟಿ 'ನಿರ್ವಹಣಾ ವೆಚ್ಚ' ಕೇಳಿದ ಶಾಸಕರು
ಬೆಂಗಳೂರು, ಮಾ.18: ಜನಪ್ರತಿನಿಧಿಗಳಿಲ್ಲದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಲ್ಲಿ ಅಧಿಕಾರಿಗಳು ಬಜೆಟ್ ಮಂಡನೆಗೆ ಸಿದ್ಧತೆ ನಡೆಸಿದ್ದಾರೆ. ಈ ಸಂಬಂಧ ಬೆಂಗಳೂರಿನ ಸಂಸದರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರೊಂದಿಗೆ ಸಭೆ ನಡೆಸಿ ಬಜೆಟ್ ಬಗ್ಗೆ ಚರ್ಚೆ ನಡೆಸಲಾಗಿದೆ.
ಬಿಬಿಎಂಪಿಯಲ್ಲಿ ಸಮಾನ್ಯವಾಗಿ ಹಣಕಾಸು ಸ್ಥಾಯಿ ಸಮಿತಿ ಸದಸ್ಯರು ಬಜೆಟ್ ಮಂಡಿಸುತ್ತಾರೆ. ಆದರೆ, ಕಳೆದ ಒಂದೂವರೆ ವರ್ಷದಿಂದ ಬಿಬಿಎಂಪಿಯಲ್ಲಿ ಜನಪ್ರತಿನಿಧಿಗಳು ಇಲ್ಲದೆ ಅಧಿಕಾರಿಗಳೇ ಆಡಳಿತ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ವಿಕಾಸಸೌಧದ ಸಭಾಂಗಣದಲ್ಲಿ ಸಭೆ ನಡೆಸಿದ ಬಜೆಟ್ ಕುರಿತು ಸಭೆಯಲ್ಲಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಹಾಗೂ ಮಾನ್ಯ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಬೆಂಗಳೂರಿನ ಜನಪ್ರತಿನಿಧಿಗಳ ಸಲಹೆಗಳನ್ನು ಪಡೆದುಕೊಂಡರು.

ಪ್ರತಿ ವಾರ್ಡ್ ಗೂ 2 ರಿಂದ 3 ಕೋಟಿ ರೂ. ವಾರ್ಷಿಕ ನಿರ್ವಹಣೆಗೆ (POW) ಅನುದಾನ ಕಡ್ಡಾಯವಾಗಿ ಮೀಸಲಿಟ್ಟಲ್ಲಿ ವಾರ್ಡ್ ಗಳ ಸಮಸ್ಯೆಗಳನ್ನು ಬಗೆಹರಿಸಲು ಸುಲಭವಾಗಲಿದ್ದು, ಇದಕ್ಕೆ ಹಚ್ಚಿನ ಆದ್ಯತೆ ನೀಡಲು ಎಲ್ಲಾ ಪಕ್ಷದ ನಾಯಕರು ಪಕ್ಷಬೇದ ಮರೆತು ಒತ್ತಾಯಿಸಿದರು.
'ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಗಮನಿಸುವುದು ಹಾಗೂ ಸುಸ್ಥಿರ ಆರ್ಥಿಕ ಪರಿಸ್ಥಿಯೊಂದಿಗೆ ಮುನ್ನಡೆಸಲು ಕ್ರಮವಹಿಸಬೇಕಿದೆ. ನಗರದ ಅಭಿವೃದ್ಧಿಯ ಬಗ್ಗೆ ಹೆಚ್ಚು ಗಮನಹರಿಸಬೇಕಿದ್ದು, ನಾಗರೀಕರಿಗೆ ಅವಶ್ಯಕ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಪಾಲಿಕೆಯ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಪಾಲಿಕೆಗೆ ಬರುವ ಆದಾಯವನ್ನು ಗಮನದಲ್ಲಿಟ್ಟುಕೊಂಡು ಪ್ರಸಕ್ತ ಸಾಲಿನ ಆಯವ್ಯಯವನ್ನು ಮಂಡಿಸಲು ಬೆಂಗಳೂರಿನ ಜನಪ್ರತಿನಿಧಿಗಳ ಸಲಹೆ ಅಗತ್ಯವಿದೆ' ಎಂದು ರಾಕೇಶ್ ಸಿಂಗ್ ಕೋರಿದರು.
