ಗುತ್ತಿಗೆದಾರರಿಗೆ ವಂಚನೆ ಆರೋಪ: ಬಿಜೆಪಿ ಮಾಜಿ ಸಚಿವರ ಗನ್‌ಮ್ಯಾನ್ ವಿರುದ್ಧ ಎಫ್‌ಐಆರ್
ಬೆಂಗಳೂರು, ಸೆಪ್ಟೆಂಬರ್ 2: ವಂಚನೆ ಆರೋಪದಡಿ ಮಾಜಿ ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಆಚಾರ್ ಅವರ ಗನ್‌ಮ್ಯಾನ್ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಗುತ್ತಿಗೆ ನೀಡಿಸುವುದಾಗಿ ಭರವಸೆ ನೀಡಿ ಗನ್ ಮ್ಯಾನ್ 10 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ದಾವಣಗೆರೆ ಮೂಲದ ಗುತ್ತಿಗೆದಾರರೊಬ್ಬರು ಆರೋಪಿಸಿದ್ದಾರೆ.

2021ರಲ್ಲಿ ವಿಧಾನಸೌಧದಲ್ಲಿ ಹಾಲಪ್ಪ ಆಚಾರ್ ಅವರ ಗನ್‌ಮ್ಯಾನ್ ಆಗಿದ್ದ ರಾಘವೇಂದ್ರ ಎಂಬುವರನ್ನು ಭೇಟಿಯಾಗಿದ್ದಾಗಿ ಹೆಚ್ ರಾಜು ನಾಯ್ಕ್ ಎಂಬ ಗುತ್ತಿಗೆದಾರ ಹೇಳಿಕೊಂಡಿದ್ದಾರೆ. ಮಾಯಕೊಂಡ ಕ್ಷೇತ್ರದಲ್ಲಿ 30 ಕೋಟಿ ರೂ. ಗುತ್ತಿಗೆ ನೀಡುವುದಾಗಿ ರಾಘವೇಂದ್ರ ಭರವಸೆ ನೀಡಿದ್ದರು. ಅದಕ್ಕೆ ಶೇ. 12 ಕಮಿಷನ್‌ಗೆ ಬೇಡಿಕೆ ಇಟ್ಟಿದ್ದರು ಎಂದು ದೂರುದಾರರು ಆರೋಪ ಮಾಡಿದ್ದಾರೆ.
ಗುತ್ತಿಗೆ ಪಡೆಯಲು ಗನ್‌ಮ್ಯಾನ್‌ಗೆ 10 ಲಕ್ಷ ಮುಂಗಡ ನೀಡಿರುವುದಾಗಿ ರಾಜು ನಾಯ್ಕ್ ಹೇಳಿಕೊಂಡಿದ್ದಾರೆ. 2021ರ ಅಕ್ಟೋಬರ್‌ನಲ್ಲಿ ಎರಡು ಕಂತುಗಳಲ್ಲಿ ಹಣವನ್ನು ರಾಘವೇಂದ್ರ ಅವರಿಗೆ ನೀಡಿರುವುದಾಗಿ ಹೇಳಿಕೊಂಡಿದ್ದಾರೆ.
ಹಣ ನೀಡಿದರೂ ರಾಘವೇಂದ್ರ ಅವರಿಗೆ ಗುತ್ತಿಗೆ ನೀಡಿರಲಿಲ್ಲ ಎಂದು ದೂರುದಾರರು ದೂರಿದ್ದಾರೆ. ಗುತ್ತಿಗೆ ನೀಡದಿರುವ ಬಗ್ಗೆ ಪದೇ ಪದೇ ಕೇಳಿದ ನಂತರ, ಗನ್‌ಮ್ಯಾನ್ ರೂ 4 ಲಕ್ಷವನ್ನು ಹಿಂದಿರುಗಿಸಿದ್ದನು. ಆದರೆ ಉಳಿದ ರೂ 6 ಲಕ್ಷವನ್ನು ಹಿಂದಿರುಗಿಸುತ್ತಿಲ್ಲ ಎಂದು ಗುತ್ತಿಗೆದಾರರ ರಾಜುನಾಯ್ಕ್ ರಾಘವೇಂದ್ರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಐಪಿಸಿ ಸೆಕ್ಷನ್ 420 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.












Click it and Unblock the Notifications