ಬಿಡಿಎ ಅಧ್ಯಕ್ಷರಾಗಿ ಎಸ್.ಆರ್. ವಿಶ್ವನಾಥ್ ನೇಮಕ: ಕಾನೂನಾತ್ಮಕ ಅಂಶಗಳ ವಿವರಣೆ ಕೇಳಿದ ಹೈಕೋರ್ಟ್
ಬೆಂಗಳೂರು, ಮಾ.7: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷ ಸ್ಥಾನಕ್ಕೆ ಶಾಸಕ ಎಸ್.ಆರ್. ವಿಶ್ವನಾಥ್ ಅವರನ್ನು ನೇಮಕ ಮಾಡಿರುವುದನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್, ಕಾನೂನಾತ್ಮಕ ಅಂಶಗಳ ಬಗ್ಗೆ ವಿವರಣೆ ನೀಡುವಂತೆ ಸರ್ಕಾರಕ್ಕೆ ಸೋಮವಾರ ಸೂಚನೆ ನೀಡಿದೆ.
ವಿಶ್ವನಾಥ್ ನೇಮಕ ಕಾನೂನುಬಾಹಿರವಾಗಿದ್ದು, ಅದನ್ನು ರದ್ದುಪಡಿಸಬೇಕೆಂದು ಕೋರಿ ವಕೀಲ ಎ.ಎಸ್. ಹರೀಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಕುರಿತು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯಪೀಠ ವಿಚಾರಣೆ ನಡೆಸಿತು.
ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ, ಶಾಸಕರಾದವರು ಬಿಡಿಎ ಅಧ್ಯಕ್ಷರಾಗಲು ಅನರ್ಹರೇ? ಪೂರ್ಣಾವಧಿ ಅಧ್ಯಕ್ಷರು ಸದನಕ್ಕೆ ಹಾಜರಾಗಬಹುದೇ? ಅಥವಾ ಸದನಕ್ಕೆ ಹಾಜರಾಗದೆ ಶಾಸಕರಾಗಿ ಮುಂದುವರಿಯಬಹುದೇ? ಅಧ್ಯಕ್ಷರು ಶಾಸಕರಾಗಿ ವೇತನ ಪಡೆಯುವ ಜೊತೆಗೆ ಬಿಡಿಎಯಿಂದ ಸಂಬಳ ಪಡೆಯುತ್ತಿದ್ದಾರೆಯೇ''ಎಂದು ಪ್ರಶ್ನಿಸಿತು.

ಅಲ್ಲದೆ, ಈ ಕುರಿತಂತೆ ಬೇರೆ ಬೇರೆ ರಾಜ್ಯಗಳಲ್ಲಿ ಶಾಸಕರಿಗೆ ಯಾವ ನಿಯಮಗಳಿವೆ ಎಂಬ ಬಗ್ಗೆ ಕಾನೂನಾತ್ಮಕ ಅಂಶಗಳನ್ನು ಕುರಿತು ಎರಡು ವಾರಗಳಲ್ಲಿ ವಿವರಣೆ ನೀಡುವಂತೆ ಸರ್ಕಾರಕ್ಕೆ ಸೂಚಿಸಿತು ಮತ್ತು ಪ್ರತಿವಾದಿ ವಿಶ್ವನಾಥ್ ಪರ ವಕೀಲರಿಗೆ ಆಕ್ಷೇಪಣೆ ಸಲ್ಲಿಸುವಂತೆ ಆದೇಶಿಸಿ ವಿಚಾರಣೆ 2 ವಾರ ಮುಂದೂಡಿತು.

