Namma Metro: ಹಳದಿ ಮಾರ್ಗಕ್ಕಾಗಿ ಏಪ್ರಿಲ್‌ಗೆ ಬರುತ್ತಾ ಡ್ರೈವರ್‌ಲೆಸ್ ರೈಲು? ಮುಂದೇನು..
ಬೆಂಗಳೂರು, ಮಾರ್ಚ್ 25: ಬೆಂಗಳೂರು ನಮ್ಮ ಮೆಟ್ರೋ ರೈಲು ಯೋಜನೆಗಳಿಗೆ ಹೆಚ್ಚಿನ ವೇಗ ಸಿಗುತ್ತಿದೆ. ನಿರ್ಮಾಣ ಹಂತದ ಹೊಸ ಮಾರ್ಗಗಳಲ್ಲಿ ಕಾಮಗಾರಿ ಕೆಲಸ ಭರದಿಂದ ಸಾಗಿದೆ. ಆದರೆ ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಮೇಲೆ ಜನರಿಗೆ ಬೇಸರ ಮೂಡಿದೆ. ಏಕೆಂದರೆ ಮುಂದಿನ ವರ್ಷಾಂತ್ಯಕ್ಕೆ ಎರಡು ಹೊಸ ಮಾರ್ಗಗಳ ನಿರ್ಮಾಣ ಪೂರ್ಣಗೊಳ್ಳಲಿದೆ. ಆದರೆ ಪೂರ್ಣಗೊಂಡು ವರ್ಷಗಳು ಕಳೆದರು 'ಹಳದಿ ಮಾರ್ಗದಲ್ಲಿ' ರೈಲು ಸಂಚಾರ ವಿಳಂಬವಾಗುತ್ತಲೇ ಇದೆ. ಇತ್ತೀಚೆಗೆ ಹೊಸ ಡ್ರೈವರ್‌ಲೆಸ್ ರೈಲು ನಗರಕ್ಕೆ ಬಂದರೂ ಸಹಿತ ಮತ್ತೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ.
ರಾಷ್ಟ್ರೀಯ ವಿದ್ಯಾಯಲಯ ರಸ್ತೆಯಿಂದ ಬೊಮ್ಮಸಂದ್ರವರೆಗೆ ಸುಮಾರು 19 ಕಿಲೋ ಮೀಟರ್ ಉದ್ದದ ಮಾರ್ಗದಲ್ಲಿ ಸಂಚರಿಸಲು ರೈಲುಗಳ ಅವಶ್ಯಕತೆ ಇದೆ. ಈಗಾಗಲೇ ಮಾತುಕತೆ, ಒಪ್ಪಂದ ಹಾಗೂ ನೀಡಿದ ಭರವಸೆ ಪ್ರಕಾರ, ಏಪ್ರಿಲ್‌ನಲ್ಲಿ ಇನ್ನೊಂದು ಡ್ರೈವರ್‌ಲೆಸ್ ರೈಲು ಬರಬೇಕಿತ್ತು. ಆದರೆ ಈ ಬಗ್ಗೆ ಯಾವುದೇ ಅಪ್ಡೇಟ್ ಇನ್ನೂವರೆಗೂ ಸಿಕ್ಕಿಲ್ಲ.

ಫೆಬ್ರವರಿ 24 ರಂದು ಮೆಟ್ರೋ ರೈಲು ಸರುಕ್ಷತಾ ಆಯುಕ್ತರು (CMRS) ತಪಾಸಣೆ ನಡೆಸಿದ್ದಾರೆ. ಚೆನ್ನೈ ಟಿಟಾಗರ್ ನಿಂದ ಬಂದ ರೈಲು ವಿವಿಧ ಪರೀಕ್ಷೆಗಳಿಗೆ ಒಳಪಡುತ್ತಿದೆ. ನಂತರ ಕೇಂದ್ರ ಸಚಿವಾಲಯದ ಅನುಮೋದನೆ ಪಡೆಯಲಿದೆ. ಒಂದು ರೈಲು ಚೆನ್ನೈನಿಂದ ಬೆಂಗಳೂರಿಗೆ ಬರಲು 1900 ಕಿಲೋ ಮೀಟರ್ ಕ್ರಮಿಸಬೇಕು. ಫೆಬ್ರವರಿ 06ರಂದು ಬಿಟ್ಟಿದ್ದ ಹಳದಿ ಮಾರ್ಗದ ರೈಲು ಫೆಬ್ರವರಿ ಮೂರನೇ ವಾರ ಆಗಮಿಸಿತ್ತು. ಅದರ ಚಾಲನೆ ವೇಳೆ ಟಿಟಾಗರ್ ಕಂಪನಿಯು, ಏಪ್ರಿಲ್‌ನಲ್ಲಿ ಒಂದು ರೈಲು ನೀಡುವುದಾಗಿ ತಿಳಿಸಿತ್ತು. ನಂತರ ಕ್ರಮವಾಗಿ ಮಾಸಿಕ ಎರಡು ಎರಡು ರೈಲು ಪೂರೈಕೆ ಬಗ್ಗೆ ಭರವಸೆ ನೀಡಿತ್ತು.
ಸದ್ಯ ಮಾರ್ಚ್ ಅಂತ್ಯದಲ್ಲಿದ್ದೇವೆ. ಏಪ್ರಿಲ್ ಗೆ ನಿಗದಿಯಂತೆ ರೈಲು ಪೂರೈಕೆ ಮಾಡಬೇಕಿದೆ. ಇಲ್ಲವಾದರೆ ರೈಲು ಪೂರೈಕೆ ವಿಳಂಬವಾಗಿ ಮಾರ್ಗ ತೆರೆಯುವುದು ಮತ್ತಷ್ಟು ವಿಳಂಬವಾಗಲಿದೆ. ಐಟಿ ಕಾರಿಡಾರ್‌ಗೆ ಸಂಪರ್ಕ ಕಲ್ಪಿಸುವ ಹಳದಿ ಮಾರ್ಗದ ಕಾರ್ಯಾಚರಣೆಗೆ ಪ್ರಯಾಣಿಕರು ಕಾಯುತ್ತಿದ್ದಾರೆ. ಏಪ್ರಿಲ್ ನಲ್ಲಿ ರೈಲು ಆಗಮಿಸಿದರೂ ಕಾರ್ಯಾಚರಣೆ ಆಗುತ್ತಾ? ಮತ್ತೆ ವಿಳಂಬವಾಗುತ್ತಾ? ಎಂಬ ಅನುಮಾನ ಉಂಟಾಗಿದೆ.
ಹಾಲಿ ಇರುವ ಒಂದೆರಡು ಡ್ರೈವರ್‌ಲೆಸ್ ರೈಲುಗಳಿಂದ ಯಾವುದೇ ಕಾರ್ಯಾಚರಣೆ ಮಾಡಲು ಸಾಧ್ಯವಾಗುವುದಿಲ್ಲ. ಪರೀಕ್ಷೆಗಳು ಎಲ್ಲವು ಮುಗಿದರೂ ಸಹಿತ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಇನ್ನಷ್ಟು ರೈಲುಗಳಿಗೆ ಕಾಯುವ ಸ್ಥಿತಿ ತಲುಪಲಿದೆ. ಆದ್ದರಿಂದ ನಿಗಮದ ಅಧಿಕಾರಿಗಳು ಮಾಸಿಕ ಎರಡು ರೈಲುಗಳನ್ನು ಪೂರೈಕೆ ಆಗುವಂತೆ ಒತ್ತಡ ಹೇರಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈ ಮಾರ್ಗ ಶೀಘ್ರವೇ ತೆರೆಯುವಂತೆ, ಪ್ರಯಾಣಿಕರಿಗೆ ಅನುಕೂಲ ಮಾಡುವಂತೆ ಪಕ್ಷಾತೀತವಾಗಿ ರಾಜಕೀಯ ನಾಯಕರು ನಮ್ಮ ಮೆಟ್ರೋ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ.

ಮೇ ತಿಂಗಳಲ್ಲಿ ಹಳದಿ ಮಾರ್ಗ ಓಪನ್?
