ಬಸನಗೌಡ ಪಾಟೀಲ್ ಯತ್ನಾಳರನ್ನು ರಾಜಕೀಯವಾಗಿ ಮುಗಿಸಲು ಪ್ಲಾನ್: ಬಸವರಾಜ್ ಬೊಮ್ಮಾಯಿ
ಬೆಂಗಳೂರು, ಆಗಸ್ಟ್ 28: ಕರ್ನಾಟಕ ರಾಜ್ಯದಲ್ಲಿ ಕಾನೂನು, ನ್ಯಾಯ ಸತ್ತು ಹೋಗಿದ್ದು, ಆಡಳಿತ ಪಕ್ಷ ದ್ವೇಷದ ರಾಜಕಾರಣ ಮಾಡುತ್ತಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಕಬ್ಬಿನ ಕಾರ್ಖಾನೆಗೆ ಅನುಮತಿ ನೀಡದೇ ಅವರನ್ನು ರಾಜಕೀಯವಾಗಿ ಮುಗಿಸುವ ಯತ್ನ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಹಾಗೂ ಬಿಜೆಪಿ ಸಂಸದ ಸವರಾಜ ಬೊಮ್ಮಾಯಿ ಆರೋಪಿಸಿದರು.
ಕಬ್ಬಿನ ಕಾರ್ಖಾನೆಗೆ ಅನುಮತಿ ನೀಡದ ಸರ್ಕಾರ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅನ್ಯಾಯದ ವಿರುದ್ಧ ಶಾಸಕ ಬಸವನಗೌಡ ಪಾಟೀಲ್ ಅವರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಸವರಾಜ ಬೊಮ್ಮಾಯಿ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು.

ತಾಂತ್ರಿಕ ಕಾರಣದ ನೆಪ ಹೇಳುತ್ತಿರುವ ಮಂಡಳಿ
ಶಾಸಕ ಯತ್ನಾಳ್ ಅವರು ಕಾನೂನು ಪ್ರಕಾರವೇ ಸಕ್ಕರೆ ಕಾರ್ಖಾನೆ ಆರಂಭ ಮಾಡಿದ್ದಾರೆ. ಆದರೆ, ಕಳೆದ ವರ್ಷ ಇವರಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಖಾನೆಗೆ ಅನುಮತಿ ಕೊಡಲಿಲ್ಲ. ಆಗ ಇವರು ಕೋರ್ಟ್ ಮೊರೆ ಹೋದರು, ಕೋರ್ಟ್ ನಾಲ್ಕು ವಾರದೊಳಗೆ ಕಾರ್ಖಾನೆ ಪುನಾರಂಭಕ್ಕೆ ಆದೇಶ ನೀಡಿತ್ತು. ಹೀಗಿದ್ದರೂ ಸಹ ಮಾಲಿನ್ಯ ನಿಯಂತ್ರಣ ಮಂಡಳಿಯವರು ತಾಂತ್ರಿಕ ಕಾರಣದ ನೆಪದ ಹೇಳಿ ಅನುಮತಿ ನೀಡುತ್ತಿಲ್ಲ ಎಂದರು.
ರಾಜ್ಯದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ರಾಜಕೀಯವಾಗಿ ಮುಗಿಸಬೇಕಂತಲೂ ಈ ರೀತಿ ಮಾಡಲಾಗುತ್ತಿದೆ. ಎಲ್ಲರನ್ನು ಒಂದೇ ರೀತಿಯಾಗಿ ನೋಡಬೇಕಾದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಯತ್ನಾಳ್ ಅವರಿಗೆ ತಾರತಮ್ಯ ಮಾಡುತ್ತಿದೆ. ಹಲವು ಸಕ್ಕರೆ ಕಾರ್ಖಾನೆಗಳಿಗೆ ಅನುಮತಿ ಕೊಟ್ಟಿದೆ ಎಂದು ಅವರು ವಿವರಿಸಿದರು.
ಪಿಸಿಬಿ ಕಾನೂನು ಉಲ್ಲಂಘಿಸಿದ ಕಾರ್ಖಾನೆಗಳಿಗೆ ಅನುಮತಿ
ಸರ್ಕಾರ ಅನುಮತಿ ನೀಡುತ್ತಿಲ್ಲ ಎಂದು ನಾವು ಸುಮ್ಮನಾಗಿಲ್ಲ. ಪ್ರತಿಭಟನೆ ನಡೆಸಿ ಇಲ್ಲಿಗೇ ಸುಮ್ಮನಾಗುವುದಿಲ್ಲ. ಮುಂದೆಯೂ ಸರ್ಕಾರ ಹಾಗೂ ಇಲಾಖೆ ವಿರುದ್ಧ ಹೋರಾಟ ಮಾಡುತ್ತೇವೆ. ಈ ಕಾರ್ಖಾನೆ ನಂಬಿ ಸಾವಿರಾರು ರೈತರು ಇದ್ದಾರೆ. ಈ ಸಲ ಆ ಭಾಗದಲ್ಲಿ ಹೆಚ್ಚು ಕಬ್ಬು ಬೆಳೆದಿದ್ದಾರೆ, ಯತ್ನಾಳ್ ಅವರ ಮಾಲೀಕತ್ವ ಕಾರ್ಖಾನೆ ತೆರೆಯಬೇಕಿದೆ ಎಂದು ಅವರ ಕಾರ್ಖಾನೆ ಅಗತ್ಯತೆ ತಿಳಿಸಿದರು.

ಕೈಗಾರಿಕೆ ಸಚಿವ ಎಂಬಿ ಪಾಟೀಲ್ ನೇತೃತ್ವದಲ್ಲಿ ರಾಜ್ಯ ಸರ್ಕಾರ ಒಂದು ಕಡೆ ಉತ್ತರ ಕರ್ನಾಟಕದ ಕಡೆಗೆ ಕೈಗಾರಿಕೆಗಳು ಬರಬೇಕು ಎಂದು ಹೇಳುತ್ತದೆ. ಆದರೆ, ಇನ್ನೊಂದು ಕಡೆ ಈ ರೀತಿಯ ರಾಜಕೀಯ ದುರುದ್ದೇಶದಿಂದ ಅನ್ಯಾಯ, ತಾರತಮ್ಯ ಮಾಡುತ್ತದೆ ಎಂದು ಅವರು ಹೇಳಿದರು.
ಈ ಪ್ರತಿಭಟನೆಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್, ವಿರೋಧ ಪಕ್ಷದ ಉಪ ನಾಯಕ ಅರವಿಂದ್ ಬೆಲ್ಲದ್, ಮಾಜಿ ಸಚಿವ ಅಶ್ವಥ್ ನಾರಾಯಣ, ಸಿಟಿ ರವಿ ಹಾಗೂ ಇನ್ನಿತರ ಮುಖಂಡರು ಪಾಲ್ಗೊಂಡಿದ್ದರು.












Click it and Unblock the Notifications