Bengaluru: ಗಣೇಶ ಪೆಂಡಾಲ್‌ನಲ್ಲಿ ಫ್ಲೆಕ್ಸ್, ಬ್ಯಾನರ್‌ಗಳಿಗೆ ಬಿಬಿಎಂಪಿ ನಿಷೇಧ
ಬೆಂಗಳೂರು, ಸೆಪ್ಟಂಬರ್ 14: ಗೌರಿ ಗಣೇಶ ಹಬ್ಬಕ್ಕೆ ದಿನಗಣನೆ ಆರಂಭವಾಗಿದ್ದು, ಮೂರು ದಿನಗಳು ಮಾತ್ರ ಬಾಕಿ ಇವೆ. ಬೆಂಗಳೂರಿನಲ್ಲಿ ಗಣೇಶ ಪ್ರತಿಷ್ಠಾಪನೆ ಸಕಲ ತಯಾರಿಗಳು ನಡೆದಿವೆ. ಅಗತ್ಯ ಎಚ್ಚರಿಕೆ ವಹಿಸಿರುವ ಬಿಬಿಎಂಪಿಯು ಹೈಕೋರ್ಟ್ ಆದೇಶಕ್ಕೆ ಬದ್ಧವಾಗಿ ನಗರದಲ್ಲಿ ಫೆಕ್ಸ್, ಬ್ಯಾನರ್ ಹಾಗೂ ಹೋರ್ಡಿಂಗ್ಸ್ ಗಳ ಅಳವಡಿಕೆಯನ್ನು ನಿಷೇಧಿಸಿದೆ.
ಹಬ್ಬದ ಸಂಭ್ರಮದಲ್ಲಿರುವ ಜನರು ಫ್ಲೆಕ್ಸ್, ಬ್ಯಾನರ್ ಅಳವಡಿಸದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಹೈಕೋರ್ಟ್‌ನ ಆದೇಶಕ್ಕೆ ಬದ್ಧವಾಗಿರುವ ಬಿಬಿಎಂಪಿ ಗಣೇಶ ಮಂಟಪಗಳು ಅಥವಾ ಪರಿಸರ ವಿರೋಧಿ, ಪರಿಸರ ಸ್ನೇಹಿ ಅಲ್ಲದ ಯಾವುದೇ ಪ್ರದರ್ಶನ ವಸ್ತುಗಳ ಮೇಲೆ ಕಡಿವಾಣ ಹಾಕುತ್ತಿದೆ. ನಿಷೇಧಿತ ವಸ್ತುಗಳನ್ನು, ಫ್ಲೆಕ್ಸ್‌ಗಳ ಬಳಕೆಗೆ ಅವಕಾಶ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಗಣೇಶೋತ್ಸವದಲ್ಲಿ ಪೆಂಡಾಲ್‌ಗಳು, ಪ್ರಚಾರದ ಬಟ್ಟೆಗಳು ಅಥವಾ ಇತರ ಪರಿಸರ ಸ್ನೇಹಿ ವಸ್ತುಗಳನ್ನು ಆಚರಣೆ ವೇಳೆ ಬಳಸಬಹುದಾಗಿದೆ. ಅಂತಹ ಪ್ರದರ್ಶನಗಳನ್ನು ಆಚರಣೆಯ ದಿನದಂದು ವಿಗ್ರಹಗಳನ್ನು ಇರಿಸುವ ಪೆಂಡಾಲ್‌ಗಳ ಬಳಿ ಮಾತ್ರ ಇರಿಸಬೇಕು. ಗಣಪತಿ ವಿಸರ್ಜನೆ ಬಳಿಕ ಅವುಗಳನ್ನು ತೆಗೆದುಹಾಕಬೇಕು.
ಉತ್ಪತ್ತಿಯಾಗುವ ಕಸ ಸೂಕ್ತ ವಿಲೇವಾರಿ ಮಾಡಿ
ಇನ್ನೂ ಬೆಂಗಳೂರಿಗೆ ಸಂಬಂಧಿಸಿದಂತೆ ಗಣೇಶ ಹಬ್ಬದ ಮಾರ್ಗಸೂಚಿಯಲ್ಲಿ ಪಾಲಿಕೆಯು ನಾಗರಿಕರು POP (ಪ್ಲಾಸ್ಟರ್ ಆಫ್ ಪ್ಯಾರಿಸ್) ನಿಂದ ಮಾಡಿದ ಗಣೇಶ ವಿಗ್ರಹಗಳು, ಥರ್ಮಾಕೋಲ್ ಮತ್ತು ಪ್ಲಾಸ್ಟಿಕ್ ನಂತಹ ವಸ್ತುಗಳನ್ನು ತ್ಯಜಿಸುವಂತೆ ಮನವಿ ಮಾಡಲಾಗಿದೆ. ಉತ್ಪತ್ತಿಯಾಗುವ ತ್ಯಾಜ್ಯವನ್ನು ಸರಿಯಾಗಿ ವಿಂಗಡಿಸಿ ಬಿಬಿಎಂಪಿ ಸಂಗ್ರಹಣಾ ಕೇಂದ್ರಗಳಿಗೆ ಹಸ್ತಾಂತರಿಸಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.

ಬಿಬಿಎಂಪಿ ವ್ಯಾಪ್ತಿಯ 63 ಮೇಲ್ವಿಚಾರಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ಆಚರಣೆಗಳ ಸಂಬಂಧಿಸಿದಂತೆ ಈ ಮೇಲ್ವಿಚಾರಣೆ ಕೇಂದ್ರಗಳು ಕಾರ್ಯ ನಿರ್ವಹಿಸುತ್ತವೆ. ಈ ಕೇಂದ್ರಗಳಲ್ಲಿ ಬಿಬಿಎಂಪಿ, ಬೆಸ್ಕಾಂ, ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಇರುತ್ತಾರೆ. ವಿಗ್ರಹಗಳನ್ನು ಸ್ಥಾಪಿಸುವ ಪ್ಯಾನ್‌ಡಾಲ್‌ಗಳು ತಮ್ಮ ಅರ್ಜಿಗಳೊಂದಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸುವ ಮೂಲಕ ಈ ಏಕಗವಾಕ್ಷಿ ಏಜೆನ್ಸಿಗಳಿಂದ ಅನುಮತಿಯನ್ನು ಪಡೆಯಬೇಕು ಎಂದು ಅವರು ತಿಳಿಸಿದರು.
ನೋಡಲ್ ಅಧಿಕಾರಿಯು ಪ್ರತಿ ಏಕಗವಾಕ್ಷಿ ಮೇಲ್ವಿಚಾರಣಾ ಕೇಂದ್ರದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಾರೆ. ಅವರು ಅರ್ಜಿಗಳನ್ನು ಪರಿಶೀಲಿಸುತ್ತಾರೆ. ದೊಡ್ಡ ವಿಗ್ರಹಗಳನ್ನು ವಿಸರ್ಜಿಸಬಹುದಾದ ಸ್ಥಳಗಳನ್ನು ಕೇಂದ್ರಗಳು ಸೂಚಿಸಲಿವೆ ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications