Cauvery issue: ಎಎಪಿ ನಾಯಕರಿಂದ ಕೇಂದ್ರ ಜಲಶಕ್ತಿ ಸಚಿವರ ಭೇಟಿ: ಕಾವೇರಿ ವಿವಾದ ಬಗೆಹರಿಸಲು ಒತ್ತಾಯ
ಬೆಂಗಳೂರು, ಅಕ್ಟೋಬರ್ 10: ಕರ್ನಾಟಕದಲ್ಲಿ ಮಳೆ ನೀರು ಕೊರತೆಯಿಂದಾಗಿ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಬೆಂಗಳೂರಿನ ಜನರಿಗೆ ಕುಡಿಯಲು ನೀರಿಲ್ಲದೇ ಪರದಾಡುತ್ತಿದ್ದಾರೆ. ಈ ವೇಳೆ ತಮಿಳುನಾಡಿಗೆ ನೀರು ಹರಿಸುವ ಅವೈಜ್ಞಾನಿಕ ಆದೇಶ ಹಿಂಪಡೆಯುವಂತೆ ಕೇಂದ್ರ ನಾಯಕರಿಗೆ ಮತ್ತು ಪ್ರಾಧಿಕಾರಕ್ಕೆ ಆಮ್ ಆದ್ಮಿ ಪಕ್ಷದ ನಾಯಕರು ಮತ್ತು ರೈತರ ಸಂಘದ ಮುಖಂಡರು ಮನವಿ ಸಲ್ಲಿಸಿದ್ದಾರೆ.
ರೈತ ಮುಖಂಡ ಕುರುಬೂರು ಶಾಂತಕುಮಾರ್, ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಮೋಹನ್ ದಾಸರಿ, ಕನ್ನಡ ಚಳುವಳಿ ನಾಯಕರು ಸಂಘಟನೆಯ ಅಧ್ಯಕ್ಷರಾದ ಗುರುದೇವ್ ನಾರಾಯಣಕುಮಾರ್, ಕಾರ್ಯದರ್ಶಿ ವಿಜಯ್ ಸಿಂಗ್, ಎಎಪಿ ಮುಖಂಡರಾದ ಜಗದೀಶ್ ಬಾಬು ಒಳಗೊಂಡ ನಿಯೋಗವು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಸೋಮವಾರ ದೆಹಲಿಯ ಕಚೇರಿಯಲ್ಲಿ ಭೇಟಿ ಮಾಡಿದರು.

ರಾಜ್ಯದಲ್ಲಿ ಬರಪರಿಸ್ಥಿತಿಯಿಂದ ಕಾವೇರಿ ಜಲಾನಯನ ಪ್ರದೇಶದ ಕರ್ನಾಟಕ ರೈತರು ಸಂಕಷ್ಟದಲ್ಲಿದ್ದಾರೆ. ಬೆಂಗಳೂರು ನಗರದ 1.3 ಕೋಟಿ ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೂರಿದ್ದು ತಮಿಳನಾಡಿಗೆ ನೀರು ಹರಿಸುವಂತೆ ನೀಡಲಾಗಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅವೈಜ್ಞಾನಿಕ ಆದೇಶವನ್ನು ಹಿಂತೆಗೆದುಕೊಳ್ಳಬೇಕು.
ಕರ್ನಾಟಕದಲ್ಲಿ ವಾಸ್ತವಾಂಶ ಅರಿಯಬೇಕು
ಕಾವೇರಿ ನೀರು ಹಂಚಿಕೆ ಸಮಸ್ಯೆಗೆ ಸಂಬಂಧಿಸಿದಂತೆ ತಾವು ಮಧ್ಯ ಪ್ರವೇಶಿಸಿ ಉಭಯ ರಾಜ್ಯಗಳ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ವತಿಯಿಂದ ಆಮ್ ಆದ್ಮಿ ಪಕ್ಷದ ಮುಖಂಡರು ಹಾಗೂ ರೈತ ಮುಖಂಡರು ಕೇಂದ್ರ ಜಲಶಕ್ತಿ ಸಚಿವರಿಗೆ ಹಕ್ಕೊತ್ತಾಯಗಳನ್ನು ಮಾಡಿದ್ದಾರೆ. ಜೊತೆಗೆ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಕೆ.ಹಲ್ದಾರ್ ಅವರಿಗೂ ಕರ್ನಾಟಕದಲ್ಲಿನ ವಾಸ್ತವ ಸ್ಥಿತಿ ತಿಳಿಸಿದ್ದಾರೆ.
ರಾಜಧಾನಿ ಬೆಂಗಳೂರಿಗೆ ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮೇಕೆದಾಟು ಯೋಜನೆಯನ್ನು ಅನುಷ್ಠಾನಗೊಳಿಸಲು ಅನುಮತಿ ನೀಡಬೇಕು. ತನ್ನ ಪಾಲಿನ ನೀರನ್ನು ಕೇಳುವ ತಮಿಳುನಾಡಿಗೆ ಕರ್ನಾಟಕದ ಅರಣ್ಯಗಳ ರಕ್ಷಣೆ ಮತ್ತು ಸಂರಕ್ಷಣೆಗೆ ವರ್ಷಕ್ಕೆ ಕನಿಷ್ಠ 2000 ಕೋಟಿ ರೂ. ನೀಡುವಂತೆ ನಿರ್ದೇಶನ ನೀಡಬೇಕು ಎಂದು ಕೇಂದ್ರ ಸಚಿವರನ್ನು ನಿಯೋಗದ ಸದಸ್ಯರೆಲ್ಲರು ಒತ್ತಾಯಿಸಿದರು ಎಂದು ಆಮ್ ಆದ್ಮಿ ಪಕ್ಷವು ಪ್ರಟಕಣೆಯಲ್ಲಿ ತಿಳಿಸಿದೆ.
ಕುರುಬೂರು ಶಾಂತಕುಮಾರ್ ಅವರ ನೇತೃತ್ವದ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಆಯೋಗದಿಂದ ಕೇಂದ್ರದ ಜಲಶಕ್ತಿ ಸಚಿವರಾದ ಶ್ರೀ @gssjodhpur ಅವರನ್ನು ಭೇಟಿ ಮಾಡಿ ಕಾವೇರಿ ನೀರು ಹಂಚಿಕೆ, ಬೆಂಗಳೂರಿನ ನೀರಿನ ಸಮಸ್ಯೆ, ಮೇಕೆದಾಟು ಯೋಜನೆ ಕುರಿತು ಚರ್ಚೆ ನಡೆಸಿದೆ
— AAP Karnataka (@AAPKarnataka) October 9, 2023
ಎಎಪಿ ರಾಜ್ಯ ಉಪಾಧ್ಯಕ್ಷ @MohanDasari_ ಮತ್ತು ಮುಖಂಡ ಜಗದೀಶ್ ಬಾಬು, ಕನ್ನಡ ಚಳುವಳಿ… pic.twitter.com/sCGid8AXOv
ಕೇಂದ್ರ ಸಚಿವರ ಮುಂದಿಟ್ಟ 5 ಹಕ್ಕೊತ್ತಾಯಗಳು
1. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕಾವೇರಿ ನೀರು ನಿಯಂತ್ರಣ ಸಮಿತಿಯು ತಕ್ಷಣವೇ ತಮ್ಮ ಆದೇಶಗಳನ್ನು ಕಾಯ್ದಿರಿಸಬೇಕು. ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಬೇಕು ಮತ್ತು ಕಾಗದದ ಮೇಲೆ ಒದಗಿಸಿದ ಅಂಕಿಅಂಶಗಳನ್ನು ಅವಲಂಬಿಸದೆ ನೇರ ವಾಸ್ತವತೆಯನ್ನು ಪರಿಗಣಿಸಬೇಕು.

2. ಕಾವೇರಿ ಜಲಾನಯನ ಪ್ರದೇಶದ ಬರ ಪರಿಸ್ಥಿತಿಯನ್ನು ನೇರವಾಗಿ ಅರ್ಥ ಮಾಡಿಕೊಳ್ಳಲು ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು, ಜಲಸಂಪನ್ಮೂಲ ಸಚಿವರು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಸಭೆ ಆಹ್ವಾನಿಸಬೇಕು.