ಅರ್ಜಿದಾರರ ಪರ ವಕೀಲರು, ಬಿಡಿಎ ಅಧ್ಯಕ್ಷರು ಪೂರ್ಣಾವಧಿಗೆ ನೇಮಕವಾಗಬೇಕೆಂದು ನಿಯಮವಿದೆ. ಆದರೆ ಶಾಸಕರಾದವರು ಪೂರ್ಣಾವಧಿ ಅಧ್ಯಕ್ಷರಾಗಲು ಸಾಧ್ಯವಿಲ್ಲ. ಹೀಗಾಗಿ ಎಸ್.ಆರ್.ವಿಶ್ವನಾಥ್ ನೇಮಕ ರದ್ದುಪಡಿಸಲು ಮನವಿ ಮಾಡಿದರು.
ಹ್ಯಾಂಡ್ ಸಮನ್ಸ್ ಮೂಲಕ ನೋಟಿಸ್:
ಕಳೆದ ವಿಚಾರಣೆ ವೇಳೆ ಅರ್ಜಿದಾರ ಪರ ವಕೀಲರು ಹೈಕೋರ್ಟ್ ಎಸ್.ಆರ್. ವಿಶ್ವನಾಥ್ ಅವರಿಗೆ ನೋಟಿಸ್ ಜಾರಿ ಮಾಡಿತ್ತು. ಆದರೆ, ಅವರಿಗೆ ನೋಟಿಸ್ ತಲುಪದೆ ವಾಪಸ್ ಬಂದಿದೆ. ವಿಶ್ವನಾಥ್ ಅವರು ಉದ್ದೇಶಪೂರ್ವಕವಾಗಿ ನೋಟಿಸ್ ಸ್ವೀಕರಿಸಿಲ್ಲ. ಹಾಗಾಗಿ, ಅವರಿಗೆ ಹ್ಯಾಂಡ್ ಸಮನ್ಸ್ ನೀಡಬೇಕು ಎಂದು ಕೋರಿದರು.
ಅದನ್ನು ಪರಿಗಣಿಸಿದ ನ್ಯಾಯಪೀಠ, ಬಿಡಿಎ ಅಧ್ಯಕ್ಷ ಎಸ್. ಆರ್. ವಿಶ್ವನಾಥ್ ಅವರಿಗೆ ನೋಟಿಸ್ ಅನ್ನು ಹ್ಯಾಂಡ್ ಸಮನ್ಸ್ ಮೂಲಕ ಜಾರಿ ಮಾಡಲು ಅರ್ಜಿದಾರ ಪರ ವಕೀಲರಿಗೆ ಸೂಚಿಸಿತ್ತು.
ಬಿಡಿಎ ಅಧ್ಯಕ್ಷರು ಹಾಗೂ ಸದಸ್ಯರ ನೇಮಕಾತಿಗೆ ನಿರ್ದಿಷ್ಟ ನಿಯಮ ಹಾಗೂ ಮಾರ್ಗಸೂಚಿ ಇಲ್ಲ. ಸರ್ಕಾರ ತನಗೆ ಬೇಕಾದವರನ್ನು ಅಧ್ಯಕ್ಷ ಹಾಗೂ ಸದಸ್ಯರ ಸ್ಥಾನಕ್ಕೆ ನೇಮಿಸುತ್ತದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇರುವುದಿಲ್ಲ. ಬಿಡಿಎ ಹಾಲಿ ಅಧ್ಯಕ್ಷರಾಗಿರುವ ವಿಶ್ವನಾಥ್ ಅವರು ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಅವರಿಗೆ ಬಿಡಿಎ ಅಧ್ಯಕ್ಷರಾಗಲು ಅರ್ಹತೆ ಇಲ್ಲ. ಆದ್ದರಿಂದ ಶಾಸಕ ಎಸ್.ಆರ್. ವಿಶ್ವನಾಥ್ ಅವರನ್ನು ಬಿಡಿಎ ಅಧ್ಯಕ್ಷರಾಗಿ ನೇಮಿಸಿ ಸರ್ಕಾರ 2020ರ ನ.28ರಂದು ಹೊರಡಿಸಿದ ಆದೇಶ ರದ್ದುಪಡಿಸುವಂತೆ ಅರ್ಜಿದಾರರು ಕೋರಿದ್ದಾರೆ.












Click it and Unblock the Notifications