ಪತ್ನಿಯನ್ನು ಕೊಲೆ ಮಾಡಿ ತಾನೂ ಕತ್ತು ಕೊಯ್ದುಕೊಂಡ ಪತಿ; ಬೆಚ್ಚಿಬಿದ್ದ ಆನೇಕಲ್ !
ಬೆಂಗಳೂರು, ಮಾ. 21: ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುವ ಗಾದೆ ಮಾತಿದೆ. ಆದರೆ ಆನೇಕಲ್‌ನಲ್ಲಿ ನಡೆದಿರುವ ಗಂಡ ಹೆಂಡತಿ ಜಗಳ ರಕ್ತದ ಕೋಡಿಯಲ್ಲಿ ಕೊನೆಗೊಂಡಿದೆ. ಕ್ಷುಲ್ಲಕ ಕಾರಣದಿಂದ ಉಂಟಾದ ಜಗಳಕ್ಕೆ ಪತ್ನಿ ಕೊಲೆಯಾಗಿದ್ದಾಳೆ. ಗಂಡ ಕೂಡ ಚಾಕುವಿನಿಂದ ಕತ್ತು ಕೊಯ್ದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಅಮ್ಮನ ಪ್ರಾಣ ಉಳಿಸಲು ಹೋದ ಹತ್ತು ವರ್ಷದ ಮಗ ಕೂಡ ಜನ್ಮ ಕೊಟ್ಟ ತಂದೆಯಿಂದಲೇ ಚಾಕುವಿನಿಂದ ಇರಿತಕ್ಕೆ ಒಳಗಾಗಿ ಗಾಯಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಇಂತಹ ದುರಂತ ಘಟನೆಯೊಂದು ಆನೇಕಲ್ ತಾಲೂಕಿನ ಯಡವನಹಳ್ಳಿಯಲ್ಲಿ ಸೋಮವಾರ ಬೆಳಗಿನ ಜಾವ ನಡೆದಿದೆ. ಲಾವಣ್ಯ (30) ಗಂಡನಿಂದ ಕೊಲೆಯಾದವಳು. ಇನ್ನು ತಾನೂ ಕತ್ತುಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು ಸಂಪತ್ ಎಂಬಾತ. ಇಬ್ಬರ ಜಗಳ ಬಿಡಸಲು ಹೋದ ಹತ್ತು ವರ್ಷದ ಕಂದಮ್ಮ ಭಾರ್ಗವ್ ಕೂಡ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಸಂಪತ್ ಮತ್ತು ಲಾವಣ್ಯ ದಂಪತಿ ನಡುವೆ ಕಳೆದ ಹತ್ತು ದಿನಗಳಿಂದ ಜಗಳ ನಡೆಯುತ್ತಿತ್ತು. ಈ ವಿಚಾರ ಲಾವಣ್ಯ ಅವರ ಮನೆಗೂ ಗೊತ್ತಾಗಿತ್ತು. ಭಾನುವಾರ ಲಾವಣ್ಯ ಪೋಷಕರು ಮನೆಗೆ ಬಂದು ಇಬ್ಬರಿಗೂ ಬುದ್ಧಿವಾದ ಹೇಳಿ ಕಳಿಸಿದ್ದಾರೆ. ಇದೇ ವಿಚಾರವಾಗಿ ಪುನಃ ಜಗಳ ಮಾಡಿಕೊಂಡಿದ್ದಾರೆ. ಪತಿ ಪತ್ನಿಯ ನಿರಂತರ ಜಗಳ ಬೆಳಗಿನ ಜಾವ ದೊಡ್ಡ ದುರಂತಕ್ಕೆ ನಾಂದಿ ಹಾಡಿದೆ.

ಮನೆಯಲ್ಲಿ ಮಲಗಿದ್ದ ಲಾವಣ್ಯ ಕತ್ತು ಕೊಯ್ದು ಪತಿ ಸಂಪತ್ ಕೊಲೆ ಮಾಡಿದ್ದಾನೆ. ಅಮ್ಮನನ್ನು ರಕ್ಷಿಸಲು ಹೋದ ಭಾರ್ಗವ್ ಕೈಗೆ ಚಾಕುವಿನಿಂದ ತಿವಿದಿದ್ದು, ಪತ್ನಿ ಸಾವಿನ ಬಳಿಕ ಆತನೂ ಚಾಕುವಿನಿಂದ ಕತ್ತುಕೊಯ್ದುಕೊಂಡಿದ್ದಾನೆ. ರಕ್ತದ ಮಡುವಿನಲ್ಲಿಯೇ ಮನೆ ಹೊರಗಿನ ಚರಂಡಿಗೆ ಬಿದ್ದು ಒದ್ದಾಡುತ್ತಿದ್ದ. ಸಂಪತ್ ರಕ್ತದ ಮಡುವಿನಲ್ಲಿ ಒದ್ದಾಡುವುದನ್ನು ಗಮನಿಸಿದ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮನೆ ಬಳಿ ನೋಡಿದಾಗ ಲಾವಣ್ಯ ಕೊಲೆಯಾಗಿರುವುದು ಗೊತ್ತಾಗಿದೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಾಕ್ಷಾಧಾರಗಳನ್ನು ಸಂಗ್ರಹಿಸಿದ್ದಾರೆ. ಮೃತ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.

ಘಟನೆ ಸಂಬಂಧ ಹತ್ತು ವರ್ಷದ ಬಾಲಕ ಭಾರ್ಗವ್ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಕುಡಿದು ಬಂದು ಪತ್ನಿ ಜತೆ ಜಗಳ ವಾಡುತ್ತಿದ್ದ ಸಂಪತ್ ಮಾಡಬಾರದ ಕೃತ್ಯ ಎಸಗಿ ತನ್ನ ಜೀವವನ್ನೂ ಅಪಾಯಕ್ಕೆ ತಂದೊಡ್ಡುಕೊಂಡಿದ್ದಾನೆ. ಈ ಕುರಿತು ಆನೇಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Recommended Video













Click it and Unblock the Notifications