3. ತಮಿಳುನಾಡಿಗೆ ಅವೈಜ್ಞಾನಿಕವಾಗಿ ಮಂಜೂರು ಮಾಡಲಾಗಿದೆ. ಜಲಶಕ್ತಿ ಸಚಿವಾಲಯ ಕೂಡಲೇ ಮಧ್ಯ ಪ್ರವೇಶಿಸಿ ಕಾವೇರಿ ನೀರು ಬಿಡುವುದನ್ನು ನಿಲ್ಲಿಸಬೇಕು. ಬಿಕ್ಕಟ್ಟನ್ನು ನಿರ್ಣಯಿಸಲು ತಜ್ಞರ ತಂಡವನ್ನು ನಿಯೋಜಿಸಬೇಕು.
4. ಉತ್ತಮ ಮಳೆಯಾಗುವ ವರ್ಷಗಳಲ್ಲಿ ತಮಿಳುನಾಡಿಗೆ 480 ಟಿಎಂಸಿಗಿಂತ ಹೆಚ್ಚು ನೀರು ಬಿಡಲಾಗುತ್ತದೆ. ತಮಿಳುನಾಡಿಗೆ ಹೆಚ್ಚುವರಿ ನೀರನ್ನು ನಿರ್ವಹಿಸಲು ಸಾಕಷ್ಟು ಯಾಂತ್ರಿಕ ವ್ಯವಸ್ಥೆ ಇಲ್ಲ. ಮತ್ತು ಅದು ಬಂಗಾಳಕೊಲ್ಲಿಯಲ್ಲಿ ಕೊನೆಗೊಳ್ಳುತ್ತದೆ. ಮೇಕೆದಾಟು ಅಣೆಕಟ್ಟು ನಿರ್ಮಿಸಿದಾಗ 65 ಟಿಎಂಸಿ ನೀರನ್ನು ಸುಲಭವಾಗಿ ಸಂಗ್ರಹಿಸಬಹುದು. ಇದು ಕರ್ನಾಟಕ ಮತ್ತು ತಮಿಳುನಾಡು ಎರಡಕ್ಕೂ ಬರಗಾಲವನ್ನು ಸಮರ್ಪಕವಾಗಿ ನಿಭಾಯಿಸಲು ಸಹಾಯ ಮಾಡುತ್ತದೆ. ಜಲಶಕ್ತಿ ಸಚಿವಾಲಯವು ಈ ಯೋಜನೆಯನ್ನು ಪೂರ್ವಭಾವಿಯಾಗಿ ಕೈಗೆತ್ತಿಕೊಳ್ಳಲು ಮತ್ತು ಅಗತ್ಯವಿರುವ ಅನುಮತಿ ನೀಡಬೇಕು.
5. ಸಮೃದ್ಧ ಮಳೆಗೆ ನಮಗೆ ಸಹಾಯ ಮಾಡುವ ಪಶ್ಚಿಮ ಘಟ್ಟಗಳಲ್ಲಿನ ಅರಣ್ಯಗಳನ್ನು ಸಂರಕ್ಷಿಸುವ ಮತ್ತು ನಿರ್ವಹಿಸುವ ಸಂಪೂರ್ಣ ಹೊರೆಯನ್ನು ಕರ್ನಾಟಕ ರಾಜ್ಯ ಹೊತ್ತಿದೆ. ತನ್ನ ಪಾಲಿನ ನೀರನ್ನು ಕೇಳುವ ತಮಿಳುನಾಡು ಕರ್ನಾಟಕದ ಅರಣ್ಯಗಳ ರಕ್ಷಣೆ ಮತ್ತು ಸಂರಕ್ಷಣೆಗೆ ವರ್ಷಕ್ಕೆ ಕನಿಷ್ಠ 2000 ಕೋಟಿ ರೂ. ನೀಡುವಂತೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಲಾಗಿದೆ.












Click it and Unblock the Notifications