ಅರ್ಕಾವತಿ ಬಡಾವಣೆಗೆ ಡಿಸೆಂಬರ್ ಡೆಡ್ ಲೈನ್

ಅಕ್ಟೋಬರ್ ತಿಂಗಳಿನಲ್ಲಿ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡುವುದಾಗಿ ಬಿಡಿಎ ಕಳೆದ ತಿಂಗಳು ಹೇಳಿಕೆ ನೀಡಿತ್ತು. ಸದ್ಯ ಈ ಗಡುವು ವಿಸ್ತರಣೆ ಮಾಡಲಾಗಿದ್ದು, ಡಿ.30ರಂದು ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ.
ಬಡಾವಣೆ ಅಭಿವೃದ್ಧಿ ಪಡಿಸಲು ವಿರೋಧ ವ್ಯಕ್ತಪಡಿಸುತ್ತಿರುವ ರೈತರು, ನಿವೇಶನದ ಫಲಾನುಭವಿಗಳ ಜೊತೆಗೆ ಬಿಡಿಎ ಒಂದು ಸುತ್ತಿನ ಮಾತುಕತೆ ನಡೆಸಿ, ಬಡಾವಣೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇದ್ದ ಎಲ್ಲಾ ಅಡೆ-ತಡೆಗಳನ್ನು ಬಗೆಹರಿಸಿದೆ.
ಆದ್ದರಿಂದ ಎಂಟು ವರ್ಷಗಳಿಂದ ಕಾಯುತ್ತಿದ್ದ ಫಲಾನುಭವಿಗಳ ಕೈಗೆ ಡಿಸೆಂಬರ್ ನಲ್ಲಿ ನಿವೇಶನ ಹಂಚಿಕೆಯಾಗಲಿದೆ. ಈ ಮೂಲಕ ತಮ್ಮ ಬಜೆಟ್ ನಲ್ಲಿ ನೀಡಿದ್ದ ಭರವಸೆಯನ್ನು ಪೂರ್ಣಗೊಳಿಸಲು ಸಿಎಂ ಸಿದ್ದರಾಮಯ್ಯ ಪೂರ್ಣಗೊಳಿಸಿಕೊಳ್ಳಲಿದ್ದಾರೆ.
ಅರ್ಕಾವತಿ ಬಡಾವಣೆಯಲ್ಲಿ ನಿವೇಶನ ಪಡೆಯಲು 8,813 ಅರ್ಜಿಗಳು ಬಂದಿವೆ. ಅವುಗಳಲ್ಲಿ 4000 ಅರ್ಜಿಗಳನ್ನು ಬಿಡಿಎ ಇತ್ಯರ್ಥಗೊಳಿಸಿದೆ. ಈ ಫಲಾನುಭವಿಗಳಿಗೆ ಡಿಸೆಂಬರ್ ನಲ್ಲಿ ನಿವೇಶನ ಹಸ್ತಾಂತರಗೊಳ್ಳಲಿದೆ.
ಸಿದ್ದರಾಮಯ್ಯ ತಮ್ಮ ಬಜೆಟ್ ನಲ್ಲಿ 2014ರ ವೇಳೆಗೆ ಅರ್ಕಾವತಿ ಬಡಾವಣೆ ನಿರ್ಮಾಣವನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದರು. ಬಿಡಿಎ ಅಧಿಕಾರಿಗಳೊಂದಿಗೆ ಕೆಲವು ದಿನಗಳ ಹಿಂದೆ ಸಭೆಯನ್ನು ನಡೆಸಿದ್ದರು. ಆದ್ದರಿಂದ ಕಾಮಗಾರಿ ಚುರುಕಾಗಿದ್ದು, ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಿದೆ.
ಅರ್ಕಾವತಿ ಬಡಾವಣೆಗಾಗಿ 3,750 ಎಕರೆ ಭೂಮಿಯನ್ನು 16 ಗ್ರಾಮಗಳಲ್ಲಿ ಸ್ವಾಧೀನ ಪಡಿಸಿಕೊಳ್ಳಲು, ಬಿಡಿಎ 2003ರಲ್ಲಿ ಅಧಿಸೂಚನೆ ಹೊರಡಿಸಿತ್ತು. ಆದರೆ, 2,750 ಎಕರೆ ಪ್ರದೇಶಕ್ಕೆ 2004ರಲ್ಲಿ ಅವಕಾಶ ದೊರೆತು ಬಿಡಿಎ ಕಾಮಗಾರಿ ಪ್ರಾರಂಭಿಸಿತು.
ಬಡಾವಣೆಗೆ ನಿರ್ಮಾಣಕ್ಕೆ ಭೂ ಸ್ವಾಧೀನ ಪಡಿಸಿಕೊಳ್ಳುವ ವಿಚಾರದಲ್ಲಿ ಹಲವಾರು ಗೊಂದಲಗಳು ಉಂಟಾದವು. ಭೂ ಸ್ವಾಧೀನದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬಂತು, ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು.
ಸುಪ್ರೀಂಕೋರ್ಟ್ ಬಡಾವಣೆ ನಿರ್ಮಾಣಕ್ಕಾಗಿ ಭೂ ಸ್ವಾಧೀನ ಮಾಡಿಕೊಳ್ಳಲು ಬಿಡಿಎಗೆ ಅನುಮತಿ ನೀಡಿತು. ಸಂತ್ರಸ್ತರ ಜೊತೆ ನಿರಂತರ ಮಾತುಕತೆ ನಡೆಸಿದ ಸರ್ಕಾರ ಬಡಾವಣೆ ನಿರ್ಮಾಣವಾದ ನಂತರ ಸಂತ್ರಸ್ತರಿಗೆ ಶೇ 40ರಷ್ಟು ಪಾಲು ನೀಡುವುದಾಗಿ ಭರವಸೆ ನೀಡಿ ವಿವಾದ ಅಂತ್ಯಗೊಳಿಸಿತ್ತು.
ಸದ್ಯ ಎಲ್ಲಾ ವಿವಾದಗಳು ಬಗೆಹರಿದು ಅರ್ಕಾವತಿ ಬಡಾವಣೆಯ ಫಲಾನುಭವಿಗಳಿಗೆ ನಿವೇಶನ ಕೈ ಸೇರುವ ಕಾಲ ಹತ್ತಿರವಾಗಿದೆ. ಬಿಡಿಎ ತನ್ನ ಮಾತಿನಂತೆ ಡಿಸೆಂಬರ್ ನಲ್ಲಿ ನಿವೇಶನ ಹಸ್ತಾಂತರ ಮಾಡುತ್ತದೆಯೇ? ಅಥವ ಗಡುವು ವಿಸ್ತರಿಸಲಿದೆಯೇ ಕಾದು ನೋಡಬೇಕು.












Click it and Unblock the Notifications