ಸಾಲು ಸಾಲು ಹಬ್ಬಗಳು ಹತ್ತಿರ: ಗಗನಕ್ಕೇರುತ್ತಿದೆ ಬಾಳೆಹಣ್ಣು ದರ!
ಬೆಂಗಳೂರು, ಆಗಸ್ಟ್ 15: ಟೊಮೊಟೋ ಸೇರಿದಂತೆ ತರಕಾರಿಗಳ ಬೆಲೆ ಗಗನಕ್ಕೇರಿದ ಬಳಿಕ ಈಗ ಹಣ್ಣುಗಳ ಬೆಲೆ ಕೂಡ ಹೆಚ್ಚಾಗುತ್ತಿದೆ. ಹಬ್ಬಗಳ ಸೀಸನ್ ಹತ್ತಿರವಾಗುತ್ತಿದ್ದು ಬಾಳೆಹಣ್ಣು ದರ ಗಗನಕ್ಕೇರಿದೆ. ಕಳೆದ ಒಂದು ವಾರದಿಂದ ಬಾಳೆಹಣ್ಣು ದರ 100 ರೂಪಾಯಿ ದಾಟಿದ್ದು,
ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿರುವ ಪ್ರಕಾರ, ಬೆಂಗಳೂರಿಗೆ ಬಾಳೆಹಣ್ಣಿನ ಪೂರೈಕೆ ಕಡಿಮೆಯಾಗಿದ್ದು ದರ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ತಿಳಿಸಿದೆ. ಬೆಂಗಳೂರು ಎಪಿಎಂಸಿಯ ಕಾರ್ಯದರ್ಶಿ ರಾಜಣ್ಣ ಎನ್ನುವವರು ಮಾತನಾಡಿ, ನಗರಕ್ಕೆ ಹೆಚ್ಚಿನ ಬಾಳೆಹಣ್ಣು ಪೂರೈಕೆಯಾಗುವುದು ತಮಿಳುನಾಡಿನಿಂದ, ಆದರೆ ಈಗ ಪೂರೈಕೆ ಕಡಿಮೆಯಾಗಿದೆ ಎಂದು ಹೇಳಿದರು.

"ನಗರದಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ - ಎಲಕ್ಕಿಬಾಳೆ ಮತ್ತು ಪಚ್ಚಬಾಳೆ. ಬೇಡಿಕೆ-ಪೂರೈಕೆಯಲ್ಲಿ ವ್ಯತ್ಯಾಸವಿದೆ. ಸದ್ಯಕ್ಕೆ ತಮಿಳುನಾಡಿನಿಂದ ಆವಕ ಕಡಿಮೆಯಾಗಿದೆ. 30 ದಿನಗಳ ಹಿಂದೆ ಬಿನ್ನಿಪೇಟೆ ಮಾರುಕಟ್ಟೆಗೆ 1,500 ಕ್ವಿಂಟಾಲ್ ಏಲಕ್ಕಿಬಾಳೆ ಬರುತ್ತಿತ್ತು, ಇಂದು 1,000 ಕ್ವಿಂಟಾಲ್ ಮಾತ್ರ ಬಂದಿದೆ" ಎಂದು ರಾಜಣ್ಣ ತಿಳಿಸಿದರು.
ಶತಕ ದಾಟಿದ ಬಾಳೆಹಣ್ಣು ದರ
ಬೆಂಗಳೂರು ಎಪಿಎಂಸಿ ಸಂಸ್ಥೆಯ ಪ್ರಕಾರ ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಆನೇಕಲ್ ಮತ್ತು ಬೆಂಗಳೂರು ಗ್ರಾಮಾಂತರದಿಂದ ಹೆಚ್ಚಿನ ಬಾಳೆಹಣ್ಣು ಪೂರೈಕೆಯಾಗುತ್ತದೆ. ತಮಿಳುನಾಡಿನ ಹೊಸೂರು ಮತ್ತು ಕೃಷ್ಣಗಿರಿಯಿಂದ ಕೂಡ ಹೆಚ್ಚಿನ ಬಾಳೆಹಣ್ಣು ನಗರಕ್ಕೆ ಬರುತ್ತದೆ. ಅಂತರ-ರಾಜ್ಯ ಪೂರೈಕೆ ಕಡಿಮೆಯಾದ ಕಾರಣ, ಏಲಕ್ಕಿ ಬಾಳೆಹಣ್ಣಿನ ಸಗಟು ಬೆಲೆಯು ಪ್ರಸ್ತುತ ಪ್ರತಿ ಕೆ.ಜಿಗೆ 78 ರೂ. ಮತ್ತು ಪಚ್ಚಬಾಲೆ ಕೆ.ಜಿಗೆ 18-20 ರೂಪಾಯಿ ಸಾಗಾಣಿಕೆ ವೆಚ್ಚ ಸೇರಿ ಏಲಕ್ಕಿ ಬಾಳೆ ಚಿಲ್ಲರೆ ಮಾರುಕಟ್ಟೆಯಲ್ಲಿ 100 ರೂಪಾಯಿ ಇದ್ದರೆ, ಪಚ್ಚಬಾಳೆ ದರ 40 ರೂಪಾಯಿ ಇದೆ.
