Bengaluru: ಮೇ 13ರಂದು ಮತ ಎಣಿಕೆ: ನಗರ ಜಿಲ್ಲಾ ಚುನಾವಣಾಧಿಕಾರಿಗಳಿಂದ ನಗರ 4 ಕೇಂದ್ರಗಳ ಪರಿಶೀಲನೆ
ಬೆಂಗಳೂರು, ಮೇ 08: ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಮತದಾನದ ಮತ ಎಣಿಕೆ ಕಾರ್ಯವು ಇಲ್ಲಿ 4 ವಿವಿಧ ಸ್ಥಳಗಳಲ್ಲಿ ನಡೆಯಲಿದೆ. ಈ ಪೈಕಿ ನಾಲ್ಕೂ ಮತ ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮಾನ್ಯ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ತಿಳಿಸಿದರು.
ಸೋಮವಾರ ನಗರದಲ್ಲಿರುವ ಸೆಂಟ್ ಜೋಸೆಫ್ ಇಂಡಿಯನ್ ಹೈ ಸ್ಕೂಲ್ ನಲ್ಲಿರುವ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಅದೇ ರೀತಿ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿನ ಒಟ್ಟು 28 ಕ್ಷೇತ್ರಗಳ ಮತದಾನದ ಮತ ಎಣಿಗೆ ಪ್ರಕ್ರಿಯೆ ಈ ಕೆಳಗಿನ ನಾಲ್ಕು ಸ್ಥಳಗಳಲ್ಲಿ ನಡೆಯಲಿದೆ ಎಂದರು.

ಮತ ಎಣಿಕೆಯ ಸಿಬ್ಬಂದಿ 3 ವಿಧದಲ್ಲಿ ಇರಲಿದೆ. ಪ್ರತಿ ಟೇಬಲ್ ಗೆ ಮೈಕ್ರೋ ಅಬ್ಸರ್ವರ್, ಮತ ಎಣಿಕೆ ಮೇಲ್ವಿಚಾರಕರು ಮತ್ತು ಮತ ಎಣಿಕೆ ಸಹಾಯಕರನ್ನು ನಿಯೋಜನೆ ಮಾಡಲಾಗುತ್ತದೆ. ಪ್ರತಿ ಎಣಿಕಾ ಕೊಠಡಿಗೆ ಸಾಮಾನ್ಯವಾಗಿ 10 ರಿಂದ 14 ಟೇಬಲ್ ಗಳ ವ್ಯವಸ್ಥೆ ಮಾಡಲಾಗಿರುತ್ತದೆ. ಅದರಲ್ಲಿ 2 ಟೇಬಲ್ ಗಳನ್ನು ಪೋಸ್ಟಲ್ ಬ್ಯಾಲೆಟ್ ಮತಗಳ ಎಣಿಕೆಗೆ ಮೀಸಲಿಡಲಾಗಿರುತ್ತದೆ ಎಂದು ವಿವರಿಸಿದರು.
ಮತ ಎಣಿಕೆ: ವೆಬ್ ಕಾಸ್ಟಿಂಗ್ ವ್ಯವಸ್ಥೆ
ಬೆಂಗಳೂರು ನಗರದ ಅಪರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿಯಾದ ಡಾ. ದಯಾನಂದ್ ರವರು ಮಾತನಾಡಿ, ಸಾರ್ವತ್ರಿಕ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯವು ಮೇ 13 ರಂದು ನಡೆಯಲಿದೆ. ಎಲ್ಲಾ ರೀತಿಯ ತಯಾರಿಗಳನ್ನು ನಾವು ಮಾಡಿಕೊಳ್ಳುತ್ತಿದ್ದೇವೆ.