ರೋಲಿಂಗ್ ಸ್ಟಾರ್ ಪೂರೈಕೆ ಕೊರತೆ ಕಾರಣದಿಂದಾಗಿ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಸಂಚಾರ ವಿಳಂಬವಾಗಿದೆ. ನಮ್ಮ ಮೆಟ್ರೋ ಅಧಿಕಾರಿಗಳು ಪ್ರತಿ 30 ನಿಮಿಷಗಳ ಅಂತರದಲ್ಲಿ ರೈಲು ಓಡಿಸಲು ತೀರ್ಮಾನಿಸಿದ್ದರೆ. ಆದರೆ ಕಾರ್ಯಾಚರಣೆಗಾಗಿ ಇನ್ನಷ್ಟು ರೈಲುಗಳ ಅಗತ್ಯತೆ ಇದೆ. ಇದೇ ಏಪ್ರಿಲ್ 2025ರಲ್ಲಿ ಮತ್ತೊಂದು ಡ್ರೈವರ್ ಲೆಸ್ ರೈಲು ಬೆಂಗಳೂರಿಗೆ ಬರಬೇಕಿದೆ. ಬಂದರೆ ಮೇ ತಿಂಗಳಲ್ಲಿ ಹಳದಿ ಮಾರ್ಗ ಕಾರ್ಯಾಚರಣೆ ಸಾಧ್ಯತೆ ಇದೆ.
ಪಿಂಕ್ ಮಾರ್ಗದಲ್ಲಿ ಸಂಚಾರ ಆರಂಭ ಯಾವಾಗ?
ಇನ್ನೂ ನಾಗವಾರದಿಂದ ಕಾಳೇನ ಅಗ್ರಹಾರವರೆಗಿನ 21 ಕಿಲೋ ಮೀಟರ್ ಉದ್ದದ 'ಗುಲಾಬಿ ಮಾರ್ಗ'ವು ಸಿದ್ಧಗೊಳ್ಳುತ್ತಿದೆ. ಸುರಂಗ ಕೊರೆಯುವ ಕೆಲಸ 96ರಷ್ಟು ಪೂರ್ಣಗೊಂಡಿದೆ. ಎತ್ತರದ ಕಾರಿಡಾರ್ ಸಹ ಇಲ್ಲಿ ಬರಲಿದೆ. ಈ ಮಾರ್ಗ ಮುಂದಿನ ವರ್ಷಾಂತ್ಯಕ್ಕೆ ಪೂರ್ಣ ಮಾರ್ಗದಲ್ಲಿ ಸಂಚಾರ ಸಾಧ್ಯವಾಗಲಿದೆ. ಇನ್ನೂ ಕಾಳೇನ ಅಗ್ರಹಾರ-ತಾವರೆಕರೆ ವರೆಗೆ ಪಿಂಕ್ ಲೈನ್ 2025ರ ವರ್ಷಾಂತ್ಯಕ್ಕೆ ತೆರೆಯುವ ಸಾಧ್ಯತೆ ಇದೆ.
ನೀಲಿ ಮಾರ್ಗದ ಕುರಿತು..
ಬೆಂಗಳೂರು ಸಿಲ್ಕ್‌ಬೋರ್ಡ್‌ನಿಂದ ಕೆ.ಆರ್. ಪುರಂ ಮಾರ್ಗವಾಗಿ ದೆವನಹಳ್ಳಿ ಏರ್‌ಪೋರ್ಟ್‌ವರೆಗೆ ನಡೆಯುತ್ತಿರುವ ಮೆಟ್ರೋ ನೀಲಿ ಮಾರ್ಗದ ಕಾಮಗಾರಿ ಭರದಿಂದ ಸಾಗಿದೆ. 2026ರ ಜೂನ್ ಹೊತ್ತಿಗೆ ಈ ಮಾರ್ಗದಲ್ಲಿ ಕಾರ್ಯಾಚರಣೆ ನಿರೀಕ್ಷೆ ಇದೆ. ಸದ್ಯ ನಮ್ಮ ಮೆಟ್ರೋ ಹಳದಿ ಮಾರ್ಗ ಕಾರ್ಯಚರಣೆ ಮೇಲೆ ಸಾರ್ವಜನಿಕರ ಅಪಾರ ನಿರೀಕ್ಷೆ ಇದೆ.
