B Khata: ಬಿ ಖಾತಾ ಆಸ್ತಿದಾರರಿಗೆ ಶಾಕ್: ತಪ್ಪದ ಸಂಕಷ್ಟ!
B Khata: ಕರ್ನಾಟಕ ಸರ್ಕಾರವು ಬಿ ಖಾತಾ ಆಸ್ತಿದಾರರಿಗೆ ಗುಡ್‌ನ್ಯೂಸ್ ಕೊಡುವುದಾಗಿ ತಿಳಿಸಿತ್ತು. ಬಿ ಖಾತಾದಿಂದ ಎ ಖಾತಾ ಮಾಡಿಸಿಕೊಳ್ಳುವುದಕ್ಕೆ ನಿರ್ದಿಷ್ಟ ಶುಲ್ಕ ನಿಗದಿ ಮಾಡುವುದು ಹಾಗೂ ಬಿ ಖಾತಾದಿಂದ ಎ ಖಾತಾಗೆ ಪ್ರತ್ಯೇಕ ಪೋರ್ಟಲ್ ರಚನೆ ಮಾಡುವುದಾಗಿಯೂ ರಾಜ್ಯ ಸರ್ಕಾರ ಹೇಳಿತ್ತು. ಆದರೆ ಈ ಸಂಬಂಧ ಯಾವುದೇ ಹೊಸ ಅಪ್ಡೇಟ್ಸ್ ಕೊಡದೆ ಇರುವುದು ಸಂಕಷ್ಟಕ್ಕೆ ಕಾರಣವಾಗಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಬಿ ಖಾತಾ ಆಸ್ತಿದಾರರು ತಮ್ಮ ಆಸ್ತಿಗೆ ಮೌಲ್ಯ ಬರದೆ ಹಾಗೂ ಆಸ್ತಿ ಮಾರಾಟವನ್ನೂ ಮಾಡಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಅಂದಾಜು 30ರಿಂದ 40 ಲಕ್ಷಕ್ಕೂ ಹೆಚ್ಚು ಬಿ ಖಾತಾ ಆಸ್ತಿದಾರರು ಇದ್ದಾರೆ ಎಂದು ಹೇಳಲಾಗಿದೆ. ಇಷ್ಟೊಂದು ಆಸ್ತಿದಾರರು ತಮ್ಮ ಆಸ್ತಿಯನ್ನು ಇನ್ನಾದರೂ ಎ ಖಾತಾಗೆ ಬದಲಾಯಿಸಿಕೊಂಡು ಸಂಕಷ್ಟದಿಂದ ಪಾರಾಗೋಣ ಎಂದು ಕಾಯುತ್ತಿದ್ದಾರೆ. ಯಾಕೆಂದರೆ ಈ ಬಿ ಖಾತಾದಿಂದ ಆಸ್ತಿಗಳ ಮೌಲ್ಯವೂ ಹೆಚ್ಚಾಗುತ್ತಿಲ್ಲ. ಈ ಆಸ್ತಿಯನ್ನು ಖರೀದಿ ಮಾಡುವುದಕ್ಕೆ ಯಾರು ಮುಂದೆಯೂ ಬರುತ್ತಿಲ್ಲ. ಅಲ್ಲದೇ ಆಸ್ತಿ ಇರುವ ಅಥವಾ ಭೂಮಿ ಇರುವ ಪ್ರದೇಶಗಳಲ್ಲಿ ಕಟ್ಟಡಗಳ ನಿರ್ಮಾಣವೂ ಸಾಧ್ಯವಾಗುತ್ತಿಲ್ಲ.

