Kadalekai Parishe 2024: ಇದೇ ನವೆಂಬರ್‌ಗೆ ಬಸವನಗುಡಿ ಕಡಲೆಕಾಯಿ ಪರಿಷೆ: ಶುಲ್ಕ ರಹಿತ ಮಳಿಗೆಗಳು..
ಬೆಂಗಳೂರು, ನವೆಂಬರ್ 17: ಬೆಂಗಳೂರು ಐತಿಹಾಸಿಕ ಬಸನವಗುಡಿ ಕಡಲೆಕಾಯಿ ಪರಿಷೆಗೆ ಮಹೂರ್ತ ನಿಗದಿಯಾಗಿದೆ. ಪ್ರತಿ ವರ್ಷದಂತೆ ವರ್ಷವು ಬುಲ್ ಟೆಂಪಲ್ ರಸ್ತೆಯಲ್ಲಿ ಎರಡು ದಿನದ ಅದ್ಧೂರಿ ಪರಿಷೆಗೆ ಸರ್ಕಾರ ಸಜ್ಜಾಗಿದೆ. ಈ ಕುರಿತು ಸಾರಿಗೆ ಸಚಿವ ಮತ್ತು ಮುಜರಾಯಿ ಇಲಾಖೆ ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ಶನಿವಾರ ಪೂರ್ವಭಾವಿ ಸಭೆ ನಡೆಯಿತು. ಇದೇ ನವೆಂಬರ್ ನಲ್ಲಿ ಕಡಲೆಕಾಯಿ ಪರಿಷೆ ನಡೆಸುವುದಾಗಿ ಅವರು ತಿಳಿಸಿದ್ದಾರೆ.
ನವೆಂಬರ್ 25 ಮತ್ತು 26ರಂದು ಎರಡು ದಿನಗಳ ಕಾಲ ಬೆಂಗಳೂರಿನ ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನ ಆವರಣದಲ್ಲಿ ಎಂದಿನಂತೆ ವಿಶೇಷ ಪೂಜೆ ಪುನಸ್ಕಾರಗಳು, ಧಾರ್ಮಿಕ ಕೈಂಕರ್ಯಗಳ ಸಮೇತವಾಗಿ ವಿಜೃಂಭಣೆಯ ಪರಿಷೆ ನಡೆಯಲಿದೆ. ಈ ಸಂಬಂಧ ಬಿಬಿಎಂಪಿಯು ಅಗತ್ಯ ಸಿದ್ಧತೆಯಲ್ಲಿ ತೊಡಗಿದೆ.

ಮೊನ್ನೆಯಷ್ಟೇ ಮಲ್ಲೇಶ್ವರಂ ನಲ್ಲಿ ಕಡಲೆಕಾಯಿ ಪರಿಷೆ ನಡೆದಿತ್ತು. ಅದರ ಬೆನ್ನಲ್ಲೆ ಐತಿಹಾಸಿಕ ಹಿನ್ನೆಲೆ ಇರುವ ಬಸವನಗುಡಿ ಕಡಲೆಕಾಯಿ ಪರಿಷೆ ನಡೆಯಲಿದೆ. ಈ ಭಾರಿ ಇಲ್ಲಿ ಹಾಕುವ ಮಳಿಗೆಗಳಿಂದ ಯಾವುದೇ ಶುಲ್ಕ ಪಡೆಯದೇ ಅವಕಾಶ ನೀಡಲು ತೀರ್ಮಾನಿಸಲಾಗಿದೆ ಎಂದು ಸಭೆಯಲ್ಲಿ ರಾಮಲಿಂಗಾರೆಡ್ಡಿ ಅವರು ತಿಳಿಸಿದರು.
ಬೀದಿ ಬದಿ ವ್ಯಾಪಾರಿಗಳಿಂದ ಸುಂಕ ಸಂಗ್ರಹಿಸಲು ಟೆಂಡರ್ ವ್ಯವಸ್ಥೆ ಇದೆ. ಹೀಗಿದ್ದರೂ ಕಳೆದ ಬಾರಿಗೆ ಹಣ ವಸೂಲಿ ಮಾಡಲಾಗಿತ್ತು ಎಂಬ ದೂರುಗಳು ಕೇಳಿ ಬಂದಿವೆ. ಕಡಲೆಕಾಯಿ ಪರಿಷೆಯಲ್ಲಿ ಬಲವಂತದಿಂದ ಗುತ್ತಿಗೆದಾರರು ಮಳಿಗೆದಾರರಿಂದ ಹಣ ಪಡೆದಿದ್ದಾರೆ ಎನ್ನಲಾಗಿದೆ.
ಈ ಕಾರಣದಿಂದಾಗಿ ಈ ವರ್ಷ ಸುಂಕ ವಸೂಲಾತಿ ಟೆಂಡರ್ ಕೈ ಬಿಡಬೇಕು. ಪರಿಷೆಯಲ್ಲಿ ಅವಕಾಶ ನೀಡಲಾದ ಮಳಿಗೆಗಳಿಂದ ಯಾವುದೇ ಶುಲ್ಕ ಪಡೆಯದಂತೆ ಅವರು ಸೂಚಿಸಿದ್ದಾರೆ. ಇದರ ಹೊರತಾಗಿಯೂ ಗುತ್ತಿಗೆದಾರರು ಪರಿಷೆಯಲ್ಲಿ ಆಟಿಕೆಗಳು, ಕಡಲೆಕಾಯಿ ಮಾರಾಟಗಾರರು, ಇನ್ನಿತರ ಮಳೆಗಳಿಂದ ಹಣ ವಸೂಲಿ ಮಾಡಿದ್ದು ಕಂಡು ಬಂದರೆ, ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಲಕ್ಷಾಂತರ ಭಕ್ತರು ಪರಿಷೆಗೆ ಆಗಮನ: ಅಗತ್ಯ ವ್ಯವಸ್ಥೆ
ಇನ್ನೂ ಈ ಬಾರಿಯು ಎರಡು ದಿನ ಕಡಲೆಕಾಯಿ ಪರಿಷೆಯಲ್ಲಿ ಲಕ್ಷಗಟ್ಟಲೇ ಭಕ್ತರು ಆಗಮಿಸುತ್ತಾರೆ. ಬಸನ ಮೂರ್ತಿ ಪೂಜೆ ಸಲ್ಲಿಸಲು, ದೊಡ್ಡ ಗಣಪತಿ ದೇವರ ದರ್ಶನಕ್ಕೆ ಬರಲಿದ್ದಾರೆ. ಹೀಗಾಗಿ ನೂಕು ನುಗ್ಗಲು ಆಗದಂತೆ ಅಗತ್ಯ ವ್ಯವಸ್ಥೇ ಮಾಡಲಾಗುತ್ತದೆ. ಸರತಿ ಸಾಲಿನಲ್ಲಿ ಬರಲು, ಹೋಗಲು ಅನುಕೂಲವಾಗುವಂತೆ ಬ್ಯಾರಿಕೇಡ್ ಅಳವಡಿಸಲಾಗುತ್ತದೆ.
ಮಹಿಳೆಯರು, ಮಕ್ಕಳು, ಹಿರಿಯನಾಗರಿಕರು ಸರಾಗವಾಗಿ ದೇವಸ್ಥಾನದ ಒಳಗೆ ಬಂದು ಹೋಗಲು ಅನುವಾಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದರು.












Click it and Unblock the Notifications