BS Yediyurappa: ಯಡಿಯೂರಪ್ಪ ವಿರುದ್ಧ ದೂರ ದಾಖಲಿಸಲು ಸಂತ್ರಸ್ತರನ್ನು ಆರು ಗಂಟೆ ಕಾಯಿಸಿದ ಪೊಲೀಸರು: ದೂರಿನಲ್ಲಿ ಏನಿದೆ?
ಬೆಂಗಳೂರು, ಮಾರ್ಚ್ 15: ಕಳೆದ ತಿಂಗಳು ಬೆಂಗಳೂರಿನ ತಮ್ಮ ನಿವಾಸದಲ್ಲಿ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿಯ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಗುರುವಾರ ತಡರಾತ್ರಿ ಪ್ರಕರಣ ದಾಖಲಿಸಲಾಗಿದೆ.
ತನ್ನ ಮಗಳ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ನ್ಯಾಯ ಕೋರಿ, ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸುವಂತೆ ಮನವಿ ಮಾಡಲು ಫೆಬ್ರವರಿ 2 ರಂದು ಬಿ ಎಸ್ ಯಡಿಯೂರಪ್ಪ ಅವರ ನಿವಾಸಕ್ಕೆ ಬಾಲಕಿ ಮತ್ತು ಆಕೆಯ ತಾಯಿ ಭೇಟಿ ನೀಡಿದ್ದರು. ಬಾಲಕಿಯ ತಾಯಿ ದೂರು ದಾಖಲಿಸಿದ ನಂತರ 81 ವರ್ಷದ ಯಡಿಯೂರಪ್ಪ ವಿರುದ್ಧ ಬೆಂಗಳೂರಿನ ಸದಾಶಿವನಗರ ಪೊಲೀಸರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೂರು ನೀಡಲು ಆರು ಗಂಟೆ ಕಾದ ಸಂತ್ರಸ್ತರು
ಇಷ್ಟು ದಿನ ಭಯದಿಂದ ಸುಮ್ಮನಿದ್ದ ಸಂತ್ರಸ್ತರು ಗುರುವಾರ ಸಂಜೆ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದಾರೆ. ಆದರೆ, ಪೊಲಿಸರು ಪ್ರಕರಣವನ್ನು ದಾಖಲಿಸಿಕೊಳ್ಳದೆ ಬರೋಬ್ಬರಿ ಆರು ಗಂಟೆಗಳ ಕಾಲ ಸಂತ್ರಸ್ತರನ್ನು ಕಾಯಿಸಿದ್ದಾರೆ. ತಮಗಾದ ಅನ್ಯಾಯಕ್ಕೆ ನ್ಯಾಯ ಬೇಕು ಎಂದು ಪಟ್ಟು ಹಿಡಿದು ಸಂತ್ರಸ್ಥರು ತಡ ರಾತ್ರಿವರೆಗೂ ಕಾದಿದ್ದಾರೆ. ಹೀಗಾಗಿ ರಾತ್ರಿ ಹನ್ನೆರಡು ಗಂಟೆಗೆ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪೋಕ್ಸೋ (Protection of Children from Sexual Offences (Pocso) Act) ಕಾನೂನಿನ ಸೆಕ್ಷನ್ 8 ಮತ್ತು ಐಪಿಸಿ ಸೆಕ್ಷನ್ 354 (ಎ) ಅಡಿಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೋಕ್ಸೋ ಕಾಯ್ದೆಯ ಸೆಕ್ಷನ್ 8ರ ಪ್ರಕಾರ ಆರೋಪ ಸಾಬೀತಾದದಲ್ಲಿ ಕನಿಷ್ಠ ಮೂರು ವರ್ಷ, ಕೆಲವೊಮ್ಮೆ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಜೊತೆಗೆ ದಂಡವನ್ನು ವಿಧಿಸಬಹುದು.
