BV Srinivas: ಕಾಂಗ್ರೆಸ್ ನಾಯಕ ಬಿವಿ ಶ್ರೀನಿವಾಸ್ ಮನೆಗೆ ನೋಟಿಸ್ ಅಂಟಿಸಿದ ಅಸ್ಸಾಂ ಪೊಲೀಸರು
ಬೆಂಗಳೂರು, ಏಪ್ರಿಲ್. 23: ಕಿರುಕುಳ ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ಭಾರತೀಯ ಯುವ ಕಾಂಗ್ರೆಸ್ ಮುಖ್ಯಸ್ಥ ಬಿ.ವಿ.ಶ್ರೀನಿವಾಸ್ ಅವರನ್ನು ಹುಡುಕಿಕೊಂಡು ಅಸ್ಸಾಂ ಪೊಲೀಸರು ಬೆಂಗಳೂರಿಗೆ ಬಂದಿದ್ದಾರೆ. ಬೆಂಗಳೂರಿನ ಅವರ ಅಂಕಲ್ ಮನೆಯಲ್ಲಿ ಶ್ರೀನಿವಾಸ್‌ಗಾಗಿ ಹುಡುಕಾಟ ನಡೆಸಿದ ಅವರು ನೋಟಿಸ್ ಅಂಟಿಸಿದ್ದಾರೆ.
ಭಾರತೀಯ ಯುವ ಕಾಂಗ್ರೆಸ್ ಮುಖ್ಯಸ್ಥ ಬಿ.ವಿ.ಶ್ರೀನಿವಾಸ್ ವಿರುದ್ಧ ಅಸ್ಸಾಂ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಅಂಕಿತಾ ದತ್ತಾ ಕಿರುಕುಳ ಪ್ರಕರಣವನ್ನು ದಾಖಲಿಸಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಅಸ್ಸಾಂ ಪೊಲೀಸರ ತಂಡವೊಂದು ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ಐವೈಸಿ ಅಧ್ಯಕ್ಷ ಶ್ರೀನಿವಾಸ್ ಬಿವಿ ಅವರ ಚಿಕ್ಕಪ್ಪ ಅವರ ನಿವಾಸಕ್ಕೆ ಪರಿಶೀಲನೆಗಾಗಿ ಬಂದಿದ್ದಾರೆ.

''ಅಂಕಿತಾ ದತ್ತಾ ಕಿರುಕುಳ ಪ್ರಕರಣದ ತನಿಖೆಗೆ ಶ್ರೀನಿವಾಸ್ ಬಿ.ವಿ ಅವರ ಮನೆಗೆ ಬಂದಿದ್ದೇವೆ. ಅವರ ಮನೆಯಲ್ಲಿ ಯಾರೂ ಇಲ್ಲದ ಕಾರಣ ನೋಟಿಸ್ ಅನ್ನು ಇಲ್ಲಿ ಅಂಟಿಸಿದ್ದೇವೆ. ಬಿ.ವಿ.ಶ್ರೀನಿವಾಸ್ ಅವರ ಸ್ವಗ್ರಾಮಕ್ಕೂ ನೋಟಿಸ್ ಕಳುಹಿಸುತ್ತಿದ್ದೇವೆ. ಅವರಿಗೆ ಈಗಾಗಲೇ ನೋಟಿಸ್ ನೀಡಿದ್ದೇವೆ. ಪ್ರಕರಣ ಸಂಬಂಧ ತನಿಖಾ ಅಧಿಕಾರಿಯ ಮುಂದೆ ಹಾಜರಾಗಲು ಮತ್ತು ತನಿಖೆಯ ಪ್ರಕ್ರಿಯೆಯಲ್ಲಿ ಸಹಕರಿಸಲು ಸಮಯವನ್ನು ನೀಡಿದ್ದೇವೆ" ಎಂದು ಅಸ್ಸಾಂನ ಜಂಟಿ ಪೊಲೀಸ್ ಕಮಿಷನರ್ ಪ್ರತೀಕ್ ತುಬೆ ಹೇಳಿದ್ದಾರೆ.
ಅಂಕಿತಾ ದತ್ತಾ ದಾಖಲಿಸಿರುವ ಕಿರುಕುಳ ಪ್ರಕರಣ ಸಂಬಂಧ ಶ್ರೀನಿವಾಸ್ ಬಿ.ವಿ ವಿರುದ್ಧ ದಿಸ್ಪುರ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 509, 294, 341, 352, 354, 354 ಎ, ಮತ್ತು 506 ರ ಅಡಿಯಲ್ಲಿ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ಸಾಂನ ದಿಸ್ಪುರ್ ಪೊಲೀಸ್ ಠಾಣೆಗೆ ಬುಧವಾರ ದೂರು ದಾಖಲಿಸಿರುವ ಅಂಕಿತಾ ದತ್ತಾ ಅವರು 'ಶ್ರೀನಿವಾಸ್ ಬಿವಿ ಆರು ತಿಂಗಳಿಂದ ಲೈಂಗಿಕ ದೌರ್ಜನ್ಯ ನಡೆಸುವ ಮೂಲಕ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ತನ್ನ ವಿರುದ್ಧ ಕಾಂಗ್ರೆಸ್ ಮುಖಂಡರಿಗೆ ದೂರು ನೀಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದಾಗಿ ಬೆದರಿಕೆ ಹಾಕಿದ್ದಾರೆ' ಎಂದು ಆರೋಪಿಸಿದ್ದಾರೆ.

ಇನ್ನು, ಘಟನೆ ಸಂಬಂಧ ಅಸ್ಸಾಂ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷೆ ಡಾ. ಅಂಗಿತಾ ದತ್ತಾ ವರ ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಹೊರಹಾಕಿದ್ದಾರೆ. ಜೊತೆಗೆ ಅಂಕಿತಾ ದತ್ತಾ ಅವರ ಆರೋಪಗಳನ್ನು ಅಸಂಬದ್ಧ ಮತ್ತು ಆಧಾರರಹಿತ ಎಂದು ಭಾರತೀಯ ಯುವ ಕಾಂಗ್ರೆಸ್ ಹೇಳಿದೆ.
ಶಾರದಾ ಚಿಟ್ ಫಂಡ್ ಪ್ರಕರಣದಲ್ಲಿ ಅಂಕಿತಾ ದತ್ತಾ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತಿದ್ದು, ಹೀಗಾಗಿ ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುತ್ತಿದ್ದಾರೆ. ಬಿಜೆಪಿಯವರ ಒತ್ತಾಯದ ಮೇರೆಗೆ ಅವರು ಇಂತಹ ಆರೋಪ ಮಾಡಿದ್ದಾರೆ ಎಂದು ಯುವ ಕಾಂಗ್ರೆಸ್ ಆರೋಪಿಸಿದೆ.












Click it and Unblock the Notifications