ಬೆಂಗಳೂರು: ಅಪಘಾತ ಸಂತ್ರಸ್ತರು ಸಾವನ್ನಪ್ಪುವ ಪ್ರಮಾಣ ಏರಿಕೆ
ಬೆಂಗಳೂರು, ಏಪ್ರಿಲ್ 29: ಬೆಂಗಳೂರು ನಗರದ ಸಂಚಾರ ದಟ್ಟಣೆ ಬಗ್ಗೆ ಹೊಸದಾಗಿ ಹೇಳುವ ಅಗತ್ಯವಿಲ್ಲ. ಆದರೆ ಇದು ಅಪಘಾತ ಸಂತ್ರಸ್ತರ ಜೀವಕ್ಕೆ ತೊಂದರೆ ಉಂಟು ಮಾಡುತ್ತಿದೆ. ಅಪಘಾತದಲ್ಲಿ ಗಾಯಗೊಂಡ ಸಂತ್ರಸ್ತರು ಆಸ್ಪತ್ರೆಗೆ ಸಾಗುವ ಮಾರ್ಗದಲ್ಲಿಯೇ ಸಾವನ್ನಪ್ಪುವ ಪ್ರಮಾಣ ನಗರದಲ್ಲಿ ಹೆಚ್ಚಾಗುತ್ತಿದೆ.
ಕಳೆದ ಮೂರು ವರ್ಷಗಳಲ್ಲಿ ನಗರದಲ್ಲಿ ಅಪಘಾತ ಸಂತ್ರಸ್ತರು ಆಸ್ಪತ್ರೆಗೆ ಹೋಗುವ ಮಾರ್ಗದಲ್ಲಿ ಸಾವನ್ನಪ್ಪುವ ಪ್ರಮಾಣ ಹೆಚ್ಚಾಗಿದೆ. 2021ರಲ್ಲಿ 175 ಸಂತ್ರಸ್ತರು ಸಾವನ್ನಪ್ಪಿದ್ದರು. 2023ರಲ್ಲಿ ಇದು ಶೇ 67 ಅಂದರೆ 292ಕ್ಕೆ ಏರಿಕೆಯಾಗಿದೆ.

ಬೆಂಗಳೂರು ಸಂಚಾರಿ ಪೊಲೀಸರ ಅಂಕಿ ಸಂಖ್ಯೆಗಳೇ ಈ ಕುರಿತು ಮಾಹಿತಿ ನೀಡಿವೆ. 2023ರಲ್ಲಿ ಅಪಘಾತವಾದ ಒಂದು ಗಂಟೆಯ ಗೋಲ್ಡನ್ ಅವರ್‌ನಲ್ಲಿ ಸಾವನ್ನಪ್ಪಿದ್ದಾರೆ. ನಗರದ ಸಂಚಾರ ದಟ್ಟಣೆಯಲ್ಲಿ ಅಂಬ್ಯುಲೆನ್ಸ್‌ಗಳು ಸಿಲುಕುತ್ತಿವೆ. ಇದು ಸಂತ್ರಸ್ತರ ಪ್ರಾಣವನ್ನು ತೆಗೆಯುತ್ತಿವೆ.
ಎಲ್ಲಿ ಅಪಘಾತಗಳು ಹೆಚ್ಚು: ಸಂಚಾರಿ ಪೊಲೀಸರ ಮಾಹಿತಿ ಪ್ರಕಾರ ನಗರದ ಹೊರ ವರ್ತುಲ ರಸ್ತೆಯಲ್ಲಿ ಅತಿಯಾದ ವೇಗದಿಂದಾಗಿ ಅಪಘಾತಗಳು ಹೆಚ್ಚು. 9 ರಿಂದ 6 ಗಂಟೆಯ ತನಕದ ಅವಧಿಯಲ್ಲಿ ಅಂಬ್ಯುಲೆನ್ಸ್ ಸಂಚಾರಕ್ಕೆ ಹೆಚ್ಚಿನ ತೊಂದರೆಯಾಗುತ್ತಿದೆ.