ನಮ್ಮ ಮೆಟ್ರೋ ಮಾರ್ಗ ವಿಸ್ತರಣೆ ಯೋಜನೆ
ಬೆಂಗಳೂರು ನಮ್ಮ ಮೆಟ್ರೋ ರೈಲು ನಿಗಮವು ಈಗಾಗಲೇ 67 ಕಿಲೋ ಮೀಟರ್ ಮೆಟ್ರೋ ಜಾಲ ಹೊಂದಿದೆ. ಮುಂದಿನ ದಿನಗಳಲ್ಲಿ ಈ ಮೆಟ್ರೋ ಜಾಲ 255 ಕಿಲೋ ಮೀಟರ್‌ಗೆ ಏರಿಕೆ ಆಗಲಿದೆ. ಈ ಸಂಬಂಧ 197 ಕಿಲೋ ಮೀಟರ್ ಮಾರ್ಗ ವಿಸ್ತರಣೆಗಾಗಿ ಕಾರ್ಯಸಾಧ್ಯತಾ ಅಧ್ಯಯನ ಮಾಡಲಾಗುತ್ತಿದೆ. ಇದಕ್ಕೆ ಹೆಚ್ಚುವರಿ ಮಾರ್ಗಗಳನ್ನು ಇತ್ತೀಚೆಗೆ ಸೇರಿಸಲಾಗಿದೆ. ಒಟ್ಟು ಮೂರು ಜಿಲ್ಲೆಗಳವರೆಗೆ ಮೆಟ್ರೋ ವಿಸ್ತರಣೆ ಮಾಡಲು ಬಿಎಂಆರ್‌ಸಿಎಲ್ ಮುಂದಾಗಿದೆ.
ಇತ್ತೀಚೆಗೆ ರಾಜ್ಯ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರೇ ಘೋಷಿಸಿದ್ದಾರೆ. ದೇವನಹಳ್ಳಿವರೆಗೆ ಮೆಟ್ರೋ ವಿಸ್ತರಣೆ ಆಗಲಿದೆ. ಇದಕ್ಕೆ ರಾಜ್ಯ ಸರ್ಕಾರ ಸಹಕಾರ ನೀಡಲಾಗುವುದು ಎಂದಿದೆ. ಇನ್ನೂ ನೇರಳೆ ಮಾರ್ಗದ ಚಲಘಟ್ಟದಿಂದ ಬಿಡದಿವರೆಗೆ ಮೆಟ್ರೋ ಮಾರ್ಗ ನಿರ್ಮಿಸಲು ಪರಿಶೀಲಿಸಲಾಗುತ್ತದೆ. ಹಸಿರು ಮಾರ್ಗದ ಕೊನೆ ನಿಲ್ದಾಣವಾದ ಮಾದಾವರದಿಂದ ತುಮಕೂರು ವರೆಗೆ ವಿಸ್ತರಣೆ ಮಾಡುವ ಪ್ಲಾನ್ ಇದೆ. ಈ ಸಂಬಂಧ ಅಧಿಕಾರಿಗಳು ಅಧ್ಯಯನ ನಡೆಸಲಾಗುತ್ತಿದೆ.
ಎಲ್ಲವು ಅಂದುಕೊಂಡಂತೆ ಆದರೆ ಭವಿಷ್ಯದಲ್ಲಿ ನಮ್ಮ ಮೆಟ್ರೋ ರೈಲು ರಾಮನಗರ, ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರ ಭಾಗಕ್ಕೂ ಸಂಪರ್ಕ ಕಲ್ಪಿಸಲಿದೆ. ಇದರಿಂದ ಆ ಭಾಗದ ಲಕ್ಷಾಂತರ ಜನರಿಗೆ ಸಹಾಯವಾಗುತ್ತದೆ. ಕೊನೆ ಇಲ್ಲದ ಪ್ರಾಜೆಕ್ಟ್ ಇದಾಗಿದ್ದು,ಬೆಂಗಳೂರಿನ ಹೊರ ವಲಯದಲ್ಲಿ ಅಷ್ಟ ದಿಕ್ಕುಗಳಿಗೂ ಮೆಟ್ರೋ ವಿಸ್ತರಣೆ ಆಗುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ, 350 ಕಿಲೋ ಮೀಟರ್ ಮೆಟ್ರೋ ಜಾಲ ಬೆಂಗಳೂರು ಸುತ್ತಮುತ್ತ ನಿರ್ಮಾಣವಾಗಲಿದೆ.












Click it and Unblock the Notifications