ಹಣದ ಜೊತೆ ಎಟಿಎಂ ವಾಹನ ಅಪಹರಿಸಿದವರು ಸಿಕ್ಕಿಬಿದ್ರು
ಬೆಂಗಳೂರು, ಏ. 20 : ಕೆಲವು ದಿನಗಳ ಹಿಂದೆ ಬೆಂಗಳೂರಿನಿಂದ ಎಟಿಎಂ ವಾಹನ ಮತ್ತು 66 ಲಕ್ಷ ಹಣದೊಂದಿಗೆ ಪರಾರಿಯಾಗಿದ್ದ ಚಾಲಕ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಏಳು ಜನರು ಗುಂಪು ಸೇರಿ ಈ ದರೋಡೆ ಮಾಡಿದ್ದು, 35 ಲಕ್ಷ ಹಣ ಮತ್ತು 7 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಭಾನುವಾರ ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಈ ಕುರಿತು ಮಾಹಿತಿ ನೀಡಿದ್ದಾರೆ. ಎರಡು ಭದ್ರತಾ ಸಂಸ್ಥೆಗಳ ಉದ್ಯೋಗಿಗಳು ಜಂಟಿಯಾಗಿ ಕೆಲಸಕ್ಕೆ ಸೇರುವ ಮೊದಲೇ ದರೋಡೆ ಯೋಜನೆ ರೂಪಿಸಿದ್ದರು ಎಂಬುದು ತನಿಖೆಯಿಂದ ಸಾಬೀತಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಯಿಕ್ಕೋಡ್ ಮೂಲದ ಜೆಮ್‌ಶೀರ್ (23), ಮಡಿಕೇರಿಯ ಕೆ.ಎಂ.ಪ್ರಭಾಕರ್ (44), ಕಡೂರಿನ ಹೇಮಂತ್ ಕುಮಾರ್ (27), ಜೀವರ್ಗಿಯ ನಂದ ಕುಮಾರ್ (38), ಮಾಗಡಿಯ ರೇಣುಕಪ್ಪ (42), ಕೊಳ್ಳೆಗಾಲದ ಮೂರ್ತಿ (32) ಹಾಗೂ ಬೆಂಗಳೂರಿನ ಮಂಜುನಾಥ್‌ರನ್ನು ಪೊಲೀಸರು ಬಂಧಿಸಿದ್ದಾರೆ.
ಎಲ್ಲಾ ಕಡೆ ನಕಲಿ ವಿಳಾಸ : ಮಾರ್ಚ್ 31ರಂದು ಜೆಪಿ ರಸ್ತೆಯಲ್ಲಿರುವ ಸೆಂಟ್ರಲ್ ಬ್ಯಾಂಕ್ ಎಟಿಎಂಗೆ ಹಣ ಹಾಕಲು ಹೋಗಿದ್ದ ಸಂದರ್ಭದಲ್ಲಿ 66 ಲಕ್ಷ ರೂ ಹಣವಿದ್ದ ಟಾಟಾ ಸುಮೋವನ್ನು ಚಾಲಕ ಅಪಹರಣ ಮಾಡಿದ್ದ. ಮೊದಲು ಪೊಲೀಸರು ಚಾಲಕ ಜೆಮಶೀರ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಉಳಿದವರು ಸಿಕ್ಕಿಹಾಕಿಕೊಂಡಿದ್ದಾರೆ.

ಬಂಧಿತರು ಎಟಿಎಂಗಳಿಗೆ ಹಣ ತುಂಬುವ ಎಜೆನ್ಸಿಯಾದ ಬ್ರಿಂಕ್ಸ್ ಮತ್ತು ಲಕ್ಷ್ಮೀ ಟ್ರಾವೆಲ್ಸ್‌ಗೆ ಸೇರಿದವರು. ಜೆಮ್‌ಶೀರ್ ಲಕ್ಷ್ಮೀ ಟ್ರಾವೆಲ್ಸ್‌ಗೆ ಸೇರಿದವನಾಗಿದ್ದ. ಇವರೆಲ್ಲರೂ ಕೆಲಸಕ್ಕೆ ಸೇರುವ ಮೊದಲೇ ದರೋಡೆಯ ಸಂಚು ರೂಪಿಸಿದ್ದರು. ತಾವು ಸಿಕ್ಕಿಬೀಳಬಾರದು ಎಂದು ಎಲ್ಲಾ ಕಡೆ ನಕಲಿ ವಿಳಾಸ ನೀಡಿದ್ದರು. ನಕಲಿ ವಿಳಾಸ ನೀಡಿಯೇ ಮೊಬೈಲ್ ಸಿಮ್ ಕಾರ್ಡ್ ಖರೀದಿ ಮಾಡಿದ್ದರು.
ಜೆಮಶೀರ್‌ಗೆ ಬರುತ್ತಿದ್ದ ದೂರವಾಣಿ ಕರೆಗಳ ಸುಳಿವು ಹಿಡಿದು ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಉಳಿದ ಆರೋಪಿಗಳು ಸಿಕ್ಕಿಬಿದಿದ್ದಾರೆ. ಬಂಧಿತರಿಂದ 35 ಲಕ್ಷ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications