ಬಿಬಿಎಂಪಿಯ ₹35 ಕೋಟಿ ಹಣದಲ್ಲಿ ಮರುಜೀವ ಪಡೆಯಲಿವೆ ಈ ಕೆರೆಗಳು
ಬೆಂಗಳೂರು, ಅಕ್ಟೋಬರ್ 30: ಬೆಂಗಳೂರಿನಲ್ಲಿರುವ ನೂರಾರು ಕೆರೆಗಳಿಗೆ ಜೀವ ಕಳೆ ತುಂಬಲು ಸಜ್ಜಾಗಿರುವ ಬಿಬಿಎಂಪಿ ಅದಕ್ಕೆಂದೆ ಕೋಟ್ಯಂತರ ರೂಪಾಯಿ ಅನುದಾನ ಹಂಚಿಕೆ ಮಾಡಿದೆ. ಈ ಮೂಲಕ ಬಿಬಿಎಂಪಿಯು ಇರುವ ಸಂಪನ್ಮೂಲಗಳನ್ನು ಬಳಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ತೋರಿ ಬರುತ್ತಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಪ್ರಸಕ್ತ 2023-24ರ ಸಾಲಿನಲ್ಲಿ ನಗರದ ಒಟ್ಟು 174 ಕೆರೆಗಳು ಮತ್ತು 15 ಒಳಚರಂಡಿ ಸಂಸ್ಕರಣಾ ಘಟಕಗಳ (ಎಸ್‌ಟಿಪಿ) ನಿರ್ವಹಣೆಗೆ 35 ಕೋಟಿ ರೂಪಾಯಿ ಹಂಚಿಕೆ ಮಾಡಿದೆ. ಇದರಲ್ಲಿ ಕೆಲವು ಕೆರೆಗಳು ಅಭಿವೃದ್ಧಿಗೊಳ್ಳಲಿದ್ದರೆ, ಕೆಲವು ಮರು ಜೀವ ಪಡೆಯಲಿವೆ ಎಂದು ಡಿಎಚ್ ವರದಿ ಮಾಡಿದೆ.

ವಿಶೇಷವೆಂದರೆ ನಗರದ ಹೊರ ವಲಯದಲ್ಲಿರುವ ಕೆರೆಗಳಿಗೆ ಬಿಬಿಎಂಪಿ ಅಧಿಕ ಅನುದಾನ ನೀಡಿದೆ ಎಂಬುದು ಅಂಕಿ ಅಂಶಗಳಿಂದ ಗೊತ್ತಾಗಿದೆ. ಕೇಂದ್ರ ವ್ಯಾಪಾರ ಜಿಲ್ಲೆಗಳ (ಸಿಬಿಡಿ) ಪ್ರದೇಶಗಳಲ್ಲಿನ ಜಲ ಮೂಲಗಳಿಗೆ ಆದ್ಯತೆ ನೀಡಲಾಗುತ್ತಿದೆ. ಎಂಟು ವಲಯಗಳ ಪೈಕಿ ಮಹದೇವಪುರ ವಲಯ ವ್ಯಾಪ್ತಿಯ 53 ಕೆರೆಗಳು 9 ಕೋಟಿ ರೂ.ಪಡೆದಿವೆ.
ಬಿಬಿಎಂಪಿ ಗುರುತಿಸಿದ ಕೆರೆಗಳು ಇವು
ಅದೇ ರೀತಿ ಬೊಮ್ಮನಹಳ್ಳಿ ವಲಯದಲ್ಲಿ 42 ಕೆರೆಗಳು, ರಾಜರಾಜೇಶ್ವರಿ ನಗರದ 33, ಯಲಹಂಕದ 24 ಕೆರೆಗಳನ್ನು ಅಭಿವೃದ್ಧಿ ಯೋಜನೆಗೆ ಬಿಬಿಎಂಪಿ ಗುರುತಿಸಿದೆ. ಇನ್ನೂ ದೊಡ್ಡಬೊಮ್ಮಸಂದ್ರ, ಕೋಗಿಲು,ಕಚರಕನಹಳ್ಳಿ, ಯಲಹಂಕ, ದಾಸರಹಳ್ಳಿ, ಕಗ್ಗದಾಸಪುರದ ಕೆಲವು ಕೆರೆಗಳಿಗೆ ಬೇಲಿ ಹಾಕಲು, ದುರಸ್ತಿ ಕಾರ್ಯಗಳು ಇದೇ ಅನುದಾನ ವ್ಯಾಪ್ತಿಗೆ ಬರಲಿವೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 202 ಕೆರೆಗಳು ಇವೆ. ಇದರಲ್ಲಿ 19 ಕೆರೆಗಳು ಒತ್ತುವರಿಯಿಂದ ಮೂಲಕ ಕೆರೆಯ ಲಕ್ಷಣಗಳನ್ನು ಕಳೆದುಕೊಂಡಿವೆ. ಇವುಗಳೇನಾ ಕೆರೆಗಳು ಎಂಬಂತಿವೆ. ಹೀಗಾಗಿ 27 ಕೆರೆಗಳು ಪುನಶ್ಚೇತನ ಕಾಮಗಾರಿಗೆ ಹಣದ ಕೊರತೆಯಿಂದ ತೀವ್ರ ಸಂಕಷ್ಟದಲ್ಲಿವೆ. ಕೆರೆ ನಿರ್ವಹಣೆ ಚಟುವಟಿಕೆಗಳ ಮೇಲ್ವಿಚಾರಣೆಗೆ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಲು 10 ಲಕ್ಷ ರೂಪಾಯಿ ವಿನಿಯೋಗಿಸಲಾಗುತ್ತಿದೆ.

