‘ಹಾಳು ಹಂಪಿ’ ಅಲ್ಲ, ಕರ್ನಾಟಕದ ಚಿನ್ನದ ಗಣಿ! 1.53 ಕೋಟಿ ಪ್ರವಾಸಿಗರನ್ನು ಸೆಳೆದ ವಿಜಯನಗರ

ʼಹಾಳು ಹಂಪಿʼ ಎಂದು ತಾತ್ಸಾರ ಮಾಡಬೇಡಿ. ಕನಾಟಕಕ್ಕೆ ಅತ್ಯಂತ ಅಧಿಕ ಆದಾಯ ತಂದುಕೊಡುವ ಪ್ರವಾಸಿ ತಾಣ ಈ ಹಂಪಿ ಅಥವಾ ವಿಜಯ ನಗರ. ಬಳ್ಳಾರಿ ಜಿಲ್ಲೆಯಿಂದ ಬೇರ್ಪಟ್ಟು ಐದು ವರ್ಷಗಳಾಗಿವೆ. ಆದರೂ, ವಿಜಯನಗರ ಜಿಲ್ಲೆಯ ಪ್ರವಾಸೋದ್ಯಮ ದಿನೇದಿನೇ ಅಭಿವೃದ್ಧಿ ಹೊಂದುತ್ತಿದೆ. ಈ ಬಗ್ಗೆ ಕೆಲವು ಪ್ರಮುಖ ಮಾಹಿತಿ ಇಲ್ಲಿದೆ.

ಪ್ರವಾಸಿಗರ ಸಂಖ್ಯೆ ಎಷ್ಟು?

2021ರಿಂದ 2025ರವರೆಗೆ ಸುಮಾರು 1.53 ಕೋಟಿ ಪ್ರವಾಸಿಗರು ವಿಜಯನಗರ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಇದರಲ್ಲಿ 69,304 ಮಂದಿ ವಿದೇಶಿ ಪ್ರವಾಸಿಗರು ಸೇರಿದ್ದಾರೆ. ವಿದೇಶಿ ಪ್ರವಾಸಿಗರು ಮುಖ್ಯವಾಗಿ ಹಂಪಿಯ ಸ್ಮಾರಕಗಳನ್ನು ನೋಡಿ ಮನ ತಣಿಯಲು ಬರುತ್ತಾರೆ. ಈ ತಾಣವನ್ನು ವಿಶ್ವಸಂಸ್ಥೆಯ ಯುನೆಸ್ಕೋ ತಾಣಗಳಲ್ಲಿ ಪಟ್ಟಿ ಮಾಡಲಾಗಿರುವುದರಿಂದ ಈ ಆಕರ್ಷಣೆ. ಜರ್ಮನಿ, ಅಮೆರಿಕ, ಇಸ್ರೇಲ್‌, ಫ್ರಾನ್ಸ್‌, ಇಂಗ್ಲೆಂಡ್‌, ಆಸ್ಟ್ರೇಲಿಯದ ಪ್ರವಾಸಿರು ಹೆಚ್ಚು.

Hampi

ಪ್ರವಾಸಿಗರು ಕೇವಲ ಹಂಪಿಯನ್ನಷ್ಟೇ ಅಲ್ಲದೆ, ಜಿಲ್ಲೆಯ ಇತರೆ ತಾಣಗಳಿಗೂ ಭೇಟಿ ನೀಡುತ್ತಿದ್ದಾರೆ. ಹಂಪಿಗೆ ಬಂದವರು 39.36 ಲಕ್ಷ ಪ್ರವಾಸಿಗರು. ತುಂಗಭದ್ರಾ ಜಲಾಶಯಕ್ಕೆ 42.51 ಲಕ್ಷ ಪ್ರವಾಸಿಗರು. ಇದಲ್ಲದೆ ಮೈಲಾರ, ಕೊಟ್ಟೂರು, ಕುರುವತ್ತಿ, ಹಂಪಿ ಮೃಗಾಲಯ, ಉಜ್ಜಿನಿ, ಉಚ್ಚಂಗಿದುರ್ಗ, ಬಾಗಳಿ ಮುಂತಾದ ತಾಣಗಳಿಗೆ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡಿದ್ದಾರೆ. ಪ್ರಕೃತಿ ಮತ್ತು ವನ್ಯಜೀವಿ ಪ್ರಿಯರಿಗಾಗಿ ಇರುವ ಅಂಕಸಮುದ್ರ ಪಕ್ಷಿಧಾಮ, ದರೋಜಿ ಕರಡಿ ಧಾಮ ಮತ್ತು ಗುಡೆಕೋಟೆ ಕರಡಿ ಧಾಮಗಳಿಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ.

