ಕುಮಾರಸ್ವಾಮಿ ವಿರುದ್ಧ ಅಪಪ್ರಚಾರಕ್ಕೆ ಯತ್ನ ಪೊಲೀಸ್ ಠಾಣೆಯಲ್ಲಿ ದೂರು
ಬೆಂಗಳೂರು, ನವೆಂಬರ್ 23: ಕುಮಾರಸ್ವಾಮಿ ವಿರುದ್ಧ ಅಪಪ್ರಚಾರ ಮಾಡಲು ತಂಡವೊಂದು ಕಾರ್ಯಪ್ರವೃತ್ತಾಗಿದೆ ಎಂದು ಆರೋಪಿಸಿ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೆಡಿಎಸ್ ಬೆಂಗಳೂರು ನಗರ ಅಧ್ಯಕ್ಷ ಪ್ರಕಾಶ್ ಅವರು ಈ ದೂರು ನೀಡಿದ್ದು, ಕುಮಾರಸ್ವಾಮಿ ಸುತ್ತ ಮುತ್ತ ಓಡಾಡುತ್ತಿರುವ ಕೆಲವು ವ್ಯಕ್ತಿಗಳೇ ಈ ಅಪಪ್ರಚಾರ ಕಾರ್ಯದ ಮುಂದಾಳತ್ವ ವಹಿಸಿರುವ ಶಂಕೆ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸಿಎಂ ಅವರ ಬಗ್ಗೆ ಅಪಪ್ರಚಾರ ಮಾಡಲು ಕಾಲೇಜು, ವಿದ್ಯಾರ್ಥಿಗಳನ್ನು ಬಳಸಿಕೊಳ್ಳುತ್ತಿದ್ದು, ಅವರ ಮೂಲಕ ಮಾಹಿತಿಗಳನ್ನು ಸಂಗ್ರಹಿಸಿ ತಿದ್ದಿ ಸಾಮಾಜಿಕ ಜಾಲತಾಣಗಳ ಮೂಲಕ ಅಪಪ್ರಚಾರದ ಕೆಲಸ ಮಾಡುತ್ತಿದ್ದಾರೆ ಎಂದು ದೂರು ನೀಡಲಾಗಿದೆ.

ಇದೇ ವಿಷಯಕ್ಕೆ ಎರಡು ದಿನಗಳ ಹಿಂದೆ ಖಾಸಗಿ ವಾಹಿನಿಯೊಂದು ವರದಿ ಮಾಡಿತ್ತು. ವರದಿಯ ವಿಡಿಯೋದಲ್ಲಿ ಮೂರು ಮಂದಿ ಯುವಕರು ಸಿಎಂ ನಿವಾಸದ ಎದುರು ಸಿಎಂ ಅವರನ್ನು ಕಾಣಲು ಬಂದಿದ್ದ ವ್ಯಕ್ತಿಗಳನ್ನು ಮಾತನಾಡಿಸಿ ಅವರ ಅರ್ಜಿಗಳ ಫೊಟೊಗಳನ್ನು ತೆಗೆದುಕೊಳ್ಳುತ್ತಿದ್ದರು.
ಇದೇ ಯುವಕರು, ಅರ್ಜಿದಾರರ ಬಳಿ ಕುಮಾರಸ್ವಾಮಿ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿಸಿ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡುತ್ತಿದ್ದಾರೆ. ಈ ರೀತಿಯ ಯುವಕರ ತಂಡ ಇನ್ನೂ ಸಾಕಷ್ಟು ಇದೆ ಎಂದು ಜೆಡಿಎಸ್ ಆರೋಪಿಸಿದೆ.
ಜೆಡಿಎಸ್ ಅಧ್ಯಕ್ಷರಿಂದ ದೂರು ಸ್ವೀಕರಿಸಿರುವ ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣದ ತನಿಖೆ ನಡೆಸುವುದಾಗಿ ಹೇಳಿದ್ದಾರೆ.












Click it and Unblock the Notifications