Breaking; ಗುರುವಾರ ಬೆಂಗಳೂರಿಗೆ ಅರವಿಂದ್ ಕೇಜ್ರಿವಾಲ್ ಆಗಮನ
ಬೆಂಗಳೂರು, ಏಪ್ರಿಲ್ 20; ದೆಹಲಿ, ಎಎಪಿ ಮುಖ್ಯಸ್ಥ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ಕರ್ನಾಟಕ ಪ್ರವಾಸ ಕೈಗೊಳ್ಳಲಿದ್ದಾರೆ. ಮುಂದಿನ ವರ್ಷ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುವುದರಿಂದ ಈ ಭೇಟಿ ಕುತೂಹಲಕ್ಕೆ ಕಾರಣವಾಗಿದೆ.
ಅರವಿಂದ್ ಕೇಜ್ರಿವಾಲ್ ಗುರುವಾರ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ 11 ಗಂಟೆಗೆ ನಡೆಯಲಿರುವ ಸಮಾವೇಶದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಕೇಜ್ರಿವಾಲ್ ಸ್ವಾಗತಿಸಲು ಕರ್ನಾಟಕ ಎಎಪಿ ಘಟಕ ತಯಾರಾಗಿದೆ.
ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯುವ ರೈತರು, ಮಹಿಳೆಯರು, ಯುವಕರ ಸಮಾವೇಶದಲ್ಲಿ ಅರವಿಂದ್ ಕೇಜ್ರಿವಾಲ್ ಮಾತನಾಡಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಳಿಕ ರಾಷ್ಟ್ರೀಯ ನಾಯಕರೊಬ್ಬರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.

ಕೆಲವು ದಿನಗಳ ಹಿಂದೆ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರರಾವ್ ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್ ಸಮ್ಮುಖದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಗುರುವಾರ ಅನೇಕರು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಳ್ಳುವ ನಿರೀಕ್ಷೆ ಇದೆ.
ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ರೈತ ಸಮಾವೇಶ ಆಯೋಜನೆ ಮಾಡಲಾಗಿದೆ. ಅರವಿಂದ ಕೇಜ್ರಿವಾಲ್ ಅವರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
"ರಾಜಕೀಯಕ್ಕೆ ಹೊಸ ತಲೆಮಾರುಗಳ ಅವಶ್ಯಕತೆ ಇದೆ. ದೆಹಲಿ ಮತ್ತು ಪಂಜಾಬ್‌ನಲ್ಲಿ ಈಗಾಗಲೇ ಬದಲಾವಣೆ ಗಾಳಿ ಬೀಸಿದ್ದು ಅದರಂತೆ ಕರ್ನಾಟಕದಲ್ಲಿಯೂ ಅದಕ್ಕಿಂತ ಉತ್ತಮ ಆಡಳಿತ ಕೊಡುವುದಾದರೆ ನಾವೇಕೆ ರಾಜಕೀಯ ಪ್ರವೇಶ ಮಾಡಬಾರದು?" ಎಂದು ಕೋಡಿಹಳ್ಳಿ ಚಂದ್ರಶೇಖರ್ ಪ್ರಶ್ನಿಸಿದ್ದರು.
ಎಎಪಿಗೆ ರೈತ ಸಂಘದ ಬೆಂಬಲ; ಆಮ್ ಆದ್ಮಿ ಪಕ್ಷಕ್ಕೆ ಕರ್ನಾಟಕದಲ್ಲಿ ರೈತ ಸಂಘ ಬೆಂಬಲ ನೀಡಲಿದೆಯೇ? ಎಂಬ ಪ್ರಶ್ನೆ ಎದುರಾಗಿದೆ. ಕೋಡಿಹಳ್ಳಿ ಚಂದ್ರಶೇಖರ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, "ರಾಜ್ಯದಲ್ಲಿ ಬಿಜೆಪಿ ಮತ್ತು ವಿರೋಧ ಪಕ್ಷಗಳು ಮತಬ್ಯಾಂಕ್ ದೃಷ್ಟಿಯನ್ನಿಟ್ಟುಕೊಂಡು ಕೆಲಸ ಮಾಡುತ್ತಿವೆ. ರೈತ ಕಾಳಜಿ ಇಲ್ಲದ ಪಕ್ಷಗಳನ್ನು ಅಧಿಕಾರದಿಂದ ದೂರವಿಡಲು ಪರ್ಯಾಯ ಶಕ್ತಿಗೆ ಬೆಂಬಲಿಸಲಾಗುತ್ತದೆ" ಎಂದು ಹೇಳಿದ್ದಾರೆ.
"ಮೇ 11ಕ್ಕೆ ರೈತ ಸಂಘದ ಕೋರ್ ಕಮಿಟಿ ಸಭೆ ನಡೆಯಲಿದೆ. ರೈತ ಸಂಘದ ಸಿದ್ಧಾಂತಗಳಿಗೆ ಒಪ್ಪಿದರೆ ಆಮ್ ಆದ್ಮಿ ಪಕ್ಷಕ್ಕೆ ಬೆಂಬಲಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ" ಎಂದು ತಿಳಿಸಿದ್ದಾರೆ.












Click it and Unblock the Notifications