ಹಂಪಿ ಮತ್ತು ವಿಜಯನಗರ ಜಿಲ್ಲೆಯಲ್ಲಿ ನೋಡಬೇಕಾದ ನೂರಾರು ತಾಣಗಳಿವೆ. ಹಂಪಿ ಯುನೆಸ್ಕೋ (UNESCO) ಮಾನ್ಯತೆ ಪಡೆದ ವಿಶ್ವ ಪರಂಪರೆಯ ತಾಣ. ಇಲ್ಲಿನ ಕಲ್ಲಿನ ಕೆತ್ತನೆಗಳು ಮತ್ತು ಪ್ರಾಚೀನ ವಾಸ್ತುಶಿಲ್ಪ ಅದ್ಭುತ. ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡುವ, ನೀವೂ ಹೋಗಲೇಬೇಕಾದ ಪ್ರಮುಖ ಸ್ಥಳಗಳು ಇವು:

ಆನಂದ್ ಮಹೀಂದ್ರಾ ಮನಗೆದ್ದ ನಮ್ಮ ಹೊನ್ನಾವರ! ಕೇರಳಕ್ಕೆ ಸಿಕ್ಕಷ್ಟು ಮಾನ್ಯತೆ ಕರ್ನಾಟಕ್ಕೆ ಇಲ್ವಾ?
ಆನಂದ್ ಮಹೀಂದ್ರಾ ಮನಗೆದ್ದ ನಮ್ಮ ಹೊನ್ನಾವರ! ಕೇರಳಕ್ಕೆ ಸಿಕ್ಕಷ್ಟು ಮಾನ್ಯತೆ ಕರ್ನಾಟಕ್ಕೆ ಇಲ್ವಾ?

ವಿರೂಪಾಕ್ಷ ದೇವಾಲಯ: ಇದು ಹಂಪಿಯ ಅತ್ಯಂತ ಹಳೆಯ ಮತ್ತು ಪವಿತ್ರವಾದ ದೇವಾಲಯ. ಇಲ್ಲಿ ಶಿವನ ಆರಾಧನೆ ನಡೆಯುತ್ತದೆ. ಹಂಪಿಯ ಮುಖ್ಯ ಕೇಂದ್ರಬಿಂದುವಾಗಿರುವ ಈ ದೇವಾಲಯವು ತನ್ನ ಭವ್ಯವಾದ ಗೋಪುರಗಳಿಗೆ ಹೆಸರುವಾಸಿ.

ವಿಜಯ ವಿಠ್ಠಲ ದೇವಾಲಯ: ಹಂಪಿಯ ವಾಸ್ತುಶಿಲ್ಪದ ವೈಭವಕ್ಕೆ ಇದು ಸಾಕ್ಷಿ. ಇಲ್ಲಿನ ಪ್ರಸಿದ್ಧ 'ಕಲ್ಲಿನ ರಥ' (Stone Chariot) ಮತ್ತು ಸಂಗೀತದ ಸ್ವರಗಳನ್ನು ಹೊರಸೂಸುವ ಕಂಬಗಳು ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತವೆ.

ಲೋಟಸ್ ಮಹಲ್: ಇದು ಕಮಲದ ಹೂವಿನಾಕಾರದಲ್ಲಿರುವ ಸುಂದರ ಕಟ್ಟಡ. ಇದನ್ನು ಅರಮನೆಯ ಮಹಿಳೆಯರು ವಿಶ್ರಾಂತಿಗಾಗಿ ಬಳಸುತ್ತಿದ್ದರು ಎಂದು ಹೇಳಲಾಗುತ್ತದೆ. ಇಲ್ಲಿನ ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪ ಬಹಳ ಆಕರ್ಷಕ.

ಆನೆ ಲಾಯ (Elephant Stables): ರಾಜವಂಶದ ಆನೆಗಳನ್ನು ಸಾಕಲು ಬಳಸುತ್ತಿದ್ದ ಭವ್ಯವಾದ ಕಟ್ಟಡವಿದು. ಇದು ಹನ್ನೊಂದು ಗುಮ್ಮಟಾಕಾರದ ಕೋಣೆಗಳನ್ನು ಹೊಂದಿದೆ.

