ಸನಾತನ ಧರ್ಮ ಹೇಳಿಕೆ:ಇದು ಹಿಟ್ಲರ್ ಮನಸ್ಥಿತಿ ಎಂದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದೇನು?
ಬೆಂಗಳೂರು, ಸೆಪ್ಟಂಬರ್ 04: ಭಾರತದ ಸನಾತನ ಧರ್ಮ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿರುವ ತಮಿಳುನಾಡು ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ಬಿಜೆಪಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಖಂಡಿಸಿದ್ದಾರೆ. ಸ್ಟಾಲಿನ್ ಹೇಳಿಕೆ ಅವರ ಹಿಟ್ಲರ್ ಮನಸ್ಥಿತಿಯ ಪ್ರತಿಬಿಂಬವಾಗಿದೆ. ಚುನಾವಣೆಯಲ್ಲಿ ಒಂದು ವರ್ಗದವರ ಸೆಳೆಯಲು ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದು, ಕೂಡಲೇ ಉದಯನಿಧಿ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಬಸವರಾಜ ಬೊಮ್ಮಾಯಿ ಅವರು, ಸನಾತನ ಧರ್ಮ ಸರ್ವೇಜನ ಸುಖಿನೊಭವಂತು ಎಂದು ತಿಳಿಸಿತ್ತದೆ. ಕೇವಲ ಮಾನವರಷ್ಟೇ ಅಲ್ಲ ಎಲ್ಲ ಜೀವಿಗಳು ಸುಖವಾಗಿರಲಿ ಎಂದು ಸನಾತನ ಧರ್ಮ ಬಯಸುತ್ತದೆ.

ಇಂತಹ ಸನಾತನ ಧರ್ಮವನ್ನು ಕಿತ್ತೊಗೆಯಬೇಕು ಎಂದು ಆಕ್ಷೇಪಾರ್ಹವಾಗಿ ಹಿಟ್ಲರ್ ಮನಸ್ಥಿತಿಯಲ್ಲಿ ಹೇಳಿಕೆಗಳು ಪ್ರಜಾಪ್ರಭುತ್ವ ವಿರೋಧಿ ಆಗಿದೆ. ಸನಾತನ ಧರ್ಮದಲ್ಲಿ ಎಲ್ಲರಿಗೂ ಸಮಾನ ಅವಕಾಶ ಇದೆ. ಉದಯನಿಧಿ ಸ್ಟಾಲಿನ್ ಸಂವಿಧಾನಕ್ಕೆ ವಿರುದ್ಧವಾದ ಮಾತುಗಳನ್ನು ಆಡಿದ್ದಾರೆ. ಅವರನ್ನು ಮೊದಲು ಸಂಪುಟದಿಂದ ಕಿತ್ತೊಗೆಯಿರಿ ಎಂದು ಬೊಮ್ಮಾಯಿ ಒತ್ತಾಯಿಸಿದರು.
ಇಲ್ಲಿ ಸರ್ವಧರ್ಮಗಳಿಗೆ ಅವಕಾಶ ಇವೆ
ಉದಯನಿಧಿ ಸ್ಟಾಲಿನ್ ಹೇಳಿಕೆಯಿಂದ ಮೈತ್ರಿಕೂಟ INDIA ಮಿತ್ರ ಪಕ್ಷಗಳು ಗೊಂದಲದಲ್ಲಿವೆ. ಭಾರತದಲ್ಲಿ ಎಲ್ಲ ಧರ್ಮಗಳಿಗೂ ಅವಕಾಶವಿದ್ದು, ಬೌದ್ದ, ಜೈನ, ಸಿಖ್, ಇಸ್ಲಾಂ, ಸಿಖ್ ಧರ್ಮಗಳು ನೆಮ್ಮದಿಯಿಂದ ಇವೆ. ಬೇರೆ ಬೇರೆ ರಾಷ್ಟ್ರಗಳಲ್ಲಿ ಏನು ನಡೆಯುತ್ತಿದೆ ಎನ್ನುವುದೆಲ್ಲವು ಗೊತ್ತಿದೆ. ಅಧಿಕಾರದ ಆಸೆಗೆ ತುಷ್ಟೀಕರಣದ ರಾಜಕಾರಣ ಮಾಡಲಾಗುತ್ತಿದೆ. ಇದೆಲ್ಲ ಗಮನಿಸುತ್ತಿರುವ ಜನರೇ ಇವರೆಗೆ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ಉಚಿತ ಯೋಜನೆಗಳನ್ನು ವಿರೋಧಿಸಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ದೇಶದ ಜನರು ಆದಾಯ ಹೆಚ್ಚಾಗಿ ಆರ್ಥಿಕತೆ ಹೆಚ್ಚಾಗಬೇಕು. ಆಗ ದೇಶ ಮತ್ತು ವ್ಯಕ್ತಿಗತ ಅಭಿವೃದ್ಧಿಗೆ ಅವಕಾಶ ಸಿಗಲಿದೆ ಎಂದು ಪ್ರಧಾನಿ ಹೇಳಿದ್ದಾರೆ ಎಂದು ತಿಳಿಸಿದರು.