ಸಾಲು ಸಾಲು ಹಬ್ಬಗಳು
ಓಣಂ, ಗಣೇಶ ಚತುರ್ಥಿ, ನವರಾತ್ರಿ, ವರಮಹಾಲಕ್ಷ್ಮಿ, ಗೌರಿ ಗಣೇಶ ಹಬ್ಬಗಳು ಇರುವ ಕಾರಣ ಮುಂದಿನ ದಿನಗಳಲ್ಲಿ ಬೇಡಿಕೆ ಮತ್ತಷ್ಟು ಹೆಚ್ಚಾಗಲಿದ್ದು, ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಶಿವಮೊಗ್ಗದಿಂದ ಕೂಡ ಹೆಚ್ಚಿನ ಪ್ರಮಾಣದಲ್ಲಿ ಬಾಳೆಹಣ್ಣು ಪೂರೈಕೆಯಾಗುತ್ತಿತ್ತು, ಆದರೆ ಅಲ್ಲಿಂದ ಕೂಡ ಪೂರೈಕೆ ಕಡಿಮೆಯಾಗಿದೆ ಹಬ್ಬದ ಸಂದರ್ಭದಲ್ಲಿ ಪೂರೈಕೆ ಕಡಿಮೆಯಾದರೆ ಬೆಲೆಗಳು ಮತ್ತಷ್ಟು ಗಗನಕ್ಕೇರುವ ಸಾಧ್ಯತೆ ಇದೆ ಎಂದು ಹಣ್ಣು ಮಾರಾಟಗಾರರು ನಿರೀಕ್ಷೆ ಮಾಡಿದ್ದಾರೆ.
ಹಬ್ಬಗಳು ಸಮೀಪವಾಗಿರುವ ಸಂದರ್ಭದಲ್ಲೇ ಬೆಲೆ ಇಷ್ಟೊಂದು ಹೆಚ್ಚಿದ್ದರೆ ಹಬ್ಬಗಳ ದಿನ ಅದು ಇನ್ನೂ ಭಾರಿ ಏರಿಕೆಯಾಗಲಿದೆ. ಸಾಮಾನ್ಯ ದಿನಗಳಿಂತ ಹಬ್ಬದ ಸಂದರ್ಭದಲ್ಲಿ ಬೇಡಿಕೆ ದುಪ್ಪಟ್ಟಿರುತ್ತದೆ ಇಂತಹ ಸಂದರ್ಭದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪೂರೈಕೆ ಇಲ್ಲದಿದ್ದರೆ ಬೆಲೆಗಳನ್ನು ನಿಯಂತ್ರಿಸುವುದು ಕಷ್ಟವಾಗಲಿದೆ.
ಮಧ್ಯವರ್ತಿಗಳು, ವ್ಯಾಪಾರಿಗಳೇ ಕಾರಣ?
ಇನ್ನು ಬೆಲೆ ಏರಿಕೆಗೆ ವ್ಯಾಪಾರಿಗಳು ಮತ್ತು ಮಧ್ಯವರ್ತಿಗಳೇ ಕಾರಣ ಎಂದು ರೈತರು ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಬಾಳೆ ಬೆಳೆಯುವ ಕೊಡಗಿನ ಚಿನಪ್ಪ ಪಾಲಂದಿರ ಮಾತನಾಡಿ, ಕೊಡಗು, ಮೈಸೂರು, ಹಾಸನ ಸೇರಿದಂತೆ ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸಾಕಷ್ಟು ಮಂದಿ ಬಾಳೆ ಬೆಳೆಯುತ್ತಿದ್ದಾರೆ. ಆದರೆ ರೈತರು ನೇರವಾಗಿ ಮಾರುಕಟ್ಟೆಗೆ ಹಣ್ಣುಗಳನ್ನು ಪೂರೈಸಲು ಆಗುತ್ತಿಲ್ಲ ಎಂದು ಹೇಳಿದ್ದಾರೆ.