ಮಳೆಗಾಲದಲ್ಲಿ ತಪ್ಪದೇ ಭೇಟಿ ನೀಡಬೇಕಾದ ಕರ್ನಾಟಕ ಸೇರಿ ಭಾರತದ ಈ 5 ಸುಂದರ ಪ್ರವಾಸಿ ತಾಣಗಳು
ಮಳೆಗಾಲದಲ್ಲಿ ತಪ್ಪದೇ ಭೇಟಿ ನೀಡಬೇಕಾದ ಕರ್ನಾಟಕ ಸೇರಿ ಭಾರತದ ಈ 5 ಸುಂದರ ಪ್ರವಾಸಿ ತಾಣಗಳು

ರಾಯಲ್ ಎನ್ಕ್ಲೋಸರ್ (Royal Palace): ಇದು ವಿಜಯನಗರ ಸಾಮ್ರಾಜ್ಯದ ಆಡಳಿತ ಕೇಂದ್ರವಾಗಿತ್ತು. ಈಗ ಇಲ್ಲಿ ಅರಮನೆಯ ಅಡಿಪಾಯಗಳು ಮಾತ್ರ ಉಳಿದಿವೆಯಾದರೂ, ಅಂದಿನ ಸಾಮ್ರಾಜ್ಯದ ವೈಭವವನ್ನು ಕಲ್ಪಿಸಿಕೊಳ್ಳಲು ಇದು ಸೂಕ್ತವಾದ ಸ್ಥಳ.

ರಾಣಿಯರ ಸ್ನಾನಗೃಹ (Queen's Bathhouse): ಇದು ರಾಣಿಯರು ಸ್ನಾನಕ್ಕಾಗಿ ಬಳಸುತ್ತಿದ್ದ ಸುಂದರವಾದ ಕಟ್ಟಡ. ಇದರ ಹೊರಭಾಗ ಸರಳವಾಗಿದ್ದರೂ, ಒಳಾಂಗಣದ ಕೆತ್ತನೆಗಳು ಅತ್ಯುತ್ತಮವಾಗಿವೆ.

ಮಾತಂಗ ಬೆಟ್ಟ: ಹಂಪಿಯ ಸಂಪೂರ್ಣ ನೋಟವನ್ನು ಪಡೆಯಲು ಇದು ಅತ್ಯುತ್ತಮ ಸ್ಥಳ. ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ನೋಡಲು ಪ್ರವಾಸಿಗರು ಇಲ್ಲಿಗೆ ಹೆಚ್ಚಾಗಿ ಬರುತ್ತಾರೆ. ಇದು ಸ್ವಲ್ಪ ಚಾರಣದ ಅನುಭವ ನೀಡುತ್ತದೆ.

ಹೇಮಕೂಟ ಬೆಟ್ಟ: ವಿರೂಪಾಕ್ಷ ದೇವಾಲಯದ ಪಕ್ಕದಲ್ಲಿಯೇ ಇರುವ ಈ ಬೆಟ್ಟದಲ್ಲಿ ಹಲವಾರು ಸಣ್ಣ ದೇವಾಲಯಗಳಿವೆ. ಸಂಜೆಯ ವೇಳೆ ಇಲ್ಲಿ ಕುಳಿತು ಹಂಪಿಯ ದೃಶ್ಯವನ್ನು ನೋಡುವುದು ಬಹಳ ಶಾಂತಿಯುತವಾದ ಅನುಭವ ನೀಡುತ್ತದೆ.

ಭೂಗತ ಶಿವನ ದೇವಾಲಯ: ಇದು ನೆಲದ ಮಟ್ಟಕ್ಕಿಂತ ಕೆಳಗೆ ಇರುವ ವಿಶಿಷ್ಟ ದೇವಾಲಯ. ಮಳೆಗಾಲದಲ್ಲಿ ಇದು ನೀರಿನಿಂದ ಆವೃತವಾಗಿ ಬಹಳ ನಿಗೂಢವಾಗಿ ಕಾಣುತ್ತದೆ.

ಯಾವಾಗ ಬರಬೇಕು?

ನೀವು ಹಂಪಿಯನ್ನು ಸಂಪೂರ್ಣವಾಗಿ ಅನ್ವೇಷಿಸಲು ಕನಿಷ್ಠ 2ರಿಂದ 3 ದಿನಗಳನ್ನು ಮೀಸಲಿಡುವುದು ಉತ್ತಮ. ಬಿಸಿಲಿನಿಂದ ಪಾರಾಗಲು ಬೆಳಿಗ್ಗೆ ಅಥವಾ ಸಾಯಂಕಾಲದ ಸಮಯದಲ್ಲಿ ಸುತ್ತಾಡುವುದು ಒಳ್ಳೆಯದು.

ಮೊಗಲ್‌ ಸಾಮ್ರಾಜ್ಯಕ್ಕೆ ಸಡ್ಡು ಹೊಡೆದವರು!

