ಜಯಾ ವಿರುದ್ಧ ತಕ್ಷಣ ಮೇಲ್ಮನವಿ ಸಲ್ಲಿಸಲು ಆಪ್ ಆಗ್ರಹ
ಬೆಂಗಳೂರು, ಮೇ. 20 : ಅಕ್ರಮ ಆಸ್ತಿ ಗಳಿಸಿದ ಪ್ರಕರಣದಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ನಿರ್ದೋಷಿ ಎಂದು ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಕರ್ನಾಟಕ ಸರಕಾರ ಕೂಡಲೆ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಬೇಕು ಎಂದು ಆಮ್ ಆದ್ಮಿ ಪಕ್ಷ ರಾಜ್ಯ ಘಟಕ ಒತ್ತಾಯಿಸಿದೆ.
ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮವಿ ಸಲ್ಲಿಸಲು ಇದು ತಕ್ಕ ಪ್ರಕರಣ ಎಂದು ರಾಜ್ಯದ ವಿಶೇಷ ಸರಕಾರಿ ಅಭಿಯೋಜಕ ಬಿ.ವಿ. ಆಚಾರ್ಯ ಅವರು ಸರಕಾರಕ್ಕೆ ಶಿಫಾರಸು ಮಾಡಿದ್ದಾರೆ. ಜಯಲಲಿತಾ ಅವರ ಆಸ್ತಿ ಗಳಿಕೆ ಮತ್ತು ಆದಾಯದ ಲೆಕ್ಕಾಚಾರದಲ್ಲಿ ಭಾರೀ ತಪ್ಪುಗಳಾಗಿವೆ ಎಂದು ಆಚಾರ್ಯ ಅವರು ದೋಷಗಳನ್ನು ಎತ್ತಿ ತೋರಿಸಿದ್ದಾರೆ ಎಂಬುದು ಆಪ್‌ನ ವಾದ. [ಸುಪ್ರೀಂಗೆ ಹೋಗಲು ಆಚಾರ್ಯ ಶಿಫಾರಸು]

ಹದಿನೆಂಟು ವರ್ಷಗಳ ನಂತರ ಜಯಲಲಿತಾ ಮತ್ತಿತರ ಮೂರು ಜನರನ್ನು ದೋಷಮುಕ್ತರನ್ನಾಗಿ ಮಾಡಿದ್ದರಿಂದ ನ್ಯಾಯಕ್ಕೇ ಅಪಚಾರ ಮಾಡಿದಂತಾಗಿದೆ. ಭ್ರಷ್ಟಾಚಾರ ನಿಯಂತ್ರಣದ ವಿರುದ್ಧ ರಾಜ್ಯ ಸರಕಾರ ಗಂಭೀರವಾಗಿ ಯೋಚಿಸದಿರುವುದು ನಿಜಕ್ಕೂ ಕಳವಳಕಾರಿಯಾಗಿದೆ ಎಂದು ಆಮ್ ಆದ್ಮಿ ಪಕ್ಷ ಪತ್ರಿಕಾ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.
ಅದಲ್ಲದೆ, ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಇನ್ನೂ ತಡಮಾಡಿದರೆ, ಆರೋಪಿಗಳ ಇದರ ದುರ್ಲಾಭ ಪಡೆಯುತ್ತಾರೆ ಮತ್ತು ಪ್ರಕರಣ ಇನ್ನಷ್ಟು ದುರ್ಬಲವಾಗುತ್ತ ಸಾಗುತ್ತದೆ. ಪ್ರಕರಣ ಎಷ್ಟೇ ಸತ್ವಯುತವಾಗಿದ್ದರೂ ಮೇಲ್ಮನವಿ ಸಲ್ಲಿಸಲು ವಿಳಂಬ ಮಾಡಿದ್ದನ್ನು ಪರಿಗಣಿಸಿ ಸರ್ವೋಚ್ಚ ನ್ಯಾಯಾಲಯ ಮೇಲ್ಮನವಿ ತಿರಸ್ಕರಿಸಬಹುದು ಎಂದು ಕಳವಳ ವ್ಯಕ್ತಪಡಿಸಿದೆ.
ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಆಚಾರ್ಯ ಅವರು ಮೇಲ್ಮನವಿಗೆ ಶಿಫಾರಸು ಮಾಡಿದ್ದರೂ ಕರ್ನಾಟಕ ಸರಕಾರ ವಿಳಂಬ ನೀತಿಯನ್ನು ಅನುಸರಿಸುತ್ತಿದೆ, ಮೇಲ್ಮನವಿ ಸಲ್ಲಿಸಲು ಮೀನಮೇಷ ಎಣಿಸುತ್ತಿದೆ. ಕಾನೂನು ತಜ್ಞರೊಂದಿಗೆ ಚರ್ಚಿಸಿ, ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ನೀಡಿದ ನಂತರ ಯೋಚಿಸುವುದಾಗಿ ಕಾರಹರಣ ಮಾಡುತ್ತಿದೆ. [ಈ ದೇಶವನ್ನು ಆ ದೇವರೇ ಕಾಪಾಡಬೇಕು!]
ಈ ನಡುವೆ, ಜಯಲಲಿತಾ ಅವರ ಪಟ್ಟಾಭಿಷೇಕಕ್ಕೆ ಸಿದ್ಧತೆಗಳು ಚೆನ್ನೈನಲ್ಲಿ ಭರದಿಂದ ಸಾಗಿವೆ. ಕರ್ನಾಟಕ ಮೇಲ್ಮನವಿ ಸಲ್ಲಿಸುತ್ತೋ ಇಲ್ಲವೋ ಎಂದು ಕಾದು ನೋಡುತ್ತಿದ್ದ ಜಯಲಲಿತಾ ಮೇ 22ರಂದು ಎಐಎಡಿಎಂಕೆ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಸದ್ಯದಲ್ಲೇ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸುವ ದಿನಾಂಕ ನಿಗದಿಪಡಿಸಲಿದ್ದಾರೆ.












Click it and Unblock the Notifications