"ನಾವು ಸಾಗಣೆದಾರರಿಗೆ ಕೆಜಿಗೆ ಸುಮಾರು 25 ರೂಪಾಯಿಗಳನ್ನು ನೀಡುತ್ತೇವೆ. ಸಾರಿಗೆ ತೊಂದರೆಯಾಗಿದೆ. ಈ ಗುಡ್ಡಗಾಡು ಪ್ರದೇಶಗಳಿಂದ ಬೆಂಗಳೂರು ಕೇವಲ 100-200 ಕಿಮೀ ದೂರದಲ್ಲಿರುವಾಗ, ನಮ್ಮ ಉತ್ಪನ್ನಗಳನ್ನು ಅಲ್ಲಿಗೆ ಸಾಗಿಸಲು ನಮಗೆ ಸಣ್ಣ ಗಾತ್ರದ ಟ್ರಕ್‌ಗಳ ಸಂಘಟಿತ ಸಾರಿಗೆ ಅಗತ್ಯವಿದೆ. ನಮ್ಮ ಇಳುವರಿಯನ್ನು ಮಾರುಕಟ್ಟೆಯ ವ್ಯಾಪಾರಿಗಳ ಮಾಲೀಕತ್ವದ ಸಣ್ಣ ಟ್ರಕ್‌ಗಳಿಗೆ ಲೋಡ್ ಮಾಡಬೇಕು, 20,000 ಕೆಜಿ ಲೋಡ್ ಆಗುವವರೆಗೆ ಅವರು ಹೊರಡುವುದಿಲ್ಲ, ಕೆಲವು ಬಾರಿ ಸ್ಥಳೀಯ ಜಮೀನುಗಳಲ್ಲಿ ಅಷ್ಟು ಇಳುವರಿ ಇರುವುದಿಲ್ಲ, ಹಣ್ಣುಗಳು ಕೂಡ ಬೇಗ ಕೊಳೆಯುತ್ತವೆ." ಎಂದು ಹೇಳಿದರು. ತುಮಕೂರು ಮತ್ತು ಚಿತ್ರದುರ್ಗದ ಕೆಲವು ರೈತರು ಸಗಟು ಮಾರುಕಟ್ಟೆಯಲ್ಲಿ ಈ ವರ್ಷ ಬಾಳೆ ಇಳುವರಿಗೆ ಉತ್ತಮ ಬೆಲೆ ಸಿಕ್ಕಿಲ್ಲ ಎಂದು ವರದಿಯಾಗಿದೆ.
ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ ಕಮ್ಮರಡ್ಡಿ ಮಾತನಾಡಿ, ಬಾಳೆ ಪೂರೈಕೆ ಮತ್ತು ಬೇಡಿಕೆಯ ಅಂತರ ಇರುವುದು ಅಚ್ಚರಿ ಮೂಡಿಸಿದೆ. "ಮಾರ್ಕೆಟಿಂಗ್ ವ್ಯವಸ್ಥೆಯಲ್ಲಿ ಏನೋ ತಪ್ಪಾಗಿದೆ ಮತ್ತು ಈ ಕೊರತೆಯು ಹವಾಮಾನ ಪ್ರೇರಿತವಲ್ಲ ಎಂದು ಅನೇಕರು ಹೇಳಿದ್ದಾರೆ. ಪೂರೈಕೆ ಮತ್ತು ಬೇಡಿಕೆಯಲ್ಲಿ ವ್ಯತ್ಯಾಸ ಇದ್ದಾಗ ರೈತರಿಗೆ ಹೆಚ್ಚಿನ ಬೆಲೆ ಸಿಗಬೇಕು, ಆದರೆ ಇಲ್ಲಿ ಆ ರೀತಿ ಆಗುತ್ತಿಲ್ಲ, ಏನೋ ತಪ್ಪಾಗಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications