ಧಮ್ಕಿ ಹಾಕಿದ್ರೆ ಕರ್ನಾಟಕಕ್ಕೆ ಯಾವ ಉದ್ಯಮಗಳೂ ಬರಲ್ಲ: ಅಶೋಕ್
ಬೆಂಗಳೂರಿನ ರಸ್ತೆ ಸಮಸ್ಯೆ ಹಾಗೂ ಮೂಲಸೌಕರ್ಯದ ವಿಚಾರವಾಗಿ ಉದ್ಯಮಿಗಳು ಹಾಗೂ ರಾಜ್ಯ ಸರ್ಕಾರದ ನಡುವಿನ ಟಾಕ್ ವಾರ್ ಜೋರಾಗಿದೆ. ಇದೀಗ ಗುತ್ತಿಗೆದಾರರ ಧಮ್ಕಿ ನಡೆಯಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದು, ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ. ನೀವು ಉದ್ಯಮಿಗಳಿಗೆ ಧಮ್ಕಿ ಹಾಕಿದರೆ ಕರ್ನಾಟಕಕ್ಕೆ ಯಾವ ಉದ್ಯಮಗಳೂ ಬರುವುದಿಲ್ಲ, ಯಾವ ಗುತ್ತಿಗೆದಾರರು ಸರ್ಕಾರದ ಕೆಲಸ ಮಾಡುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಬಾಕಿ ಬಿಲ್ ಕೊಡಿ ಎಂದು ಕೇಳಿದರೆ ಅದು "ಧಮ್ಕಿ" ಹೇಗೆ ಆಗುತ್ತದೆ? ಬಾಕಿ ಬಿಲ್ ಕೊಡದಿದ್ದರೆ ತಮ್ಮ ಹಕ್ಕಿಗಾಗಿ ಮುಷ್ಕರ ಮಾಡಬೇಕಾಗುತ್ತದೆ ಎಂದು ಹೇಳುವುದು "ಧಮ್ಕಿ" ಹೇಗೆ ಆಗುತ್ತದೆ ಉಪಮುಖ್ಯಮಂತ್ರಿಗಳೇ? ಎಂದು ಅಶೋಕ್ ಕೇಳಿದ್ದಾರೆ. ಇಷ್ಟಕ್ಕೂ ಗುತ್ತಿಗೆದಾರರ ಬಿಲ್ ಯಾಕೆ ಕ್ಲಿಯರ್ ಮಾಡುತ್ತಿಲ್ಲ? ಒಂದು ಪಾಪರ್ ಸರ್ಕಾರದ ಬಳಿ ದುಡ್ಡಿಲ್ಲದೆ ಸಂಪೂರ್ಣವಾಗಿ ದಿವಾಳಿ ಆಗಿರಬೇಕು. ಇಲ್ಲವೇ ನಿಮ್ಮ ಕಮಿಷನ್ ಬೇಡಿಕೆ ಈಡೇರಿಸಲಾಗದೆ ಗುತ್ತಿಗೆದಾರರು ನೀವು ಕೇಳುತ್ತಿರುವ ಪರ್ಸೆಂಟೇಜ್‌ಗೆ ಒಪ್ಪದೇ ಇರಬಹುದು ಎಂದು ವ್ಯಂಗ್ಯವಾಡಿದ್ದಾರೆ.

ಬಹುಶಃ ರಾಹುಲ್ ಗಾಂಧಿ ಅವರು ಜೇಬಿನಲ್ಲಿ ಇಟ್ಟುಕೊಂಡು ಓಡಾಡುವ ಸಂವಿಧಾನ ಪುಸ್ತಕದಲ್ಲಿ ನಾಗರೀಕರಿಗೆ ಮುಷ್ಕರ, ಹೋರಾಟ ಮಾಡುವ ಹಕ್ಕಿಲ್ಲ ಅನ್ನಿಸುತ್ತೆ. ಆದರೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದಲ್ಲಿ ನಾಗರಿಕರು, ಗುತ್ತಿಗೆದಾರರು ತಮ್ಮ ಹಕ್ಕಿಗಾಗಿ ಸರ್ಕಾರವನ್ನು ಪ್ರಶ್ನಿಸಲೂಬಹುದು, ಮುಷ್ಕರ ಮಾಡಬಹುದು, ಹೋರಾಟವನ್ನೂ ಮಾಡಬಹುದು ಎಂದು ವಾಗ್ದಾಳಿ ನಡೆಸಿದ್ದಾರೆ.
ಉದ್ಯಮಿಗಳಿಗೆ ಧಮ್ಕಿ ಹಾಕಿ ಅವಮಾನ
ರಸ್ತೆಗುಂಡಿಗಳ ದುಸ್ಥಿತಿ ಬಗ್ಗೆ ದನಿ ಎತ್ತಿದ ಉದ್ಯಮಿಗಳಿಗೆ ಧಮ್ಕಿ ಹಾಕಿ ಅವಮಾನ ಮಾಡಿದ್ದಾಯ್ತು, ಈಗ ಗುತ್ತಿಗೆದಾರರಿಗೆ ಧಮ್ಕಿ ಹಾಕುತ್ತಿದೆ ಈ ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರ. ಈ ಪರಿಸ್ಥಿತಿ ಹೀಗೆ ಮುಂದುವರೆದರೆ ಕರ್ನಾಟಕಕ್ಕೆ ಯಾವ ಉದ್ಯಮಗಳೂ ಬರುವುದಿಲ್ಲ, ಯಾವ ಗುತ್ತಿಗೆದಾರರು ಸರ್ಕಾರದ ಕೆಲಸ ಮಾಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಸತ್ತು ಹೋಗಿದೆ. 135 ಸೀಟು ಗೆಲ್ಲಿಸಿ ಅಧಿಕಾರ ಕೊಟ್ಟರೂ ಕನ್ನಡಿಗರನ್ನು ಅನಾಥರನ್ನಾಗಿ ಮಾಡಿದ ಈ ನಾಡದ್ರೋಹಿ ಕಾಂಗ್ರೆಸ್ ಪಕ್ಷಕ್ಕೆ ಕನ್ನಡಿಗರು ಇನ್ನೆಂದೂ ಮತ ಹಾಕುವುದಿಲ್ಲ ಎಂದಿದ್ದಾರೆ.
ರಾಜ್ಯ ಸರ್ಕಾರದಿಂದ ಗುತ್ತಿಗೆದಾರ ಬಿಲ್ ಬಾಕಿ ನೀಡಲು ಗಡುವು ಹಾಕಿದ್ದು, ಕೆಲವು ಸಚಿವರು ಅಭಿವೃದ್ಧಿ ಮಾಡಿದ್ದೇವೆ, ಗ್ಯಾರಂಟಿ ಕೊಟ್ಟಿದ್ದೇವೆ ಅನ್ನುತ್ತಾರೆ. ಮೂರು ವರ್ಷ ಆದರೂ ಅನುದಾನ ಬಿಡುಗಡೆ ಮಾಡಲಿಕ್ಕೆ ಏನಾಗಿದೆ? ಇದರಲ್ಲಿ ಇವರೆಲ್ಲ ಕಮಿಷನ್ ಹೆಚ್ಚು ಕೇಳುತ್ತಿದ್ದಾರೆ. ಗುತ್ತಿಗೆದಾರರು ಮನೆ, ಮಠ ಮಾರಾಟ ಮಾಡಿ ಕಮಿಷನ್ ಕೊಡುವ ಪರಿಸ್ಥಿತಿ ಬಂದಿದೆ ಎಂದು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಕೂಡ ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications