ಅತ್ಯಾಚಾರ ಅನಿವಾರ್ಯವಾದಾಗ ಮಲಗಿ ಆನಂದಿಸಿ ಹೇಳಿಕೆಗೆ ಕ್ಷಮೆ ಕೋರಿದ ಮಾಜಿ ಸ್ಪೀಕರ್
ಬೆಂಗಳೂರು, ಡಿಸೆಂಬರ್ 17: ಬೆಳಗಾವಿಯ ಸುವರ್ಣ ಸೌಧದ ವಿಧಾನಸಭೆ ಅಧಿವೇಶನದಲ್ಲಿ ಗುರುವಾರ ಅಸಂಸದೀಯ ಮಾತುಗಳನ್ನಾಡಿದ್ದ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಟ್ವೀಟ್ ಮೂಲಕ ಕ್ಷಮೆ ಕೇಳಿದ್ದಾರೆ.
ಅತ್ಯಾಚಾರದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ, ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿತ್ತು. ಕೆ.ಆರ್. ರಮೇಶ್ ಕುಮಾರ್ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿದ್ದಂತೆಯೆ ಕ್ಷಮೆ ಕೋರಿದ್ದಾರೆ.
"ಅತ್ಯಾಚಾರದ ಕುರಿತು ಗುರುವಾರ ವಿಧಾನಸಭೆಯಲ್ಲಿ ನಾನು ನೀಡಿದ ಅಸಡ್ಡೆ ಮತ್ತು ನಿರ್ಲಕ್ಷ್ಯದ ಹೇಳಿಕೆಗಾಗಿ ನಾನು ಎಲ್ಲರಿಗೂ ನನ್ನ ಪ್ರಾಮಾಣಿಕ ಕ್ಷಮೆಯನ್ನು ಕೋರಲು ಬಯಸುತ್ತೇನೆ. ನನ್ನ ಉದ್ದೇಶವು ಕ್ಷುಲ್ಲಕಗೊಳಿಸುವುದು ಅಥವಾ ಘೋರ ಅಪರಾಧವನ್ನು ಹಗುರಗೊಳಿಸುವುದು ಆಗಿರಲಿಲ್ಲ. ಆದರೆ ನಾನು ಇನ್ನು ಮುಂದೆ ನನ್ನ ಪದಗಳನ್ನು ಎಚ್ಚರಿಕೆಯಿಂದ ಆರಿಸುತ್ತೇನೆ," ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಏನಿದು ವಿವಾದ?
ಗುರುವಾರ ವಿಧಾನಸಭೆಯಲ್ಲಿ ರೈತರ ಸಮಸ್ಯೆಗಳ ಕುರಿತು ಚರ್ಚೆಗೆ ಶಾಸಕರು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಬಳಿ ಸಮಯ ಕೋರಿದ ಸಂದರ್ಭದಲ್ಲಿ, "ಅತ್ಯಾಚಾರ ಅನಿವಾರ್ಯವಾದಾಗ ಮಲಗಿ ಆನಂದಿಸಿ ಎಂಬ ಮಾತಿದೆ. ಅದು ನಿಖರವಾಗಿ ನೀವು ಇರುವ ಸ್ಥಾನ,'' ಎಂದು ಕೆ.ಆರ್. ರಮೇಶ್ ಕುಮಾರ್ ಹೇಳಿದ್ದರು.
ಎಲ್ಲರಿಗೂ ಸಮಯ ನೀಡಿದರೆ ಅಧಿವೇಶನ ಹೇಗೆ ನಡೆಸುವುದು ಎಂದು ಸ್ಪೀಕರ್ ಕೇಳಿದ ಸಂದರ್ಭದಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ. ರಮೇಶ್ ಕುಮಾರ್ ಹೇಳಿಕೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನಕ್ಕು ಸುಮ್ಮನಾದರು.

ನೀವು ಏನು ನಿರ್ಧರಿಸಿದರೂ ನಾನು ಹೌದು ಎಂದು ಹೇಳುತ್ತೇನೆ. ನಾನು ಆಲೋಚಿಸುತ್ತಿರುವುದು ನಾವು ಪರಿಸ್ಥಿತಿಯನ್ನು ಆನಂದಿಸೋಣ. ನಾನು ವ್ಯವಸ್ಥೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಸ್ಪೀಕರ್ ಸದಸ್ಯರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಆಕ್ಷೇಪಾರ್ಹ ಹೇಳಿಕೆ ನೀಡಿದ್ದು, ಸಭಾಧ್ಯಕ್ಷರು ಸೇರಿದಂತೆ ಇತರೆ ಸದಸ್ಯರು ನಗಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ
ಈ ಬಗ್ಗೆ ಟ್ವೀಟ್ ಮಾಡಿರುವ ಪತ್ರಕರ್ತೆ ಅನುಶಾ ರವಿ ಸೂದ್, "ಕಾಂಗ್ರೆಸ್‌ನ ಹಿರಿಯ ನಾಯಕ ರಮೇಶ್ ಕುಮಾರ್ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 'ಒಂದು ಮಾತಿದೆ, ಅತ್ಯಾಚಾರ ಅನಿವಾರ್ಯವಾದಾಗ ಮಲಗಿಕೊಂಡು ಆನಂದಿಸಬೇಕು' ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ. ಸ್ಪೀಕರ್ ಕಾಗೇರಿ ಅವರು ಸದನದಲ್ಲಿ ಅವ್ಯವಸ್ಥೆಯ ಬಗ್ಗೆ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ. ಜೋಕ್ ಎಂದು ಹೇಳಲಾಗುವ ಈ ಮಾತಿಗೆ ರಮೇಶ್ ಕುಮಾರ್ ಹಾಗೂ ಕಾಗೇರಿ ಇಬ್ಬರೂ ನಕ್ಕಿದ್ದಾರೆ,'' ಎಂದು ಟೀಕಿಸಿದ್ದಾರೆ.

