ಬೆಂಗಳೂರಿನಲ್ಲಿ ಎಟಿಎಂ ಭದ್ರತಾ ಸಿಬ್ಬಂದಿ ಕೊಲೆ

ಸೋಮವಾರ ಮುಂಜಾನೆ 3.30ರ ಸುಮಾರಿಗೆ ಮಹದೇವಪುರದಲ್ಲಿರುವ ಐಡಿಬಿಐ ಬ್ಯಾಂಕ್ ಎಟಿಎಂಗೆ ನುಗ್ಗಿರುವ ದುಷ್ಕರ್ಮಿಗಳು ಅಲ್ಲಿನ ಭದ್ರತಾ ಸಿಬ್ಬಂದಿಯಾದ ಶರ್ಮಾ(23) ಅವರನ್ನು ಕೊಲೆ ಮಾಡಿದ್ದಾರೆ, ಎಟಿಎಂ ದೋಚಲು ಅವರು ಪ್ರಯತ್ನಿಸಿ, ಪರಾರಿಯಾಗಿದ್ದಾರೆ.
ಆರು ಮಂದಿ ಕಳ್ಳರ ಗುಂಪು ಎಟಿಎಂಗೆ ನುಗ್ಗಿದ ತಕ್ಷಣ ಎಟಿಎಂ ಭದ್ರತಾ ಸಿಬ್ಬಂದಿ ಶರ್ಮಾ ಅವರನ್ನು ತಡೆಯಲು ಮುಂದಾಗಿದ್ದಾರೆ. ತಕ್ಷಣ ಅವರ ಮೇಲೆ ಹಲ್ಲೆ ನಡೆಸಿರುವ ಗುಂಪು, ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ದೃಶ್ಯ ಎಟಿಎಂ ಸಿಸಿಟಿವಿಯಲ್ಲಿ ದಾಖಲಾಗಿದೆ.
ಭದ್ರತಾ ಸಿಬ್ಬಂದಿ ಕೊಲೆ ಮಾಡಿರುವ ಕಳ್ಳರು ಎಟಿಎಂ ದೋಚಲು ಪ್ರಯತ್ನಿಸಿದ್ದಾರೆ. ಆದರೆ, ಅದು ಸಾಧ್ಯವಾಗಿಲ್ಲ. ಎಟಿಎಂ ಯಂತ್ರ ಧ್ವಂಸಗೊಳಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಮಹದೇವಪುರ ಪೊಲೀಸರು ಸೇರಿದಂತೆ ಹಿರಿಯ ಅಧಿಕಾರಿಗಳು ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ದುಷ್ಕರ್ಮಿಗಳಿಂದ ಹತ್ಯೆಯಾದ ಶರ್ಮಾ ಮಧ್ಯಪ್ರದೇಶ ಮೂಲದವರಾಗಿದ್ದು ಕೆಲವು ದಿನಗಳ ಹಿಂದೆ ಕೆಲಸಕ್ಕೆ ಸೇರಿದ್ದರು. ಶರ್ಮಾ ಅವರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ. ಮಹದೇವಪುರ ಪೊಲೀಸರು ಎಟಿಎಂ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದಿದ್ದು, ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿದ್ದಾರೆ.
ಎಟಿಎಂ ಧ್ವಂಸ : ಎಟಿಎಂ ದರೋಡೆಗೆ ನುಗ್ಗಿದ ದುಷ್ಕರ್ಮಿಗಳು ಯಂತ್ರವನ್ನು ಧ್ವಂಸಗೊಳಿಸಿ ಪರಾರಿಯಾಗಿರುವ ಘಟನೆ ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವೈಟ್ ಮುಖ್ಯರಸ್ತೆಯ ರಾಮಗೊಂಡನಹಳ್ಳಿಯ ಐಸಿಐಸಿಬ್ಯಾಂಕ್ ಎಟಿಎಂಅನ್ನು ಭಾನುವಾರ ರಾತ್ರಿ ಧ್ವಂಸಗೊಳಿಸಲಾಗಿದೆ. ಎಟಿಎಂನಲ್ಲಿ ಹಣವಿರಲಿಲ್ಲ ಆದ್ದರಿಂದ ಕಳ್ಳರು ಬರಿಗೈಲಿ ವಾಪಸ್ ಆಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.












Click it and Unblock the Notifications