ಈ ಬಾರಿ ಬೆಂಗಳೂರು ಜನತೆಗೆ ಇಬ್ಬನಿ ತಾಕಲಿಲ್ಲ!
ಬೆಂಗಳೂರು, ಜ.30: ಮೊನ್ನೆ ಸಹೋದ್ಯೋಗಿಯೊಬ್ಬರು ಹೇಳ್ತಿದ್ದರು... ಇವತ್ತು ಮಂಜು ಬೀಳ್ತಿದೆ. ಈ ಋತುಮಾನದಲ್ಲಿ ಇದೇ ಮೊದಲ ಬಾರಿಗೆ ಇಬ್ಬನಿ ಕಂಡಿದ್ದು ಎಂದರು. ಹೌದು ಈ ಬಾರಿ ಒಂದಷ್ಟು ಚಳಿ ಹೆಚ್ಚಾಗಿಯೇ ಇತ್ತಾದರೂ ಇಬ್ಬನಿ ಬೀಳುವಷ್ಟು ಇರಲಿಲ್ಲ. ನಿಜಕ್ಕೂ ಇದು ಆತಂಕಕಾರಿಯೇ.
ಚಳಿಗಾಲದಲ್ಲಿ ಮಂಜು ಬಿದ್ದ ಬೆಳಗಿನ ಜಾವಗಳು ಬಹಳಷ್ಟು ಚೇತೋಹಾರಿಯಾಗಿರುತ್ತವೆ. ಇದು ಸುತ್ತಮುತ್ತಲ ಪರಿಸರಕ್ಕೂ ಅತ್ಯಗತ್ಯವಾಗಿರುತ್ತದೆ. ಆದರೆ ಮಿತಿಮೀರಿದ ನಗರೀಕರಣ, ಮತ್ತು ಅದರಿಂದುಂಟಾಗುವ ವಾಯುಮಾಲಿನ್ಯದಿಂದಾಗಿ ಪರಿಸರ ಸಾಕಷ್ಟು ಹಾಳಾಗಿದೆ. ಹಾಗಾಗಿ ಉದ್ಯಾನನಗರಿ ಪಟ್ಟ ಕಳಚಿಕೊಂಡಿರುವ ಬೆಂಗಳೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಹವಾಮಾನ ವೈಪರೀತ್ಯಗಳು ಕಂಡುಬರುತ್ತಿವೆ.

ಹವಾಮಾನ ಇಲಾಖೆಯ ಮೂಲಗಳ ಪ್ರಕಾರ ಇನ್ನೇನು ಜನವರಿ ಮುಗಿಯುತ್ತಿದೆ. ಆದರೂ ಬೆಂಗಳೂರಿನ ಒಳಪ್ರದೇಶಗಳಲ್ಲಿ ಗಿಡ ಮರಗಳ ಮೇಲೆ ಮಂಜು ಬಿದ್ದೇ ಇಲ್ಲ. ಇಲ್ಲಿನ ಜನತೆಗೆ ಇಬ್ಬನಿ ತಾಕಿಲ್ಲ! ಸದ್ಯದ ಹವಾಮಾನವನ್ನು ನೋಡಿದರೆ ಮಂಜು ಬೀಳುವ ಸೂಚನೆಗಳೂ ಇಲ್ಲ. ಮಂಜಿನ ದಿನಗಳಲ್ಲಿ ಹಬೆಯಾಡುವ ಕಾಫಿ ಹೀರುವ ಸೊಬಗು ಇತಿಹಾಸದ ಪುಟ್ಟ ಸೇರುತ್ತಿದೆ ಎಂದು ವ್ಯಥೆ ಪಡುತ್ತಾರೆ ನಗರದ ಹಿರಿಯ ಜೀವಿಗಳು.
ನಗರದ ಹೊರವಲಯದಲ್ಲಿ ಅದರಲ್ಲೂ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಾಲ್ಕೈದು ಬಾರಿ ವಿಪರೀತ ಎನಿಸುವಷ್ಟು ಮಂಜು ಬಿದ್ದಿದೆ. ಜನವರಿ 12ರಂದು 50 ಮೀಟರ್ ದೂರಕ್ಕೆ ದೃಷ್ಟಿ ನಿಂತು ಹೋಗಿತ್ತು. {ಆರ್ಕಿಟಿಕ್ ಧ್ರುವ ಶೀತಲ: ಅಮೆರಿಕ ವಿಲವಿಲ}
ದೃಷ್ಟಿಯು 800 ಮೀಟರ್ ದೂರಕ್ಕೆ ನಿಂತು ಹೋದರೆ ಮಂಜು ಬೀಳುತ್ತಿದೆ ಎಂದರ್ಥ. ಅದಕ್ಕಿಂತ ಕಡಿಮೆ ಅಂದರೆ 200 ಮೀಟರ್ ದೂರಕ್ಕೇ ದೃಷ್ಟಿ ನಿಂತರೆ ತೀವ್ರ ಮಂಜು ಬೀಳುತ್ತಿದೆ ಎಂದು ಹೇಳಲಾಗುತ್ತದೆ ಎನ್ನುತ್ತಾರೆ ಭಾರತೀಯ ಹವಾಮಾನ ಇಲಾಖೆಯ (IMD) ನಿರ್ದೇಶಕ ಬಿ ಪುಟ್ಟಣ್ಣ ಅವರು.
ಗಾಳಿಯಲ್ಲಿ ತೇವಾಂಶ ಹೆಚ್ಚಾಗಿ ಘನೀಕೃತವಾದರೆ ಆಗ ಮಂಜು ಬೀಳುತ್ತದೆ. ಆದರೆ ಈ ಬಾರಿ ತಾಪಮಾನ 14 ಡಿಗ್ರಿಗಿಂತ ಕಡಿಮೆಯಾಗಲಿಲ್ಲ. ಇದ್ದಬದ್ದ ಕೆರೆಕುಂಟೆಗಳು ಮತ್ತು ಮರಗಳ ಜಾಗದಲ್ಲಿ ಸಿಮೆಂಟ್ ಕಟ್ಟಡಗಳು ತಲೆಯೆತ್ತುತ್ತಿರುವಾಗ ಗಾಳಿಯಲ್ಲಿ ತೇವಾಂಶ ಕರಗುತ್ತದೆ! ಮುಂದಿನ ವರ್ಷಗಳಲ್ಲಿ ಇದು ಕಾಯಂ ಆಗುವ ಅಪಾಯವೂ ಇದೆ.












Click it and Unblock the Notifications