ದೇಶ ವಿರೋಧಿಗಳಿಗೆ ಬಿರಿಯಾನಿ ಅಲ್ಲ, ಬುಲೆಟ್ ಕೊಡ್ಬೇಕು: ಸಿಟಿ ರವಿ
ಬೆಂಗಳೂರು, ಜನವರಿ 29: ದೇಶದ್ರೋಹಿಗಳಿಗೆ ಬಿರಿಯಾನಿ ಅಲ್ಲ ಬುಲೆಟ್ ಕೊಡ್ಬೇಕು ಎಂದು ಪ್ರವಾಸೋದ್ಯಮ ಸಚಿವ ಸಿಟಿ ರವಿ ಹೇಳಿದ್ದಾರೆ.
ಕೇಂದ್ರ ಸಚಿವ ಹಾಗೂ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರಿಗೆ ಬೆಂಬಲ ಸೂಚಿಸಿರುವ ಅವರು ದೇಶದ್ರೋಹಿಗಳ ವಿರುದ್ಧ ಹೇಳಿಕೆ ನೀಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರನ್ನು ಖಂಡಿಸುವವರು ಭಯೋತ್ಪಾದಕರಾದ ಅಜ್ಮಲ್ ಕಸಬ್, ಯಾಕುಬ್ ಮೆಮನ್ ನಂತಹ ಭಯೋತ್ಪಾದಕರ ಸಾವನ್ನು ವಿರೋಧಿಸುವವರು ಎಂದರ್ಥ.
ಇಂತವರು ಟುಕ್ಡೆ ಟುಕ್ಡೆ ಗ್ಯಾಂಗ್ ಸೇರಿಕೊಂಡು ಸಿಎಎ ವಿರುದ್ಧ ಅಪಪ್ರಚಾರ ನಡೆಸುವವರು. ದೇಶ ವಿರೋಧಿಗಳಿಗೆ ಬುಲೆಟ್ ಕೊಡಬೇಕು ಬಿರಿಯಾನಿ ಅಲ್ಲ ಎಂದು ಸ್ಟಾಂಡ್ ವಿತ್ ಅನುರಾಗ್ ಠಾಕೂರ್ ಎಂದು ಹ್ಯಾಶ್ ಟ್ಯಾಗ್ ಬರೆದು ಟ್ವೀಟ್ ಮಾಡಿದ್ದಾರೆ.

ದೇಶದ್ರೋಹಿಗಳನ್ನು ಶೂಟ್ ಮಾಡಿ ಕೊಲ್ಲಿ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಮೊನ್ನೆ ದೆಹಲಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಹೇಳಿದ್ದು ತೀವ್ರ ವಿವಾದಕ್ಕೆ ಕಾರಣವಾಗಿ ಚುನಾವಣಾ ಆಯೋಗ ಅವರಿಗೆ ಶೋಕಾಸ್ ನೊಟೀಸ್ ಜಾರಿ ಮಾಡಿ ಇದೇ 30ರಂದು ಮಧ್ಯಾಹ್ನ 12 ಗಂಟೆಯೊಳಗೆ ಉತ್ತರಿಸುವಂತೆ ಹೇಳಿದೆ.
ನವದೆಹಲಿಯಲ್ಲಿ ನಡೆದ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಸಾರ್ವಜನಿಕ ವೇದಿಕೆಯಲ್ಲಿ ಭಾಷಣ ಮಾಡಿರುವ ಸಚಿವ ಅನುರಾಗ್ ಠಾಕೂರ್ ಪ್ರಚೋದನಕಾರಿ ಘೋಷಣೆ ಕೂಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಭಾಷಣದ ವೇಳೆ ಕೈಗಳನ್ನು ಎತ್ತಿ 'ದೇಶದ್ರೋಹಿಗಳನ್ನು...' ಎಂದು ಘೋಷಣೆ ಕೂಗಿದ ಅನುರಾಗ್ ಠಾಕೂರ್ ಅವರ ಜೊತೆಗೆ 'ಗೋಲಿ ಮಾರೋ (ಗುಂಡಿಕ್ಕಿ ಕೊಲ್ಲಿ)' ಎಂದು ಸಭೆಯಲ್ಲಿ ಸೇರಿದ್ದ ಜನರೆಲ್ಲ ಆಕ್ರೋಶದಿಂದ ಘೋಷಣೆ ಕೂಗುತ್ತಿದ್ದ ವಿಡಿಯೋ ಈಗ ವೈರಲ್ ಆಗಿತ್ತು.
'ಗುಂಡಿಕ್ಕಿ ಕೊಲ್ಲಿ' ಎಂದು ಕೂಗಿದ್ದು ನಾನಲ್ಲ, ಜನರು ಎಂದು ಸಚಿವ ಅನುರಾಗ್ ಠಾಕೂರ್ ಸಮಜಾಯಿಷಿ ನೀಡಿದ್ದಾರೆ. ಆದರೆ, ಠಾಕೂರ್ ಅವರ ಘೋಷಣೆಯ ಉದ್ದೇಶ ಅದೇ ಆಗಿತ್ತು ಎಂದು ಜಾಲತಾಣಿಗರು ಆರೋಪಿಸಿದ್ದಾರೆ.
ಚುನಾವಣಾ ಪ್ರಚಾರದ ವೇದಿಕೆಯಲ್ಲಿ ಈ ರೀತಿಯ ಭಾಷಣ ಮಾಡಿರುವುದರಿಂದ ಈ ಕಾರ್ಯಕ್ರಮದ ವಿಡಿಯೋ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಚುನಾವಣಾ ಆಯೋಗ ತಿಳಿಸಿದೆ.












Click it and Unblock the Notifications