ವಿಜಯನಗರ ಸಾಮ್ರಾಜ್ಯವು ದಕ್ಷಿಣ ಭಾರತದ ಅತ್ಯಂತ ಶಕ್ತಿಯುತ ಸಾಮ್ರಾಜ್ಯಗಳಲ್ಲಿ ಒಂದಾಗಿತ್ತು. ಆಗ ಉತ್ತರದಲ್ಲಿ ಮೊಗಲ್‌ ಸಾಮ್ರಾಜ್ಯ, ದಕ್ಷಿಣದಲ್ಲಿ ಬಹಮನಿ ಸುಲ್ತಾನರ ಸಾಮ್ರಾಜ್ಯಗಳು ಆಳುತ್ತಿದ್ದವು. ಇಸ್ಲಾಮಿಕ್‌ ಆಡಳಿತ ವ್ಯಾಪಿಸಿತ್ತು. ಆಗ 1336ರಲ್ಲಿ ಹರಿಹರ ಮತ್ತು ಬುಕ್ಕರಾಯ ಎಂಬ ಸಹೋದರರು ಹಿಂದೂ ಸಾಮ್ರಾಜ್ಯದ ಕನಸು ಕಂಡು, ಮಹರ್ಷಿ ವಿದ್ಯಾರಣ್ಯರ ಪ್ರೇರಣೆ ಹಗೂ ಮಾರ್ಗದರ್ಶನದಿಂದ ಈ ಸಾಮ್ರಾಜ್ಯವನ್ನು ಸ್ಥಾಪಿಸಿದರು.

ಈ ಸಾಮ್ರಾಜ್ಯವನ್ನು ಸುಮಾರು 300 ವರ್ಷಗಳ ಕಾಲ ನಾಲ್ಕು ಮನೆತನಗಳು ಆಳಿದವು. ಸಂಗಮ ವಂಶ ಈ ಸಾಮ್ರಾಜ್ಯದ ಸ್ಥಾಪಕರು. ಸಾಳುವ ವಂಶ ಅಲ್ಪಕಾಲ ಆಳಿತು. ತುಳುವ ವಂಶದ ಆಡಳಿತ ವಿಜಯನಗರದ ಇತಿಹಾಸದಲ್ಲಿ ಅತ್ಯಂತ ಪ್ರಸಿದ್ಧ ಕಾಲ. ಅರವೀಡು ವಂಶ ಸಾಮ್ರಾಜ್ಯದ ಕೊನೆಯ ಆಳ್ವಿಕೆಯ ಮನೆತನ.

ಕೃಷ್ಣದೇವರಾಯನ ಕಾಲ ಇದರ ಸುವರ್ಣಯುಗ. ಕೃಷ್ಣದೇವರಾಯ (1509-1529) ಈ ಸಾಮ್ರಾಜ್ಯದ ಅತ್ಯಂತ ಶ್ರೇಷ್ಠ ದೊರೆ. ಈತನ ಕಾಲದಲ್ಲಿ ಸಾಮ್ರಾಜ್ಯ ಯುದ್ಧ ಕಲೆ, ಸಾಹಿತ್ಯ ಮತ್ತು ವ್ಯಾಪಾರದಲ್ಲಿ ಉತ್ತುಂಗಕ್ಕೇರಿತು. ಈತನ ಆಸ್ಥಾನದಲ್ಲಿ 'ಅಷ್ಟದಿಗ್ಗಜರು' ಎಂಬ ಎಂಟು ಪ್ರಸಿದ್ಧ ಕವಿಗಳಿದ್ದರು.

ನಂತರ ಆಳ್ವಿಕೆ ಶಿಥಿಲವಾಗುತ್ತ ಹೋಯಿತು. ರಾಜರು ದುರ್ಬಲರಾದರು. ನಾಲ್ಕು ಮುಸ್ಲಿ ಸುಲ್ತಾನರು ಸೇರಿ ದಂಡೆತ್ತಿ ಬಂದರು. 1565ರಲ್ಲಿ ನಡೆದ 'ತಾಳಿಕೋಟೆ ಕದನ'ದಲ್ಲಿ ವಿಜಯನಗರದ ಸೇನೆ ಸೋಲನ್ನಪ್ಪಿತು. ನಂತರ ವೈಭವದ ರಾಜಧಾನಿ ವಿಜಯನಗರವು ದಾಳಿಗೆ ತುತ್ತಾಗಿ ನಾಶವಾಯಿತು. ಆದರೆ ವಿಜಯನಗರ ತನ್ನ ಐತಿಹಾಸಿಕ ಹಿನ್ನೆಲೆ ಮತ್ತು ಸುಂದರ ಪ್ರವಾಸಿ ತಾಣಗಳ ಕಾರಣದಿಂದ ಇಂದಿಗೂ ಪ್ರವಾಸಿಗರ ನೆಚ್ಚಿನ ತಾಣವಾಗಿ ಉಳಿದುಕೊಂಡಿದೆ.

ಬರಹ: ಭವಾನಿ ಭಟ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+