ಬಿಬಿಎಂಪಿಯಲ್ಲಿ ನಕಲಿ ಬಿಲ್, ಜಾಹೀರಾತು ದಂಧೆಯಿಂದ 230 ಕೋಟಿ ನಷ್ಟ!
ಬೆಂಗಳೂರು, ಫೆ. 28: ಬಿಬಿಎಂಪಿ ಕಚೇರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ನಡೆಸಿದ ದಾಳಿಯಲ್ಲಿ ಭಾರೀ ಮೊತ್ತದ ಅಕ್ರಮಗಳು ಹೊರ ಬಿದ್ದಿದೆ. ಸಾಕಷ್ಟು ದಾಖಲೆಗಳ ಜಪ್ತಿ ನಡುವೆ ಎಸಿಬಿ ಅಧಿಕಾರಿಗಳು ಕೂಡ ದಾಳಿ ಮುಂದುವರೆಸಿದ್ದು, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಕಳೆದ ಶುಕ್ರವಾರ ಎಸಿಬಿಯ 200 ಅಧಿಕಾರಿಗಳು ಬಿಬಿಎಂಪಿಯ 27 ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ವಿವಿಧ ವಿಭಾಗಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ನೂರಾರು ಕೋಟಿಯ ಅಕ್ರಮಗಳು ಬೆಳಕಿಗೆ ಬಂದಿವೆ.
ಜಾಹೀರಾತು ವಿಭಾಗದಲ್ಲಿ 230 ಕೋಟಿ ಅಕ್ರಮ: ಬೆಂಗಳೂರು ಮಹಾ ನಗರ ಪಾಲಿಕೆ ಪಿಪಿಪಿ ಮಾದರಿಯಲ್ಲಿ ಬಸ್ ತಂಗುದಾಣ ಮತ್ತು ಸ್ಕೈವಾಕ್ ನಿರ್ಮಾಣ ಮಾಡುವ ಏಜೆನ್ಸಿಗಳು ಜಾಹೀರಾತು ಪ್ರದರ್ಶನ ಸಂಬಂಧ ಹಣವನ್ನು ಪಾವತಿಸಿಲ್ಲ. ಬಿಬಿಎಂಪಿ ಅಧಿಕಾರಿಗಳು ಖಾಸಗಿ ಏಜೆನ್ಸಿಗಳ ಜತೆ ಶಾಮೀಲಾಗಿ ಜಾಹೀರಾತು ಏಜೆನ್ಸಿಗಳಿಗೆ ಲಾಭ ಮಾಡಿಕೊಟ್ಟಿದ್ದು, ಬಿಬಿಎಂಪಿ ಜಾಹೀರಾತು ವಿಭಾಗಕ್ಕೆ ಸಂದಾಯವಾಗಬೇಕಿದ್ದ 230 ಕೋಟಿ ರೂ. ಹಣವನ್ನು ಬಾಕಿ ಇಟ್ಟುಕೊಳ್ಳಲಾಗಿದೆ. ಒಂದು ವರ್ಷದಿಂದ ಟೆಂಡರ್ ಕರೆಯದೇ ವಿಳಂಬ ನೀತಿ ಅನುಸರಿಸಿ ಜಾಹೀರಾತು ಕಂಪನಿಗಳಿಗೆ ಕೋಟಿ ಕೋಟಿ ಲಾಭ ಮಾಡಿಕೊಟ್ಟು ಬಿಬಿಎಂಪಿ ಅಧಿಕಾರಿಗಳು ಅಕ್ರಮ ಎಸಗಿರುವುದು ಕಂಡು ಬಂದಿದೆ.

