ಬೆಂಗಳೂರಿಗೆ ಕಹಿಸುದ್ದಿ; ಅರ್ಕಾವತಿ ನೀರು ಬಳಸಲು ಯೋಗ್ಯವಾಗದಷ್ಟು ಮಲಿನ
ಬೆಂಗಳೂರು, ಏಪ್ರಿಲ್ 26: ಉದ್ಯಾನ ನಗರಿ ಬೆಂಗಳೂರಿನ ಜನರಿಗೆ ಕಹಿಸುದ್ದಿಯೊಂದಿದೆ. ಅರ್ಕಾವತಿ ನದಿಯ ನೀರು ಬಳಕೆಗೆ ಬಾರದಷ್ಟು ಮಲಿನಗೊಂಡಿದೆ. ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಸೇರುವ ನೀರು ಶುದ್ಧೀಕರಣ ಮಾಡಿದರೂ ಸಹ ಬಳಕೆಗೆ ಯೋಗ್ಯವಲ್ಲ ಎಂಬ ವರದಿ ಬಂದಿದೆ.
ನೀರಿನ ಶುದ್ಧತೆ, ಬಳಕೆಗೆ ಯೋಗ್ಯವೇ? ಎಂಬುದನ್ನು ಬಯೊಲಾಜಿಕಲ್ ಆಕ್ಸಿಜನ್ ಡಿಮಾಂಡ್ (ಬಿಒಡಿ) ಮೂಲಕ ನಿರ್ಧರಿಸಲಾಗುತ್ತದೆ. ಇದು ನೀರು ಕುಡಿಯಲು, ಬಳಸಲು ಯೋಗ್ಯವೋ?, ಅಲ್ಲವೋ? ಎಂದು ನಿರ್ಧರಿಸುವ ಗುಣಾಂಕವಾಗಿದೆ.

2018ಕ್ಕೆ ಹೋಲಿಕೆ ಮಾಡಿದರೆ ಅರ್ಕಾವತಿ ನದಿಯ ನೀರು 4 ಪಟ್ಟು ಹೆಚ್ಚು ಕಲುಷಿತವಾಗಿದೆ. ಶುದ್ಧೀಕರಣ ಮಾಡಿದರೂ ಸಹ ನದಿ ನೀರು ಬಳಕೆಗೆ ಯೋಗ್ಯವಲ್ಲ ಎಂದು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿ ಹೇಳುತ್ತಿದೆ.
ಅತಿ ಹೆಚ್ಚು ಮಲಿನಗೊಂಡ ನೀರು: ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಕೆಲವು ದಿನಗಳ ಹಿಂದೆ ನಡೆಸಿದ ಪರೀಕ್ಷೆಗಳ ವರದಿಯಲ್ಲಿ ಬಿಒಡಿ 21ಕ್ಕೆ ಏರಿಕೆಯಾಗಿದೆ. 2018ರಲ್ಲಿ ಬಿಒಡಿ 4 ಇತ್ತು. ಕಳೆದ ಆರು ವರ್ಷಗಳಲ್ಲಿ ನದಿಯ ನೀರು ಮತ್ತಷ್ಟು ಕಲುಷಿತಗೊಂಡಿದೆ.
2018ರಲ್ಲಿ ನದಿಯ ಕಾಲಿಫೋರ್ನ್ ಬ್ಯಾಕ್ಟಿರಿಯಾ ಪ್ರಮಾಣ 3,500 ಎಂಪಿಎನ್/100 ಎಂಎಲ್‌ಗೆ ಇತ್ತು. 2023ರ ಡಿಸೆಂಬರ್‌ನಲ್ಲಿ ಇದು 35,00,000 ಎಂಪಿಎನ್/100 ಎಂಎಲ್‌ಗೆ ಏರಿಕೆಯಾಗಿದೆ. ನೀರಿನ ಡಿಒ ಮಟ್ಟವು 2018ರಲ್ಲಿ 5.2 ಇದ್ದಿದ್ದು, ಈಗ 1.8 ಎಂಜಿ/ಎಲ್‌ಗೆ ಇಳಿಕೆಯಾಗಿದೆ.
ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಾರ್ಗಸೂಚಿಗಳ ಪ್ರಕಾರ ಜೈವಿಕ ಸಂಸ್ಕರಣೆ ಬಳಿಕ ಕುಡಿಯುವ ನೀರಿನ ಮೂಲಗಳ ಬಿಒಡಿ ಮಾಪನ 20 ಇರಬೇಕು. ಇದರ ಆಧಾರದ ಮೇಲೆ ನೀರನ್ನು ಯಾವುದಕ್ಕೆ ಬಳಕೆ ಮಾಡಬಹುದು ಎಂದು ತೀರ್ಮಾನಿಸಲಾಗುತ್ತದೆ.