ಸರ್ಕಾರದಿಂದ ವಿದ್ಯುತ್ ವಲಯ ನಿರ್ಲಕ್ಷ್ಯ
ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ವಿದ್ಯುತ್ ವಲಯವನ್ನು ಕಡೆಗಣಿಸಿದೆ. ಲೊಡ್ ಶೆಡ್ಡಿಂಗ್ ರಾಜ್ಯಾಧ್ಯಂತ ಆರಂಭವಾಗಿದ್ದು, ಬಿಜೆಪಿ ಅವಧಿಯಲ್ಲಿ ಹೆಚ್ಚುವರಿ ವಿದ್ಯುತ್ ಉತ್ಪಾದಿಸಿ ಅದನ್ನು ಮಾರಾಟ ಮಾಡಿ 2,000 ಕೋಟಿ ರೂಪಾಯಿ ಆದಾಯ ಗಳಿಸಿದ್ದೆವು. ಈ ಸರ್ಕಾರ ಕಲ್ಲಿದ್ದಲು ಉತ್ಪಾದನೆ ಪೂರ್ಣ ಪ್ರಮಾಣದಲ್ಲಿ ಅಗುತ್ತಿಲ್ಲ. ಮಳೆ ಬಾರದೇ ಜಲ ವಿದ್ಯುತ್ ಉತ್ಪಾದನೆ ಆಗುತ್ತಿಲ್ಲ. ಹಣಕಾಸಿನ ಸರಿಯಾದ ನಿರ್ವಹಣೆ ಇಲ್ಲದಿರುವುದಕ್ಕೆ ಇದೆಲ್ಲ ಆಗುತ್ತಿದೆ ಎಂದು ಅವರು ದೂರಿದರು.
ಜೂನ್ ತಿಂಗಳಲ್ಲಿ ಮಳೆ ಆಗದ ವೇಳೆಯಲ್ಲಿಯೇ ಎಚ್ಚೆತ್ತುಕೊಳ್ಳದ ರಾಜ್ಯ ಸರ್ಕಾರ, ಕಾವೇರಿ ನೀರು ನಿರ್ವಹಣೆಯೂ ವಿಫಲವಾಗಿದೆ. ಇಲ್ಲಿನ ರೈತರಿಗೆ ಆರಂಭದಲ್ಲಿ ನೀರು ಬಿಡಲಿಲ್ಲ, ತಮಿಳುನಾಡಿಗೆ ನಿರಂತರ ನೀರು ಹರಿಸಲಾಗುತ್ತಿದೆ. ತಮಿಳುನಾಡು ಸರ್ಕಾರ 15,000 ಕ್ಯೂಸೆಕ್ಸ್ ನೀರು ಕೇಳಿತ್ತು. ನಾವು 5 ಸಾವಿರ ಕ್ಯೂಸೆಕ್ಸ್ ನೀರು ಬಿಟ್ಟಿದ್ದೇವೆ ಎಂದು ಕಾಂಗ್ರೆಸ್ ಸಮರ್ಥಿಸಿಕೊಂಡಿದೆ, ಇದೇ ಅವರ ಸಾಧನೆ ಎಂದು ಅವರು ಕಿಡಿ ಕಾರಿದರು.
ಮೇಕೆದಾಟು ಪಾದಯಾತ್ರೆ ಮಾಡಿ ಪ್ರಚಾರ ಪಡೆದರು
ಬಿಜೆಪಿ ಅಧಿಕಾರದಲ್ಲಿದ್ದಾಗ ಶತಮಾನಗಳಿಂದ ಇರುವ ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡಿ ಪ್ರಚಾರ ಗಿಟ್ಟಿಸಿಕೊಂಡರು. ಸದ್ಯ ಎರಡೂ ರಾಜ್ಯಗಳಲ್ಲಿ ನೀರಾವರಿಗೆ ಅಧಿಕ ನೀರಿನ ಬೇಡಿಕೆ ಇದೆ. ಅದಕ್ಕಾಗಿ ಮತ್ತೊಂದು ಡ್ಯಾಮ್ ಮೂಲಕ ನೀರು ಸಂಗ್ರಹಿಸಿ ಬಳಕೆ ಮಾಡಿಕೊಳ್ಳುವುದರಿಂದ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಅನ್ನಭಾಗ್ಯ ಯೋಜನೆಯಲ್ಲಿ ಸುಮಾರು 39 ಲಕ್ಷ ಫಲಾನುಭವಿಗಳಿಗೆ 5 ಕೆಜಿ ಅಕ್ಕಿ ಬದಲು ನೀಡುವ ಹಣ ತಲುಪಿಲ್ಲ. ಅದಕ್ಕೆ ಸರ್ಕಾರ ತಾಂತ್ರಿಕ ಕಾರಣದ ಕುಂಟು ನೆಪ ಹೇಳಿ ಮೋಸ ಮಾಡುತ್ತಿದೆ.
ಒಂದು ಚುನಾವಣೆ ಮುಗಿದು ಮತ್ತೊಂದು ಚುನಾವಣೆ ಬರುವ ಸಂದರ್ಭದಲ್ಲಿ ಪಕ್ಷಾಂತರದ ಮಾತುಗಳು ಕೇಳಿ ಬರುವುದು ಸಹಜ. ಈ ಸಂಬಂದ ನಾನು ಯಾರ ಹೇಳಿಕೆಗಳಿಗೂ ಪ್ರತಿಕ್ರಿಯಿಸಲ್ಲ. ಇದಕ್ಕೆಲ್ಲ ಲೋಕಸಭೆ ಚುನಾವಣೆ ಫಲಿತಾಂಶ ಉತ್ತರ ನೀಡಲಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರದ ಭವಿಷ್ಯ ನಿರ್ಧಾರವಾಗಲಿದೆ ಎಂದರು.












Click it and Unblock the Notifications