ಪ್ರಶಾಂತ್ ಮಾಡಾಳ್ ಲೋಕಾಯುಕ್ತ ಬಲೆಗೆ: ಮೋದಿ, ಅಮಿತ್ ಶಾ ಚುನಾವಣಾ ಪ್ರಚಾರ ಬಗ್ಗೆ ಎಎಪಿ ಕಿಡಿ
ಬಿಜೆಪಿ ಶಾಸಕರ ಪುತ್ರ ಕಮಿಷನ್ ಪಡೆಯುವಾಗ ಸಾಕ್ಷಿ ಸಮೇತ ಸಿಕ್ಕಿ ಬಿದ್ದಿದ್ದಾರೆ. ಹೀಗಿದ್ದರೂ ಕರ್ನಾಟಕಕ್ಕೆ ಭೇಟಿ ನೀಡಿ ಯಾವ ಮುಖ ಹೊತ್ತು ಪ್ರಧಾನಮಂತ್ರಿಗಳು, ಗೃಹ ಸಚಿವರು ಮಾತನಾಡುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಪ್ರಶ್ನಿಸಿದೆ.
ಬೆಂಗಳೂರು, ಮಾರ್ಚ್ 03: ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪತ್ರ ಕಮಿಷನ್ ಪಡೆಯುವಾಗ ಕೋಟ್ಯಂತರ ರೂಪಾಯಿ ಹಣದೊಂದಿಗೆ ಲೋಕಾಯುಕ್ತ ಅಧಿಕಾರಿಗಳ ಬಲಗೆ ಸಿಕ್ಕಿಬಿದ್ದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾರವರು ಯಾವ ಮುಖ ಹೊತ್ತು ರಾಜ್ಯದಲ್ಲಿ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ ಕಾಲೆಳೆದಿದೆ.
ಈ ಸಂಬಂಧ ಶುಕ್ರವಾರ ಆಮ್ ಆದ್ಮಿ ಪಾರ್ಟಿ ರಾಜ್ಯ ಸಂವಹನಾ ಉಸ್ತುವಾರಿ ಬ್ರಿಜೇಶ್ ಕಾಳಪ್ಪ ಸುದ್ದಿಗಾರರ ಬಳಿ ಮಾತನಾಡಿ, ಅಭಿವೃದ್ಧಿ ಕಾರ್ಯಗಳ ನೆಪದಲ್ಲಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಪದೇಪದೇ ಕರ್ನಾಟಕಕ್ಕೆ ಬಂದು ಚುನಾವಣಾ ಭಾಷಣ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತವೆಂಬಂತೆ ಮಾತನಾಡುತ್ತಿದ್ದಾರೆ.

ಆದರೆ ಸದ್ಯದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ, ಶಿವಮೊಗ್ಗ ಶಾಸಕ ಕೆ.ಎಸ್.ಈಶ್ವರಪ್ಪ, ಮಹದೇವಪುರ ಶಾಸಕ ಅರವಿಂದ್ ಲಿಂಬಾವಳಿ ಮತ್ತಿತರರ ವಿರುದ್ಧ ಸಾಕ್ಷಿ ಸಹಿತ ಕಮಿಷನ್ ಆರೋಪ ಕೇಳಿಬಂದಿವೆ. ಹೀಗಿದ್ದರೂ ಈ ಬಗ್ಗೆ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಮಾತನಾಡಿಲ್ಲ ಯಾಕೇ? ಎಂದು ಅವರು ಪ್ರಶ್ನಿಸಿದರು.
ಕೇಂದ್ರ ರಾಜ್ಯದಲ್ಲಿ ಬಿಜೆಪಿಯೇ ಆಡಳಿತದಲ್ಲಿದೆ. ಪಕ್ಷದ ಮತ್ತೊಬ್ಬ ಶಾಸಕ ಮಾಡಾಳ್ ವಿರೂಪಾಕ್ಷಪ್ಪರವರ ಮಗನು ಕಮಿಷನ್ ಪಡೆಯುತ್ತಿದ್ದಾಗ ಸಾಕ್ಷಿಸಮೇತ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಬರೋಬ್ಬರಿ ಎಂಟು ಕೋಟಿ ರೂಪಾಯಿ ದಾಖಲೆಯಿಲ್ಲದ ನಗದು ಪತ್ತೆಯಾಗಿದೆ. ನರೇಂದ್ರ ಮೋದಿ ಹಾಗೂ ಅಮಿತ್ ಶಾರವರಿಗೆ ತಾಕತ್ತಿದ್ದರೆ ಈ ಬಗ್ಗೆ ಪ್ರತಿಕ್ರಿಯಿಸಲಿ ಎಂದು ಅವರು ಸವಾಲು ಹಾಕಿದರು.

ಬಿಜೆಪಿ ಶಾಸಕರು ಎಂತಹದ್ದೇ ಅಕ್ರಮ ಮಾಡಿ ಸಿಕ್ಕಿಬಿದ್ದರೂ ಐಟಿ, ಇಡಿ, ಸಿಬಿಐ ಸಂಸ್ಥೆಗಳು ಅವರ ಮೇಲೆ ದಾಳಿ ಮಾಡಿಲ್ಲ. ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದ ಜನಾರ್ದನ ರೆಡ್ಡಿ ಕೋವಿಡ್ ಸಂದರ್ಭದಲ್ಲಿ ತಮ್ಮ ಮಗಳ ಮದುವೆಗೆ ಬರೋಬ್ಬರಿ 500 ಕೋಟಿ ರೂಪಾಯಿ ಖರ್ಚು ಮಾಡಿದರೂ ಈ ಸಂಸ್ಥೆಗಳು ವಿಚಾರಣೆ ನಡೆಸಲಿಲ್ಲ.
ಅದೇ ಆಮ್ ಆದ್ಮಿ ಪಾರ್ಟಿಯ ದೆಹಲಿ ಸಚಿವರಾದ ಸತ್ಯೇಂದ್ರ ಜೈನ್, ಮನೀಷ್ ಸಿಸೋದಿಯಾ ವಿರುದ್ಧ ಸೂಕ್ತ ಸಾಕ್ಷಿಯಿಲ್ಲದಿದ್ದರೂ, ಅವರ ಮನೆಗಳಲ್ಲಿ ನಗದು ಹಾಗೂ ಅಕ್ರಮದ ದಾಖಲೆಗಳು ಪತ್ತೆಯಾಗದಿದ್ದರೂ ಬಂಧಿಸಿ ಕಿರುಕುಳ ನೀಡಲಾಗುತ್ತಿದೆ. ದೇಶಾದ್ಯಂತ ಆಮ್ ಆದ್ಮಿ ಪಾರ್ಟಿಗೆ ಸಿಗುತ್ತಿರುವ ಜನಬೆಂಬಲಕ್ಕೆ ಬಿಜೆಪಿಯ ಕೇಂದ್ರ ನಾಯಕರು ಎಷ್ಟು ಹೆದರಿದ್ದಾರೆ ಎಂಬುದನ್ನು ಇದರಿಂದ ತಿಳಿಯಬಹುದು ಎಂದು ಬ್ರಿಜೇಶ್ ಕಾಳಪ್ಪ ಆಕ್ರೋಶ ಹೊರ ಹಾಕಿದರು.












Click it and Unblock the Notifications