ಐಪಿಸಿ ಸೆಕ್ಷನ್ 354 ಎ ಲೈಂಗಿಕ ಕಿರುಕುಳಕ್ಕೆ ಶಿಕ್ಷೆಯನ್ನು ವಿಧಿಸುತ್ತದೆ. ಇಷ್ಟವಿಲ್ಲದಿದ್ದರೂ ಲೈಂಗಿಕ ಅಭಿವ್ಯಕ್ತಿಯನ್ನು ಮಾಡುವುದು, ಲೈಂಗಿಕ ಅನುಕೂಲಕ್ಕಾಗಿ ಬೇಡಿಕೆ ಅಥವಾ ವಿನಂತಿ ಮಾಡುವುದು, ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಅಶ್ಲೀಲವಾದದ್ದನ್ನು ತೋರಿಸುವುದು ಶಿಕ್ಷಾರ್ಹ ಅಪರಾಧವೆಂದು ಸೆಕ್ಷನ್ 354 ಎ ಹೇಳುತ್ತದೆ.

ಪ್ರಥಮ ಮಾಹಿತಿ ವರದಿ ಹೇಳೋದೋನು?
ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಪ್ರಕಾರ, ಅಪ್ರಾಪ್ತ ಮಗಳ ಮೇಲೆ ಈ ಹಿಂದೆ ಆಗಿದ್ದ ಅತ್ಯಾಚಾರ ಪ್ರಕರಣ ಸಂಬಂಧ ನ್ಯಾಯ ಒದಗಿಸುವಂತೆ ಕೋರಿ, ಎಸ್‌ಐಟಿ ತನಿಖೆಗೆ ವಹಿಸುವಂತೆ ಮನವಿ ಮಾಡಲು ಫೆಬ್ರುವರಿ 2 2024ರ ರಂದು ಯಡಿಯೂರಪ್ಪನವರ ಮನೆಗೆ ಸಂತ್ರಸ್ತ ಬಾಲಕಿ ಹಾಗೂ ತಾಯಿ ಹೋಗಿದ್ದಾರೆ. ಆ ವೇಳೆ 9 ನಿಮಿಷಗಳ ಕಾಲ ಯಡಿಯೂರಪ್ಪ ಇವರೊಂದಿಗೆ ಮಾತನಾಡಿದ್ದರು. ಯಡಿಯೂರಪ್ಪ ಬಾಲಕಿಯ ಕೈ ಹಿಡಿದುಕೊಂಡೇ ಮಾತನಾಡುತ್ತಿದ್ದರು. ಆ ವೇಳೆ ಅಪ್ರಾಪ್ತ ಬಾಲಕಿಯನ್ನು ತನ್ನ ರೂಮಿಗೆ ಕರೆದುಕೊಂಡು ಹೋಗಿದ್ದ ಯಡಿಯೂರಪ್ಪ, ಸುಮಾರು 5 ನಿಮಿಷಗಳ ಕಾಲ ಬಾಗಿಲು ಹಾಕಿಕೊಂಡು ಇದ್ದರು. ಆ ವೇಳೆ ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ. ಬಾಲಕಿಯು ರೂಮಿನಿಂದ ಓಡಿಬಂದು ತಾಯಿಗೆ ವಿಷಯವನ್ನು ತಿಳಿಸಿದ್ದಾರೆ.
ಯಾಕೆ ಹೀಗೆ ಮಾಡಿದ್ದಿರಿ ಎಂದು ತಾಯಿ ಕೇಳಿದ್ದಕ್ಕೆ "ರೇಪ್ ಆಗಿದೆಯೋ ಇಲ್ಲವೋ ಎಂದು ಚೆಕ್ ಮಾಡಲು ಹಾಗೆ ಮಾಡಿದೆ" ಎಂದಿದ್ದಾರೆ. ಯಡಿಯೂರಪ್ಪ ನಂತರ ಕ್ಷಮೆಯಾಚಿಸಿ ಈ ವಿಷಯವನ್ನು ಯಾರಿಗೂ ಬಹಿರಂಗಪಡಿಸದಂತೆ ಮಹಿಳೆಗೆ ಕೇಳಿಕೊಂಡಿದ್ದಾರೆ. ಇನ್ನು, ಪ್ರಕರಣದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಬಂಧನದ ಭೀತಿ ಎದುರಾಗಿದೆ.












Click it and Unblock the Notifications