ಅನಾಮಧೇಯ ಪತ್ರದಿಂದ ಕೊಲೆ ರಹಸ್ಯ ಬಯಲು!
ಬೆಂಗಳೂರು, ಮೇ 20 : ದೇವರಜೀವನಹಳ್ಳಿ ಪೊಲೀಸ್ ಠಾಣೆಗೆ ಬಂದ ಅನಾಮಧೇಯಪತ್ರವೊಂದು ಮೂರು ತಿಂಗಳ ಹಿಂದೆ ನಡೆದ ಕೊಲೆ ಪ್ರಕರಣವನ್ನು ಬಯಲು ಮಾಡಿದೆ. ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ಪತಿಯನ್ನೇ ಹತ್ಯೆ ಮಾಡಿದ್ದ ಪತ್ನಿ ಮತ್ತು ಆಕೆಯ ಪ್ರಿಯಕರ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಮಾ.21ರಂದು ಡಿ.ಜೆ.ಹಳ್ಳಿಯ ಮೋದಿ ರಸ್ತೆ ನಿವಾಸಿ ಆಶ್ರಫ್ ವುನ್ನೀಸಾ (28), ಪತಿ ಇಷ್ತಿಯಾಕ್ ಅಹಮದ್ (38) ಅವರನ್ನು ತನ್ನ ಪ್ರಿಯಕರ ಮತ್ತು ನಾಲ್ವರು ಸಹಚರರೊಂದಿಗೆ ಸೇರಿ ಕೊಲೆ ಮಾಡಿದ್ದಳು. ಪತಿ ಅನಾರೋಗ್ಯದಿಂದ ಮೃತಪಟ್ಟರು ಎಂದು ಸಂಬಂಧಿಕರನ್ನು ನಂಬಿಸಿ, ತರಾತುರಿಯಲ್ಲಿ ಅಂದು ಅಂತ್ಯಕ್ರಿಯೆ ನಡೆಸಿದ್ದರು.

ಕೊಲೆಯಾದ ಇಷ್ತಿಯಾಕ್ ಅಹಮದ್ ತಂದೆ ಡಿ.ಜೆ.ಹಳ್ಳಿ ಠಾಣೆಗೆ ಮೂಗರ್ಜಿ ಪತ್ರ ಬರೆದು ಮಗನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಸೊಸೆ ಮೇಲೆ ನನಗೆ ಅನುಮಾನವಿದೆ ಈ ಕುರಿತು ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದರು. ಪ್ರಕರಣದ ತನಿಖೆ ಕೈಗೊಂಡ ಇನ್ಸ್ ಪೆಕ್ಟರ್ ಬಿ.ಗಿರೀಶ್ ಮತ್ತು ಸಿಬ್ಬಂದಿಗಳು ಮೋದಿ ರಸ್ತೆಯಲ್ಲಿ ಅಂಗಡಿ ಇಟ್ಟುಕೊಂಡಿದ್ದ ಸೈಫ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯ ಬಯಲಾಗಿದೆ.
ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಆಶ್ರಫ್ ವುನ್ನೀಸಾ ಪತಿ ಇಷ್ತಿಯಾಕ್ ಅಹಮದ್ ಅವರನ್ನು ಕೊಲೆ ಮಾಡಿರುವುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಶ್ರಫ್ ವುನ್ನೀಸಾ, ಈಕೆಯ ಪ್ರಿಯಕರ ಸೈಫ್ ಹಾಗೂ ಈತನ ಸಹಚರರಾದ ಮತೀನ್ ಅಹ್ಮದ್ ಹಾಗೂ ಮನ್ಸೂರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರೀತಿಸಿ ಮದುವೆಯಾಗಿ ಕೊಲೆಯಾದ : ಕೊಲೆಯಾದ ಇಷ್ತಿಯಾಕ್ ಅಹಮದ್ ಮಿನಿ ಲಾರಿ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ. ಎಂಟು ವರ್ಷಗಳ ಹಿಂದೆ ಆಶ್ರಫ್ ಅನ್ನು ಪ್ರೀತಿಸಿ ಮದುವೆಯಾಗಿದ್ದ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ದಂಪತಿಗಳು ವಾಸಿಸುತ್ತಿದ್ದ ಡಿ.ಜೆ.ಹಳ್ಳಿಯ ಮೋದಿ ರಸ್ತೆಯಲ್ಲಿ ದಿನಸಿ ಅಂಗಡಿ ಇಟ್ಟುಕೊಂಡಿದ್ದ ಸೈಫ್ ಆಶ್ರಫ್ ಗೆ ಪರಿಚಯವಾಗಿದ್ದಾನೆ.
ಪರಿಚಯದ ನಂತರ ಇಬ್ಬರ ಮಧ್ಯೆ ಅನೈತಿಕ ಸಂಬಂಧ ಬೆಳೆದಿದೆ. ಈ ಬಗ್ಗೆ ಪತಿ ಇಷ್ತಿಯಾಕ್ ಗೆ ತಿಳಿದು, ಸೈಫ್ ಜತೆಗಿನ ಸ್ನೇಹ ಬಿಡುವಂತೆ ಆಶ್ರಫ್ ಗೆ ತಾಕೀತು ಮಾಡಿದ್ದರು. ಈ ವಿಷಯದ ಕುರಿತು ದಂಪತಿಗಳಲ್ಲಿ ಆಗಾಗ ಜಗಳ ನಡೆಯುತ್ತಿತ್ತು. ಇದರಿಂದ ಕೋಪಗೊಂಡ ಆಶ್ರಫ್ ಪ್ರಿಯಕರ ಸೈಪ್ ಜೊತೆ ಸೇರಿ ಪತಿಯ ಹತ್ಯೆ ಸಂಚು ರೂಪಿಸಿದ್ದಳು.
ಮಾ.21ರಂದು ಊಟದಲ್ಲಿ ನಿದ್ರೆ ಮಾತ್ರೆ ಹಾಕಿ ಇಷ್ತಿಯಾಕ್ ಗೆ ತಿನ್ನಿಸಿದ್ದಾರೆ. ನಂತರ ಸೈಫ್ ಮತ್ತು ಆತನ ಸಹಚರರು ಉಸಿರುಗಟ್ಟಿಸಿ ಅವರನ್ನು ಕೊಲೆ ಮಾಡಿದ್ದಾರೆ. ಮೃತ ದೇಹದ ಮೇಲೆ ಗಾಯದ ಗುರುತು ಪತ್ತೆಯಾಗಿರಲಿಲ್ಲ. ಆದ್ದರಿಂದ ಬಂಧುಗಳಿಗೂ ಕೊಲೆಯ ಬಗ್ಗೆ ಅನುಮಾನ ಬಂದಿರಲಿಲ್ಲ. ಸದ್ಯ ಶವವನ್ನು ಹೊರತೆಗೆದು ಡಿಎನ್ಎ ಪರೀಕ್ಷೆಗೆ ಕಳುಹಿಸಲಾಗಿದೆ.












Click it and Unblock the Notifications