Breaking News: ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್‌ಗೆ ನ್ಯಾಯಾಂಗ ಬಂಧನ!
ಬೆಂಗಳೂರು ಜೂನ್ 22: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಜುಲೈ 4ರವರೆಗೆ ಅಂದರೆ 14 ದಿನ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶ ನೀಡಿದೆ.
ಇಂದು ದರ್ಶನ್ ಅವರ ಕಸ್ಟಡಿ ಅವಧಿ ಅಂತ್ಯವಾಗಿದ್ದು ಅವರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ದರ್ಶನ್ ಸೇರಿದಂತೆ ಇತರ ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹೀಗಾಗಿ ಇಂದಿನಿಂದ ಜೈಲಿನಲ್ಲಿ ದರ್ಶನ್ ಮುದ್ದೆ ಮುರಿಯುವುದು ಪಕ್ಕಾ ಆಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ವಿಚಾರಣೆ ಬಹುತೇಕ ಮುಗಿದಿದೆ. ಹೀಗಾಗಿ ಪೊಲೀಸರು ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲಿಲ್ಲ. ಇದರಿಂದ ನಾಲ್ವರಿಗೆ ನ್ಯಾಯಾಂಗ ಬಂಧನ ವಿಧಿಸಿ ಪರಪ್ಪನ ಅಗ್ರಹಾರಕ್ಕೆ ರವಾನಿಸಲು ಕೋರ್ಟ್ ಆದೇಶ ನೀಡಿದೆ. ದರ್ಶನ್ ಜೊತೆಗೆ ವಿನಯ್, ಪ್ರದೋಶ್ ಮತ್ತು ಧನರಾಜು ಕಸ್ಟಡಿ ಅಂತ್ಯವಾಗಿದ್ದು, ಪೊಲೀಸರು ನಗರದ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆ ಕೋರ್ಟ್ ಅವರಿಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
ಹೀಗಾಗಿ 13 ವರ್ಷಗಳ ಬಳಿಕ ಮತ್ತೆ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ಊಟ ಮಾಡಲಿದ್ದಾರೆ. ಈ ಹಿಂದೆ ಹೆಂಡತಿ ವಿಜಯಲಕ್ಷ್ಮಿ ಮೇಲೆ ಕೈ ಮಾಡಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು. ಆಗಲೂ ದರ್ಶನ್ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು. ಇದು ಎರಡನೇ ಬಾರಿಗೆ ದರ್ಶನ್ ಜೈಲು ವಾಸ ಅನುಭವಿಸಲಿದ್ದಾರೆ.
ಈಗಾಗಲೇ ಪ್ರಕರಣದ ಎ1 ಆರೋಪಿ, ದರ್ಶನ್ ಸ್ನೇಹಿತೆ ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.
ಕೊಲೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ನಟಿ ಪವಿತ್ರಾ ಗೌಡ ಅವರನ್ನು ಆರೋಪಿ ನಂಭರ್ ಒನ್ ಎಂದು ಹೆಸರಿಸಲಾಗಿದೆ. ನಟ ದರ್ಶನ್ ತೂಗುದೀಪ್ ಅವರನ್ನು ಕೊಲೆಯನ್ನು ಕಾರ್ಯಗತಗೊಳಿಸಿದ ಆರೋಪದ ಮೇರೆಗೆ ಆರೋಪಿ ನಂಬರ್ ಎರಡು ಎಂದು ಹೆಸರಿಸಲಾಗಿದೆ.
ಪೊಲೀಸ್ ರಿಮಾಂಡ್ ನೋಟ್‌ನಲ್ಲಿರುವ ಮಾಹಿತಿ ಪ್ರಕಾರ ರೇಣುಕಾಸ್ವಾಮಿ ಕೊಲೆಯಾದ ಸ್ಥಲದಲ್ಲಿ ಪವಿತ್ರಾ ಗೌಡ ಸ್ವತ: ಇದ್ದರು ಎಂದು ಹೇಳಲಾಗಿದೆ. ಪವಿತ್ರಾ ಅವರ ಮನೆಯಿಂದ ದರ್ಶನ್‌ಗೆ ಸಂಬಂಧಿಸಿದ ಚಪ್ಪಲಿ, ಬಟ್ಟೆ ಸಾಮಾಗ್ರಿಗಳು ಮತ್ತು ಇತರ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡ ಸೇರಿ ಹದಿನೈದು ಮಂದಿಯನ್ನು ಬಂಧಿಸಲಾಗಿದೆ. ತನಿಖೆಯ ಭಾಗವಾಗಿ ರೇಣುಸ್ವಾಮಿ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹಂಚಿಕೊಂಡ ಮತ್ತು ಡಿಲೀಟ್ ಮಾಡಲಾದ ಸಂದೇಶಗಳಿಗೆ ಸಂಬಂಧಿಸಿದ ಡೇಟಾವನ್ನು ಸಂಪರ್ಕಿಸಲು ಯೋಚಿಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.












Click it and Unblock the Notifications