ಟಿಡಿಅರ್ ವಿಭಾಗದಲ್ಲಿ ಅಕ್ರಮ: ಆಸ್ತಿಯ ವರ್ಗಾವಣೆ ಹಕ್ಕಿಗೆ ಸಂಬಂಧಿಸಿದಂತೆ ಬಿಬಿಎಂಪಿಯ ಟಿಡಿಆರ್ ವಿಭಾಗದಲ್ಲಿ ಅಧಿಕಾರಿಗಳು ಭ್ರಷ್ಟಾಚಾರ ಎಸಗಿರುವುದು ಕಂಡು ಬಂದಿದೆ. ಮಧ್ಯವರ್ತಿಗಳು ಮತ್ತು ಭೂ ಮಾಲೀಕರು ಒಗ್ಗೂಡಿ ಆದೂರು, ರಾಂಪುರ, ಸೀಗೇಹಳ್ಳಿ, ವೈಟ್ ಫೀಲ್ಡ್ ಮತ್ತಿತರ ಕಡೆ ಟಿಡಿಅರ್ ಕೊಟ್ಟಿರುವ ಕಡತಗಳಲ್ಲಿ ಅಕ್ರಮ ಆಗಿರುವುದು ಕಂಡು ಬಂದಿದ್ದು, ಇದಕ್ಕೆ ಸಂಬಂಧಿಸಿದ ಕಡತಗಳನ್ನು ಎಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ನಗರ ಯೋಜನೆ ವಿಭಾಗದಲ್ಲಿ 21 ಕಟ್ಟಡ ವಶ: ಬಿಬಿಎಂಪಿ ನಗರ ಯೋಜನೆ ವಿಭಾಗದ ಅಧಿಕಾರಿಗಳು ಮತ್ತು ಖಾಸಗಿ ಬಿಲ್ಡರ್‌ಗಳು ಶಾಮೀಲಾಗಿ ಭ್ರಷ್ಟಾಚಾರ ಎಸಗಿರುವುದು ಕಂಡು ಬಂದಿದೆ. ನಿಯಮ ಬಾಹಿರವಾಗಿ ಕಟ್ಟಡ ನಿರ್ಮಾಣ ಮಾಡಲು ಬಿಬಿಎಂಪಿ ಅಧಿಕಾರಿಗಳು ಅನುವು ಮಾಡಿಕೊಟ್ಟು ಭ್ರಷ್ಟಾಚಾರ ಎಸಗಿದ್ದಾರೆ. ಅಲ್ಲದೇ ಅಕ್ರಮವಾಗಿ ನಿರ್ಮಾಣ ಮಾಡಿರುವ ಕಟ್ಟಡ ಮಾಲೀಕರಿಂದ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಿರುವುದು ಕಂಡು ಬಂದಿದ್ದು, ಈ ಕುರಿತು ದಾಖಲೆಗಳನ್ನು ಎಸಿಬಿ ಅಧಿಕಾರಿಗಳು ಜಪ್ತಿ ಮಾಡಿ ತನಿಖೆ ಕೈಗೆತ್ತಿಕೊಂಡಿದ್ದಾರೆ.

ಬಿಬಿಎಂಪಿ ಇಂಜಿನಿಯರಿಂಗ್ ವಿಭಾಗ: ಬಿಬಿಎಂಪಿ ಇಂಜಿನಿಯರಿಂಗ್ ವಿಭಾಗದಲ್ಲಿ ನಕಲಿ ಬಿಲ್ ಮಾಡಿ ಕೋಟ್ಯಂತರ ರೂಪಾಯಿ ಗುಳುಂ ಮಾಡಿರುವ ಸಂಬಂಧ ಎಸಿಬಿ ಅಧಿಕಾರಿಗಳು 200 ಕಡತಗಳನ್ನು ಜಪ್ತಿ ಮಾಡಿದ್ದಾರೆ. ಒಂದು ಕಾಮಗಾರಿಗೆ ಎರಡು ಬಿಲ್ ಮಾಡಿ ಬಿಬಿಎಂಪಿಗೆ ನಷ್ಟವುಂಟು ಮಾಡಿರುವುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಈ ಸಂಬಂಧ ಬೆಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳಿಗೆ ಸಂಬಂಧಸಿದಿಂತೆ ಕಡತಗಳನ್ನು ಜಪ್ತಿ ಮಾಡಿಕೊಂಡಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ಒಂದೇ ಕಾಮಗಾರಿಗೆ ಎರಡು ಬಿಲ್ ಮಾಡಿ ಗುತ್ತಿಗೆದಾರರಿಗೆ ಲಾಭ ಮಾಡಿಕೊಟ್ಟು ಭ್ರಷ್ಟಾಚಾರ ಎಸಗಿರುವ ಅಧಿಕಾರಿಗಳ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುವುದು ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಕಡಿಮೆ ತೆರಿಗೆ ಕಟ್ಟಿಸಿಕೊಂಡು ದೋಖಾ: ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ನಿಗದಿತ ಕಂದಾಯವನ್ನು ವಸೂಲಿ ಮಾಡದೇ ಕಡಿಮೆ ಕಂದಾಯ ವಸೂಲಿ ಮಾಡಿ ಬಿಬಿಎಂಪಿಗೆ ನಷ್ಟವುಂಟು ಮಾಡಿದ್ದಾರೆ. ವಾಣಿಜ್ಯ ಕಟ್ಟಡ ಮತ್ತು ಅಪಾರ್ಟ್ ಮೆಂಟ್ ಗಳಿಗೆ ಸರಿಯಾದ ಕಂದಾಯ ನಿಗದಿ ಪಡಿಸದೇ ಕಡಿಮೆ ವಿಸ್ತೀರ್ಣ ತೋರಿಸಿ ಕಂದಾಯ ಕಟ್ಟಿಸಿಕೊಳ್ಳುವುದರಲ್ಲಿ ದೋಖಾ ಮಾಡಿದ್ದಾರೆ. ಈ ಮೂಲಕ ಬಿಬಿಎಂಪಿ ಅಧಿಕಾರಿಗಳು ಅಕ್ರಮ ಲಾಭ ಮಾಡಿಕೊಂಡಿದ್ದಾರೆ. ಇದರ ಜತೆಗೆ ಸರ್ಕಾರಿ ಜಮೀನು, ಖರಾಬು ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡಿಕೊಟ್ಟು ಅಕ್ರಮ ಎಸಗಿದ್ದಾರೆ. ಎಸಿಬಿ ದಾಳಿಯಲ್ಲಿ ಒಂದು ಖಾಸಗಿ ಆಸ್ಪತ್ರೆ ಮತ್ತು ಎರಡು ಮಾಲ್‌ಗಳಿಂದ ಸಂಗ್ರಹಿಸಬೇಕಾದ ತೆರಿಗೆ ವಸೂಲಿ ಮಾಡದೇ ಸರ್ಕಾರಕ್ಕೆ ಕೋಟ್ಯಂತರ ನಷ್ಟ ವುಂಟು ಮಾಡಿದ್ದಾರೆ. ಈ ಸಂಬಂಧ ಈವರೆಗೂ 45 ಕಡತ ವಶಕ್ಕೆ ಪಡೆದಿದ್ದು, ಮತ್ತಷ್ಟು ಕಡತಗಳನ್ನು ವಶಕ್ಕೆ ಪಡೆಲಿದ್ದಾರೆ. ಅಂತೂ ಎಸಿಬಿಯ ಬಹುದೊಡ್ಡ ದಾಳಿಗೆ ಬಿಬಿಎಂಪಿಯ ಭ್ರಷ್ಟರು ನಡುಗಿದ್ದು, ಇದೀಗ 27 ತನಿಖಾ ತಂಡಗಳು ಇನ್ನೂ ದಾಖಲೆಗಳ ಸಂಗ್ರಹ ಕಾರ್ಯ ಮುಂದುವರೆಸಿದೆ. ಸೋಮವಾರ ಸಹ ಬಿಬಿಎಂಪಿ ಕಚೇರಿಗಳ ಮೇಲಿನ ದಾಳಿ ಮುಂದುವರೆಸಿ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ.












Click it and Unblock the Notifications