ಮತ ಎಣಿಕೆ ಕೇಂದ್ರದ ಪ್ರತಿ ಟೇಬಲ್ ಗಳಿಗೂ ವೆಬ್ ಕಾಸ್ಟಿಂಗ್ ವ್ಯವಸ್ಥೆಯಿರುತ್ತದೆ. ಎಣಿಕಾ ಮೇಲ್ವಿಚಾರಕರು ಹಾಗೂ ಎಣಿಕಾ ಸಹಾಯಕರಿಗೆ ಈಗಾಗಲೇ ತರಬೇತಿಯನ್ನು ಸಹಾ ನೀಡಲಾಗಿದೆ. ಮೇ 12 ರಂದು, ಮೈಕ್ರೋ ಅಬ್ಸರ್ವರ್ಸ್, ಎಣಿಕಾ ಮೇಲ್ವಿಚಾರಕರು ಹಾಗೂ ಎಣಿಕಾ ಸಹಾಯಕರಿಗೆ ಮತ್ತೊಂದು ಬಾರಿ ತರಬೇತಿಯನ್ನು ನೀಡಲಾಗುವುದು. ಎಲ್ಲಾ ಕಡೆ ಸಿಸಿ ಕ್ಯಾಮೆರಾಗಳ ಅಳವಡಿಕೆ ಮಾಡಲಾಗಿದೆ. ಮೂರು ಹಂತದದಲ್ಲಿ ಪೊಲೀಸ್ ಭದ್ರತಾ ವ್ಯವಸ್ಥೆ ಮಾಡಲಾಗುತ್ತದೆ. ಆವರಣದಲ್ಲಿ ಪಾರ್ಕಿಂಗ್ ವ್ಯಸವ್ಥೆ ಮಾಡಲಾಗಿದೆ ಎಂದರು.
ಇನ್ನು ನಗರ ವ್ಯಾಪ್ತಿಯನ್ನಷ್ಟೇ ನೋಡುವುದಾದರೆ ಇಲ್ಲಿ 7 ವಿಧಾನಸಭಾ ಕ್ಷೇತ್ರಗಳು ಬರಲಿವೆ. ಯಲಹಂಕ ಹಾಗೂ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರಗಳಲ್ಲಿ 16ಕ್ಕೂ ಹೆಚ್ಚು ಅಭ್ಯರ್ಥಿಗಳಿರುವುದರಿಂದ 2 ಬ್ಯಾಲೇಟ್ ಯುನಿಟ್ ಗಳು ಬರಲಿವೆ. ಉಳಿದ ವಿಧಾನಸಭಾ ಕ್ಷೇತ್ರಗಳಿಗೆ 1 ಬ್ಯಾಲೇಟ್ ಯುನಿಟ್ ಗಳು ಬರುತ್ತವೆ ಎಂದು ಮಾಹಿತಿ ನೀಡಿದರು.
ನಾಲ್ಕು ಮತ ಎಣಿಕೆ ಕೇಂದ್ರಗಳು ಯಾವುವು?
ಬೆಂಗಳೂರು ಕೇಂದ್ರ: ಬಿಎಂಎಸ್ ಕಾಲೇಜು, ಬೂಗಲ್ ರಾಕ್ ರಸ್ತೆ, ಗಾಂಧಿ ಬಜಾರ್, ಬಸವನಗುಡಿ.
ಬೆಂಗಳೂರು ದಕ್ಷಿಣ: ಎಸ್.ಎಸ್.ಎಂ.ಆರ್.ವಿ ಪಿಯು ಕಾಲೇಜು, 26ನೇ ಮುಖ್ಯ ರಸ್ತೆ, 4ನೇ ಬ್ಲಾಕ್, ಜಯನಗರ.
ಬೆಂಗಳೂರು ಉತ್ತರ: ಮೌಂಟ್ ಕಾರ್ಮೆಲ್ ಕಾಲೇಜು, ಪ್ಯಾಲೆಸ್ ರಸ್ತೆ, ವಸಂತನಗರ.
ಬೆಂಗಳೂರು ನಗರ: ಸೆಂಟ್ ಜೋಸೆಫ್ ಇಂಡಿಯನ್ ಹೈ ಸ್ಕೂಲ್, ವಿಟ್ಟಲ್ ಮಲ್ಯ ರಸ್ತೆ ಬೆಂಗಳೂರು.












Click it and Unblock the Notifications