ಉದ್ಯಾನ ಅಭಿವೃದ್ಧಿಗೂ ಹಣ ಬಿಡುಗಡೆ
ಇನ್ನೂ ರಾಜ್ಯ ಸರ್ಕಾರ ಕಳೆದ ವರ್ಷ ನಗರದ ಕೆರೆಗಳ ಅಭಿವೃದ್ಧಿಗೆ ಅನುದಾನ ಹಂಚಿಕೆ ಮಾಡಿತ್ತು. 1,240 ಉದ್ಯಾನವನಗಳ ನಿರ್ವಹಣೆಗೆ 15 ಕೋಟಿ ರೂಪಾಯಿ ಮೀಸಲಿಟ್ಟಿತ್ತು. ಬಿಬಿಎಂಪಿಯು ನಗರದಾದ್ಯಂತ 1,240 ನೆರೆಹೊರೆಯ ಉದ್ಯಾನವನಗಳ ವಾರ್ಷಿಕ ನಿರ್ವಹಣೆಗೆ 15 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ.
ಯಶವಂತಪುರ, ಯಲಹಂಕ, ಬೊಮ್ಮನಹಳ್ಳಿ, ಸಿವಿ ರಾಮನ್ ನಗರ, ಪದ್ಮನಾಭನಗರ ಮತ್ತು ಶಾಂತಿನಗರ ಕ್ಷೇತ್ರಗಳು ತಲಾ 60 ಕ್ಕೂ ಹೆಚ್ಚು ಉದ್ಯಾನವನಗಳಿವೆ. ಚಾಮರಾಜಪೇಟೆ (10), ಗಾಂಧಿನಗರ (21), ಕೆಆರ್ ಪುರಂ (21), ಚಿಕ್ಕಪೇಟೆ (22), ಪುಲಕೇಶಿನಗರ (22), ಮತ್ತು ಮಹದೇವಪುರ (23)ದಲ್ಲಿ ಅತೀ ಕಡಿಮೆ ಉದ್ಯಾನವನಗಳಿರುವ ಕ್ಷೇತ್ರಗಳಾಗಿವೆ.
ಇತ್ತೀಚೆಗೆ ಬೆಂಗಳೂರಿನ ನಾಗರಿಕ ಸಂಸ್ಥೆಯು ಸ್ವಯಂಸೇವಕರನ್ನು ನಗರದ ಕೆರೆಗಳು ಮತ್ತು ಉದ್ಯಾನವನಗಳನ್ನ ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಒತ್ತಾಯಿಸಿದ್ದರು. ಅದರ ಬೆನ್ನಲ್ಲೆ ಬಿಬಿಎಂಪಿ ಕೆರೆಗಳ ಅಭಿವೃದ್ಧಿಗೆ ಹಣ ನೀಡಿದೆ.












Click it and Unblock the Notifications