ಪತ್ನಿ ಕೊಲೆ ಆರೋಪ: ಬೇಗೂರು PSI ರಮೇಶ್‌ಗೆ ಜಾಮೀನು ನಿರಾಕರಿಸಿದ ಹೈಕೋರ್ಟ್
ಬೆಂಗಳೂರು, ಡಿಸೆಂಬರ್ 23: ಪತ್ನಿಯ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಬೇಗೂರು ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಆಗಿ ಕೆಲಸ ಮಾಡುತ್ತಿರುವ ಎಸ್.ವಿ ರಮೇಶ್‌ಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ. ಎಸ್.ವಿ ರಮೇಶ್ ಇದೀಗ ಬಂಧನ ಭೀತಿ ಎದುರಿಸುವಂತಾಗಿದೆ. ಮೇಲ್ನೋಟಕ್ಕೆ ಸಾಕ್ಷ್ಯಾಧಾರಗಳು ಕಂಡು ಬಂದಿದೆ ಎಂದು ಹೇಳಿರುವ ನ್ಯಾಯಾಲಯ ಜಾಮೀನು ನೀಡಲು ಸಾಧ್ಯವಿಲ್ಲವೆಂದಿದೆ.
ಜಾಮೀನು ನಿರಾಕರಿಸಿದ್ದ ವಿಚಾರಣಾ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಬೇಗೂರು ಪೊಲೀಸ್ ಠಾಣೆಯಲ್ಲಿಪಿಎಸ್‌ಐ ಆಗಿ ಕೆಲಸ ಮಾಡುತ್ತಿದ್ದ ಎಸ್.ವಿ.ರಮೇಶ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ಮಾಡಿದೆ.

ಹೈಕೋರ್ಟ್ ಆದೇಶವೇನು?
ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ ಘಟನೆ ನಡೆದ ಮನೆಯಲ್ಲಿ ಅನುಮಾನಾಸ್ಪದ ಪರಿಸ್ಥಿತಿಯಲ್ಲಿ ಸಾವು ಸಂಭವಿಸಿದೆ ಮತ್ತು ಆರೋಪ ಪಟ್ಟಿಯಲ್ಲಿನ ಸಾಕ್ಷ್ಯಾಧಾರಗಳ ಪ್ರಕಾರ, ಆರೋಪಿಯು ಮೃತರನ್ನು ದೈಹಿಕ ಮತ್ತು ಮಾನಸಿಕ ಹಿಂಸೆಗೆ ಒಳಪಡಿಸುತ್ತಿದ್ದಾರೆ ಎಂಬ ಅಂಶ ಗೊತ್ತಾಗಿದೆ.
ದೂರನ್ನು ಪರಿಶೀಲಿಸಿದಾಗ, ಮೃತರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಆರೋಪಿಗಳು ದೂರುದಾರರಿಗೆ ಮಾಹಿತಿ ನೀಡಿಲ್ಲ ಮರಣೋತ್ತರ ವರದಿಯ ಪ್ರಕಾರ, ಮೃತ ದೇಹದ ಮೇಲೆ ಕೆಲವು ಬಾಹ್ಯ ಗಾಯಗಳು, ಆಂತರಿಕ ರಕ್ತಸ್ರಾವ ಕಂಡುಬಂದಿದೆ ಎಂದು ಹೇಳಿದೆ.
ಜೊತೆಗೆ ಡೆತ್ ನೋಟ್‌ನ ನಿಖರತೆಯನ್ನು ಈ ಹಂತದಲ್ಲಿ ಪರಿಶೀಲಿಸಲು ಸಾಧ್ಯವಿಲ್ಲ. ಪ್ರಾಸಿಕ್ಯೂಷನ್ ಸಂಗ್ರಹಿಸಿದ ವಸ್ತುಗಳಿಂದ, ಮೇಲ್ಮನವಿದಾರನ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾದ ಅಪರಾಧಗಳಿಗಾಗಿ ಮೇಲ್ನೋಟಕ್ಕೆ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ, ಜಾಮೀನು ನೀಡಿದಲ್ಲಿ ಸಾಕ್ಷ್ಯವನ್ನು ತಿರುಚುವ ಎಲ್ಲಾ ಸಾಧ್ಯತೆಗಳಿವೆ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ಪ್ರಕರಣದ ಹಿನ್ನೆಲೆ ಏನು..?
ಚಿಕ್ಕಬಳ್ಳಾಪುರ ತಾಲೂಕಿನವರಾದ ರಮೇಶ್ ಮೃತ ವಿ.ಶಿಲ್ಪಾ ಅವರನ್ನು ಬಿಇ ವ್ಯಾಸಂಗ ಮಾಡುತ್ತಿದ್ದಾಗ ಪ್ರೀತಿಸಿ ಮದುವೆಯಾಗಿದ್ದರು. ಶಿಲ್ಪ ಪರಿಶಿಷ್ಟ ಜಾತಿಗೆ ಸೇರಿದ್ದವರಾದ್ದರಿಂದ ರಮೇಶ್ ಕುಟುಂಬಸ್ಥರು ವಿವಾಹಕ್ಕೆ ವಿರೋಧಿಸಿದ್ದರೂ, ಆದರೂ ವಿವಾಹವಾಗಿದ್ದ ಅರ್ಜಿದಾರರು ಚಿಂತಾಮಣಿಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ನೋದಣಿಯನ್ನೂ ಮಾಡಿಸಿದ್ದರು.
ಇದಾದ ಬಳಿಕ ಶಿಲ್ಪಾಗೆ ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡುವುದಕ್ಕೆ ಪ್ರಾರಂಭಿಸಿದ್ದರು. ಈ ನಡುವೆ ಜೂನ್ 2, 2023ರಂದು, ಶಿಲ್ಪಾ ಅವರ ತಂದೆ ವೆಂಕಟರಾಯಪ್ಪ ಅವರು ತಮ್ಮ ಮಗಳಿಗೆ ಕರೆ ಮಾಡಿದಾಗ ಸ್ವೀಕರಿಸಿರಲಿಲ್ಲ. ಮರುದಿನ ಬೆಳಿಗ್ಗೆ ತನ್ನ ಮಗಳನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಮನೆಯ ಮಾಲೀಕರಿಂದ ಮಾಹಿತಿ ಪಡೆದರು. ತಕ್ಷಣವೇ ದೂರುದಾರರು ಆಸ್ಪತ್ರೆಗೆ ತೆರಳಿದಾಗ ಶಿಲ್ಪಾ ಮೃತಪಟ್ಟಿದರು.
ಘಟನೆ ನಂತರ ಶಿಲ್ಪಾರ ತಂದೆ, ರಮೇಶ್ ಮತ್ತವರ ಸಹೋದರ ಹಾಗೂ ಮನೆಯ ಮಾಲೀಕರ ವಿರುದ್ಧ ಐಪಿಸಿ ಸೆಕ್ಷನ್ 498 ಎ, 508, 506, 302, 304 ಬಿ, 201 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ, 1986 ರ ಸೆಕ್ಷನ್ 3 (1) (ಆರ್), 3 (2) (ವಿ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ನಂತರ ಜಾಮೀನು ಕೋರಿ ಹೈರ್ಟ್ ಮೆಟ್ಟಿಲೇರಿದ್ದರು.












Click it and Unblock the Notifications