ಮುಖ್ಯ ಆಯುಕ್ತ ಗೌರವ್ ಗುಪ್ತ ಮಾತನಾಡಿ, 'ಪಾಲಿಕೆ ವ್ಯಾಪ್ತಿಯಲ್ಲಿ ಆದಾಯದ ಮೂಲವನ್ನು ಹೆಚ್ಚಿಸುವ ಸಲುವಾಗಿ ಆಸ್ತಿ ತೆರಿಗೆ ಸಂಗ್ರಹಿಸುವ ವಿಚಾರದಲ್ಲಿ ಹೆಚ್ಚು ಆದ್ಯತೆ ನೀಡಲಾಗಿದೆ. ನಗರದಲ್ಲಿನ ಬೀದಿ ದೀಪ ದೀಪಗಳನ್ನು ಎಲ್.ಇ.ಡಿ ದೀಪಗಳಾಗಿ ಬದಲಾಯಿಸುವ ಕೆಲಸಕ್ಕೆ ವೇಗ ನೀಡಲಾಗುತ್ತಿದ್ದು, ಎಲ್ಲೆಲ್ಲಿ ಬೀದಿ ದೀಪ ಅಳವಡಿಸಿಲ್ಲ ಅಂತಹ ಜಾಗದಲ್ಲಿ ಬೀದಿ ದೀಪಗಳನ್ನು ಅಳವಡಿಸಲಾಗುವುದು. ಜೊತೆಗೆ ಸಮರ್ಪಕವಾಗಿ ನಿರ್ವಹಣೆ ಮಾಡಲಾಗುವುದು' ಎಂದರು.
ಸಭೆಯಲ್ಲಿ ಸಂಸದ ಪಿ.ಸಿ.ಮೋಹನ್, ಸಚಿವರುಗಳಾದ ಕೆ.ಗೋಪಾಲಯ್ಯ, ಮುನಿರತ್ನ, ಶಾಸಕರಾದ ಸುರೇಶ್ ಕುಮಾರ್, ರಘು, ಎನ್.ಎ.ಹ್ಯಾರೀಸ್, ಆರ್.ಮಂಜುನಾಥ್, ಕೆ.ಜೆ.ಜಾರ್ಜ್, ಸತೀಶ್ ರೆಡ್ಡಿ, ಬೈರತಿ ಸುರೇಶ್, ರವಿ ಸುಬ್ರಹ್ಮಣ್ಯ, ಸೌಮ್ಯಾ ರೆಡ್ಡಿ, ರಿಜ್ವಾನ್ ಹರ್ಷದ್, ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಪಿ.ಆರ್. ರಮೇಶ್, ಯು.ಬಿ.ವೆಂಕಟೇಶ್, ಅ.ದೇವೇಗೌಡ ಹಾಜರಿದ್ದರು.
ಸಭೆಯಲ್ಲಿ ಚರ್ಚೆಯಾದ ಪ್ರಮುಖ ಅಂಶಗಳು:
* ಪ್ರತಿ ವಾರ್ಡ್ ಗೂ 2 ರಿಂದ 3 ಕೋಟಿ ರೂ. ವಾರ್ಷಿಕ ನಿರ್ವಹಣೆಗೆ(POW) ಅನುದಾನ ಕಡ್ಡಾಯವಾಗಿ ಮೀಸಲಿಟ್ಟಲ್ಲಿ ವಾರ್ಡ್ ಗಳ ಸಮಸ್ಯೆಗಳನ್ನು ಬಗೆಹರಿಸಲು ಸುಲಭವಾಗಲಿದ್ದು, ಇದಕ್ಕೆ ಹಚ್ಚಿನ ಆದ್ಯತೆ ನೀಡಲು ಎಲ್ಲಾ ಪಕ್ಷದ ನಾಯಕರು ಪಕ್ಷಬೇದ ಮರೆತು ಒತ್ತಾಯಿಸಿದರು.
* ಬಿ ಯಿಂದ ಎ ಖಾತಾ ವರ್ಗೀಕರಣ ಮಾಡಿ ಹೆಚ್ಚಿನ ಸಂಪನ್ಮೂಲ ಕ್ರೋಢೀಕರಿಸುವುದು.
* ತೆರಿಗೆ ವ್ಯಾಪ್ತಿಗೆ ಒಳಪಡದ ಸುಮಾರು 5 ಲಕ್ಷ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತಂದು ಆದಾಯ ಮೂಲವನ್ನು ಹೆಚ್ಚಿಸಿಕೊಳ್ಳುವುದು.