ಆದರೆ ಈಗ ನೀರು ಮನೆ ಬಳಕೆ, ಪ್ರಾಣಿಗಳು ಮತ್ತು ಸಸ್ಯಗಳಿಗೆ ಬಳಕೆ ಮಾಡಲು ಸಹ ಯೋಗ್ಯವಲ್ಲ ಎಂಬ ವರದಿ ಬಂದಿದೆ. ನೀರನ್ನು ಶುದ್ಧೀಕರಣ ಮಾಡಲು ತೆಗೆದುಕೊಂಡ ಕ್ರಮಗಳು ಮಾಲಿನ್ಯವನ್ನು ಕಡಿಮೆ ಮಾಡಲು ಸಹ ವಿಫಲವಾಗಿವೆ ಎಂದು ವರದಿ ಹೇಳಿದೆ.
ಮುಂಗಾರು ಅವಧಿಯಲ್ಲಿ ನದಿಯಲ್ಲಿ ಹೊಸ ನೀರು ಹರಿಯುವಾಗ ಬಿಒಡಿ ಉತ್ತಮವಾಗಬೇಕು. ಆದರೆ ನದಿಯ ನೀರು ಕೆಲವು ವರ್ಷಗಳಿಂದ ಶುದ್ಧವಾಗುತ್ತಿಲ್ಲ. ನೀರಿನ ಆಮ್ಲಜನಕ ಮಟ್ಟದಲ್ಲಿ ಕುಸಿತವಾಗುತ್ತಿರುವುದು ಪ್ರಾಣಿಗಳು, ಜಲಚರಗಳಿಗೆ ಸಹ ತೊಂದರೆ ಉಂಟು ಮಾಡಲಿದೆ ಎಂದು ಅಂದಾಜಿಸಲಾಗಿದೆ.
ನದಿ ಪಾತ್ರದಲ್ಲಿ ನೀರು ಶುದ್ಧೀಕರಣ ಮಾಡಲು ಸ್ಥಳೀಯ ಆಡಳಿತಗಳು ತೆಗೆದುಕೊಂಡ ಕ್ರಮಗಳು ಸಮರ್ಪಕವಾಗಿಲ್ಲ. ಆದ್ದರಿಂದ ನೀರು ಮಲಿನವಾಗುತ್ತಲೇ ಸಾಗಿದೆ. ಒಳಚರಂಡಿಗಳ ನೀರು ಸೇರ್ಪಡೆಯಾಗುತ್ತಿರುವುದರಿಂದ ನೀರು ಕುಲುಷಿತವಾಗುತ್ತಿದೆ ಎಂದು ವರದಿ ಹೇಳಿದೆ.
ಒಂದು ಕಾಲದಲ್ಲಿ ಬೆಂಗಳೂರು ಮತ್ತು ಸುತ್ತಮುತ್ತಲ ಜಿಲ್ಲೆಗಳ ಜೀವನಾಡಿಯಾಗಿದ್ದ ಅರ್ಕಾವತಿ ಬಳಿಕ ದೇಶದ 17 ಕಲುಷಿತ ನದಿಗಳ ಪಟ್ಟಿ ಸೇರಿತು. ಬೆಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವ ಬೆಂಗಳೂರು ಜಲಮಂಡಳಿ ಅರ್ಕಾವತಿ ನದಿ ಶುದ್ಧೀಕರಣ ಕಾರ್ಯಕ್ಕೆ ಚಾಲನೆ ನೀಡಿತು.
ನಗರದಲ್ಲಿ ಉತ್ಪತ್ತಿಯಾಗುವ ಕಲುಷಿತ ನೀರು ನದಿ ಸೇರದಂತೆ ತಡೆಯುವುದು ಈ ಯೋಜನೆಯ ಪ್ರಮುಖ ಗುರಿಯಾಗಿತ್ತು. ರಾಷ್ಟೀಯ ಹಸಿರು ನ್ಯಾಯಾಧೀಕರಣ ಸಹ ನದಿಯ ನೀರು ಶುದ್ಧೀಕರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿತ್ತು.












Click it and Unblock the Notifications