ಇನ್ನು ಈ ಟ್ವೀಟ್‌ಗೆ ಹಲವಾರು ಮಂದಿ ರಿಪ್ಲೈ ಮಾಡಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಎಎಪಿ ತ್ರಿಪುರ ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದು, "ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಮನಸ್ಥಿತಿಯೇ ಹಾಗಿದೆ. ಅವರು ಮಹಿಳಾ ವಿರೋಧಿಗಳು, ಜನ ವಿರೋಧಿಗಳು," ಎಂದಿದೆ.
ಈ ಕಾಂಗ್ರೆಸ್ ನಾಯಕರ ಹೇಳಿಕೆಯನ್ನು ಪ್ರಿಯಾಂಕ ಗಾಂಧಿ, ರಾಹುಲ್ ಗಾಂಧಿ ನೋಡಲಿ. ಈತನನ್ನು ಪಕ್ಷದಿಂದ ಹೊರಕ್ಕೆ ಹಾಕಲಿ ಎಂದು ಕೆಲವರು ಆಗ್ರಹ ಮಾಡಿದ್ದಾರೆ.
ಇದು ಅತ್ಯಂತ ಕೆಟ್ಟದಾದ ವರ್ತನೆ, ನಮ್ಮ ನಾಯಕರು ಉತ್ತಮ ಆಡಳಿತ, ಸಾರ್ವಜನಿಕ ಸುರಕ್ಷತೆ ಮತ್ತು ಸಾಮಾಜಿಕ ಹೊಣೆಗಾರಿಕೆಗೆ ದಾರಿ ಮಾಡಿಕೊಡಬೇಕು. ಈ ರೀತಿಯ ನಾಯಕರಿಗೆ ಮತ ಹಾಕಿದವರಿಗೆ ನಾಚಿಕೆಯಾಗಬೇಕು. ಗೌರವಾನ್ವಿತ ಸ್ಪೀಕರ್ ಕೂಡ ವಿರೋಧವಾಗಿ ಒಂದು ಪದವನ್ನು ಉಚ್ಚರಿಸುವುದಿಲ್ಲ, ಎಂತಹ ದುಸ್ಥಿತಿ ಇದು ಎಂದು ಮಲ್ಲಿಕಾರ್ಜುನ ಗೌಡ ಎಂಬವರು ಟ್ವೀಟ್ ಮಾಡಿದ್ದಾರೆ.
ಸದನದಲ್ಲೂ ಕ್ಷಮೆ ಕೋರಿದ ರಮೇಶ್‌ಕುಮಾರ್:
ಶುಕ್ರವಾರ ವಿಧಾನಮಂಡಲ ಕಲಾಪ ಆರಂಭವಾಗುತ್ತಿದ್ದಂತೆ ಮಾತು ಆರಂಭಿಸಿದ ರಮೇಶ್‌ಕುಮಾರ್, ' ಹೆಣ್ಣು ಮಕ್ಕಳ ಬಗ್ಗೆ ಅಪಮಾನಿಸುವ ಅಥವಾ ಲಘುವಾಗಿ ಮಾತನಾಡುವ ಉದ್ದೇಶ ನನಗಿಲ್ಲ. ಈ ಕುರಿತು ವಿಷಾಧ ವ್ಯಕ್ತಪಡಿಸಲು ನನಗೆ ಯಾವುದೇ ರೀತಿಯ ಪ್ರತಿಷ್ಠೆಯೂ ಇಲ್ಲ. ಹೆಸರಾಂತ ಇಂಗ್ಲಿಷ್ ಚಿಂತಕರ ಹೇಳಿಕೆಯನ್ನು ಉಲ್ಲೇಖಿಸಿದ್ದೆ ಅಷ್ಟೇ. ಈ ವಿಚಾರವನ್ನು ಇಲ್ಲಿಗೇ ಅಂತ್ಯ ಹಾಡಿ ಕಲಾಪ ಮುಂದುವರಿಸೋಣ. ನಾನು ಕ್ಷಮೆ ಕೋರುತ್ತಿದ್ದೇನೆ. ಯಾರೂ ಕಲಾಪಕ್ಕೆ ಅಡ್ಡಿಪಡಿಸಬೇಡಿ' ಎಂದು ಮನವಿ ಮಾಡಿದರು.












Click it and Unblock the Notifications