ರಸ್ತೆಯಲ್ಲಿ ವಾಹನ ದಟ್ಟಣೆ ಕಾರಣದಿಂದಾಗಿ ತುರ್ತಾಗಿ ಚಿಕಿತ್ಸೆ ಅಗತ್ಯವಿರುವ ಸಂತ್ರಸ್ತರನ್ನು ಆಸ್ಪತ್ರೆಗಳ ತುರ್ತು ನಿಗಾ ಘಟಕಕ್ಕೆ ಕರೆತರುವುದು ತಡವಾಗುತ್ತಿದೆ ಎಂದು ವಿಕ್ಟೋರಿಯಾ ಆಸ್ಪತ್ರೆ ತುರ್ತು ನಿಗಾ ಘಟಕದ ಸಿಬ್ಬಂದಿ ಹೇಳುತ್ತಿದ್ದಾರೆ.
ಅಲ್ಲದೇ ಕೆಲವು ಖಾಸಗಿ ಅಂಬ್ಯುಲೆನ್ಸ್‌ಗಳಲ್ಲಿ ಸಿಬ್ಬಂದಿಗಳಿಗೆ ತುರ್ತಾಗಿ ಚಿಕಿತ್ಸೆ ನೀಡಲು ಅಗತ್ಯವಿರುವ ಸೌಲಭ್ಯ ಇರುವುದಿಲ್ಲ. ಅವರು ಹತ್ತಿರದ ಆಸ್ಪತ್ರೆಗೆ ಮೊದಲು ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗ ಕರೆದುಕೊಂಡು ಹೋಗದಿರುವುದು ಸಹ ಸಾವಿಗೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗಿದೆ.
108 ಮಾದರಿಯ ಅಗತ್ಯ ಜೀವ ರಕ್ಷಕ ಸಾಧನಗಳು ಇರುವ 745 ಅಂಬ್ಯುಲೆನ್ಸ್‌ಗಳು ರಾಜ್ಯಕ್ಕೆ ಬೇಕಾಗಿವೆ. ಸದ್ಯ 715 ಅಂಬ್ಯುಲೆನ್ಸ್ ಕಾರ್ಯ ನಿರ್ವಹಣೆ ಮಾಡುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಸಂಚಾರಿ ಪೊಲೀಸರ ಎಎಸ್‌ಟಿಆರ್‌ಎಂ ವ್ಯವಸ್ಥೆ ಮತ್ತು ಅಪ್ಲಿಕೇಶನ್ ಅಂಬ್ಯುಲೆನ್ಸ್ ನಗರದಲ್ಲಿ ಸಂಚಾರ ದಟ್ಟಣೆಯಲ್ಲಿ ಸಿಲುಕಿದರೆ ಬೇಗ ತೆರಳಲು ಸಹಕಾರಿಯಾಗಿದೆ. ಸಂಚಾರಿ ಸಿಗ್ನಲ್‌ಗಳಿಗೆ ಅಂಬ್ಯುಲೆನ್ಸ್‌ಗಳ ಕುರಿತು ಮಾಹಿತಿ ತಿಳಿದು ಅವುಗಳನ್ನು ದಾಟಿ ಹೋಗಲು ಅನುಕೂಲ ಮಾಡಿಕೊಡಲಾಗುತ್ತದೆ.
ಸಂಚಾರಿ ಪೊಲೀಸರ ಬಳಿ ಇರುವ ಯಂತ್ರದ ಸಹಾಯದಿಂದ ಅಂಬ್ಯುಲೆನ್ಸ್ 200 ಮೀಟರ್ ದೂರದಲ್ಲಿ ಇದ್ದರೆ ಮಾಹಿತಿ ತಿಳಿಯಲಿದೆ. ಇದರಿಂದ ಸಂಚಾರ ದಟ್ಟಣೆ ಸರಿಪಡಿಸಲು, ಸಿಗ್ನಲ್ ತೆರವುಗೊಳಿಸಲು ಅನುಕೂಲವಾಗಲಿದೆ. ಇಂತಹ ವ್ಯವಸ್ಥೆ ಜಾರಿಗೊಳಿಸಲು ತಯಾರಿ ನಡೆಯುತ್ತಿದೆ.
ಬೆಂಗಳೂರಿನಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. 2023ರಲ್ಲಿ 870 ಮಾರಣಾಂತಿಕ ಅಪಘಾತಗಳು ಸಂಭವಿಸಿವೆ. 2013ರಲ್ಲಿ ನಡೆದ 733 ಅಪಘಾತಗಳನ್ನು ಬಿಟ್ಟರೆ ಕಳೆದ ವರ್ಷವೇ ಅತಿ ಹೆಚ್ಚು ಅಪಘಾತ ನಡೆದಿದೆ.












Click it and Unblock the Notifications