ಯಾವುದೇ ಕಟ್ಟಡ ನಿರ್ಮಾಣ ಸಾಧ್ಯವಾಗದೆ ಹಾಗೂ ಆಸ್ತಿ - ಖರೀದಿ ಮತ್ತು ಮಾರಾಟಕ್ಕೂ ಹಿನ್ನಡೆ ಆಗುತ್ತಿದೆ. ಬಿ ಖಾತಾದಿಂದ ಎ ಖಾತಾ ಮಾಡಿಸಿಕೊಳ್ಳುವುದಕ್ಕೆ ನಿರ್ದಿಷ್ಟ ಶುಲ್ಕ ನಿಗದಿ ಮಾಡುವುದಾಗಿ ರಾಜ್ಯ ಸರ್ಕಾರವು ಭರವಸೆ ನೀಡಿ ಒಂದು ತಿಂಗಳ ಮೇಲಾದರೂ ಈ ವಿಚಾರದಲ್ಲಿ ಯಾವುದೇ ಅಪ್ಡೇಟ್ಸ್ ಸಿಕ್ಕಿಲ್ಲ. ಇನ್ನು ಬೆಂಗಳೂರಿನಲ್ಲಿರುವ ಬಿ ಖಾತಾ ಆಸ್ತಿಗಳಿಗೆ ಎ ಖಾತಾ ಮಾಡಿಸಿಕೊಳ್ಳುವುದಕ್ಕೆ ವ್ಯವಸ್ಥೆ ಕಲ್ಪಿಸುವುದಾಗಿ ಅಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಇಂದಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಭರವಸೆ ನೀಡಲಾಗಿತ್ತು. ಆದರೆ ಇಲ್ಲೂ ಯಾವುದೇ ವ್ಯವಸ್ಥೆ ಆಗಿಲ್ಲ. ಬಿ ಖಾತಾದಿಂದ ಎ ಖಾತಾ ಮಾಡಿಸಿಕೊಂಡರೆ ಆಸ್ತಿ ಮಾರಾಟಕ್ಕೂ ಅನುಕೂಲವಾಗಲಿದೆ. ಕಟ್ಟಡ ನಿರ್ಮಾಣ, ನೀರು ಹಾಗೂ ವಿದ್ಯುತ್ ಪೂರೈಕೆ ಸೌಲಭ್ಯಗಳು ಸಿಗಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಈ ಸಂಬಂಧ ಸರ್ಕಾರದಿಂದ ಅಧಿಕೃತ ಆದೇಶ ಬರದೆ ಇರುವುದು ರಿಯಲ್ ಎಸ್ಟೇಟ್ ಮೇಲೂ ಪರಿಣಾಮ ಬೀರುವುದಕ್ಕೆ ಪ್ರಾರಂಭವಾಗಿದೆ.
ರಿಯಲ್ ಎಸ್ಟೇಟ್‌ಗೆ ಹೊಡೆತ: ಇನ್ನು ಕಳೆದ ಒಂದು ವರ್ಷಕ್ಕೂ ಹೆಚ್ಚು ಅವಧಿಯಿಂದ ಇ ಖಾತಾ ಹಾಗೂ ಬಿ ಖಾತಾ ಗೊಂದಲಗಳಿಂದಾಗಿ ರಿಯಲ್ ಎಸ್ಟೇಟ್‌ಗೆ ಅಲ್ಪ ಪ್ರಮಾಣದ ಹಿನ್ನಡೆ ಆಗಿದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಎಲ್ಲಾ ಖಾತಾಗಳಿಗೂ ಸರ್ಕಾರವು ಇ ಖಾತಾ ಕಡ್ಡಾಯ ಮಾಡಿದೆ. ಅಲ್ಲದೇ ಬಿ ಖಾತಾಗೆ ಎ ಖಾತಾ ನೀಡುವ ವಿಚಾರವು ಗೊಂದಲಮಯವಾಗಿಯೇ ಉಳಿದಿರುವ ಕಾರಣದಿಂದ ರಿಯಲ್ ಎಸ್ಟೇಟ್‌ಗೆ ಅಲ್ಪ ಪ್ರಮಾಣದ ಹಿನ್ನಡೆ ಆಗಿದೆ ಎನ್ನುತ್ತಿದ್ದಾರೆ ರಿಯಲ್ ಎಸ್ಟೇಟ್ ತಜ್ಞರು.












Click it and Unblock the Notifications