* ಅನಧಿಕೃತ ಕಟ್ಟಡಗಳನ್ನು ಗುರುತಿಸುವ ಪ್ರಕ್ರಿಯೆಗೆ ಚುರುಕು ನೀಡಿ ಆಸ್ತಿ ತೆರಿಗೆ ವ್ಯಾಪ್ತಿಗೆ ತರುವುದು.
* Self Assessment Scheme ಅಡಿಯಲ್ಲಿ ಸಂಗ್ರಹಿಸುವ ತೆರಿಗೆಯು ವಸ್ತುಸ್ಥಿಗೆ ಹೊಂದಾಣಿಕೆಯಾಗುತ್ತಿದೆಯೆ ಎಂಬುದನ್ನು ಪರಿಶೀಲಿಸಬೇಕು.
* ಒಂಟಿ ಮನೆಗಳಿಗೆ ಅನುದಾನ ಮೀಸಲಿಡುವುದು.
* ಬೀದಿ ದೀಪಗಳ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸುವುದು ಹಾಗೂ ಎಲ್.ಇ.ಡಿ ಬೀದಿ ದೀಪಗಳನ್ನು ಅಳವಡಿಸುವುದು.
* ಕಸ ನಿರ್ವಹಣೆ ಪ್ರಕ್ರಿಯೆಯನ್ನು ಸಮರ್ಪಕವಾಗಿ ನಿರ್ವಹಿಸುವುದು. ಕಾಂಪ್ಯಾಕ್ಟರ್, ಆಟೋ ಟಿಪ್ಪರ್ ಗಳಿಗೆಲ್ಲಾ ಜಿಪಿಎಸ್ ಅಳವಡಿಸುವುದು.
* ಪಾಲಿಕೆಯ Lease Property ಗಳಿಂದ ಬಾಕಿ ಹಣ ಸಂಗ್ರಹಿಸಲು ಕ್ರಮವಹಿಸುವುದು.
* ರಾಜಕಾಲುವೆಗಳ ನಿರ್ವಹಣೆ ಸರಿಯಾಗಿ ಮಾಡುವುದು.
* ಉದ್ಯಾನಗಳ ನಿರ್ವಹಣೆಗೆ ಹೆಚ್ಚು ಆದ್ಯತೆ ನೀಡುವುದು ಹಾಗೂ ಉದ್ಯಾನಗಳಲ್ಲಿರುವ ವ್ಯಾಯಾಮ, ಮಕ್ಕಳ ಆಟಿಕೆಗಳ ಅಳವಡಿಕೆ, ಭದ್ರತಾ ಸಿಬ್ಬಂದಿ ಸರಿಯಾಗಿರುವಂತೆ ನೋಡಿಕೊಳ್ಳುವುದು.
* ಕಲ್ಯಾಣ ಕಾರ್ಯಕ್ರಮದಡಿ ಬಡ ವರ್ಗದ ಜನರಿಗೆ ಲ್ಯಾಪ್ ಟಾಪ್ ವಿತರಿಸುವುದು ಸೇರಿದಂತೆ ಇತರೆ ಕಾರ್ಯಕ್ರಮಗಳಿಗೆ ಆದ್ಯತೆ ನೀಡುವುದು.
* 110 ಹಳ್ಳಿಗಳಿಗೆ ಸಂಬಂಧಿಸಿದಂತೆ ರಸ್ತೆ ಪುನಶ್ಚೇತನ ಕಾರ್ಯ ತ್ವರಿತವಾಗಿ ಮಾಡುವುದು.
* ಪಾದಚಾರಿ ಮಾರ್ಗಗಳು ಒಡಾಡಲು ಸುಗಮವಾಗಿರುವ ಹಾಗೆ ನೋಡಿಕೊಳ್ಳುವುದು.
* ಕೆರೆಗಳನ್ನು ಅಭಿವೃದ್ಧಿಗೊಳಿಸಿ ಸರಿಯಾಗಿ ನಿರ್ವಹಣೆ ಮಾಡುವುದು.
* ಒಣಗಿರುವ ಮರಗಳು, ಕೊಂಬೆಗಳನ್ನು ಕತ್ತರಿಸುವಿಕೆ ವಿಚಾರದಲ್ಲಿ ಹಚ್ಚು ಆದ್ಯತೆ ನೀಡುವುದು.
* ನಗರದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ನಿರ್ವಹಣೆ ಮಾಡುವುದು.
* ಈಗಾಗಲೇ ಕೈಗೊಂಡಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಆದ್ಯತೆ ನೀಡುವುದು.












Click it and Unblock the Notifications