ಎಎಪಿಯ ಪೃಥ್ವಿ ರೆಡ್ಡಿ, ದಾಸರಿ ನಾಮಪತ್ರ ಸಲ್ಲಿಕೆಗೆ ಡೊಳ್ಳು, ಕಂಸಾಳೆ ಮೆರವಣಿಗೆ
ಬೆಂಗಳೂರು: ಆಮ್ ಆದ್ಮಿ ಪಾರ್ಟಿ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಮತ್ತು ಮೋಹನ್ ದಾಸರಿ ಗುರುವಾರ ತಮ್ಮ ನಾಮಪತ್ರಗಳನ್ನು ಸಲ್ಲಿಸಿದರು.
ಸರ್ವಜ್ಞನಗರ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿಯಾಗಿ ಪೃಥ್ವಿ ರೆಡ್ಡಿ, ಪಕ್ಷದ ಬೆಂಬಲಿಗರ ಜತೆ ಬಿಬಿಎಂಪಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ನೂರಾರು ಕಾರ್ಯಕರ್ತರು ಸುಮಾರು ಎರಡು ಕಿ.ಮೀ. ಡೊಳ್ಳು ಕುಣಿತ, ಕಂಸಾಳೆ ನೃತ್ಯದೊಂದಿಗೆ ಮೆರವಣಿಗೆ ಸಾಗಿದರು. ಸರ್ವಜ್ಞನಗರದ ಅಮೂಲಾಗ್ರ ಬದಲಾವಣೆಗಾಗಿ ಆಮ್ ಆದ್ಮಿ ಪಕ್ಷದೊಂದಿಗೆ ಕೈ ಜೋಡಿಸಬೇಕೆಂದು ಮತದಾರರಲ್ಲಿ ಕೇಳಿಕೊಂಡರು.

ಸರ್ ಸಿ.ವಿ.ರಾಮನ್ ನಗರ ವಿಧಾನಸಭೆ ಕ್ಷೇತ್ರದಿಂದ ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿ ಮೋಹನ್ ದಾಸರಿ ನಾಮಪತ್ರ ಸಲ್ಲಿಸಿದರು. ಎಎಪಿ ಕಾರ್ಯಕರ್ತರ ಮೆರವಣಿಗೆಯು ತಿಪ್ಪಸಂದ್ರ ಹಾಗು ಇಂದಿರಾನಗರದ ಮುಖ್ಯರಸ್ತೆಗಳಲ್ಲಿ ಸಾಗಿ ಬಿಬಿಎಂಪಿ ಕಚೇರಿಯವರೆಗೆ ನಡೆಯಿತು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ವೀರಗಾಸೆ ಹಾಗೂ ಇತರ ಕಲಾವಿದರು ಸ್ಥಳೀಯರ ಮನಸೆಳೆದರು. ಮೆರವಣಿಗೆಯಲ್ಲಿ ಆಮ್ ಆದ್ಮಿ ಪಾರ್ಟಿಯ ತಮಿಳುನಾಡಿನ ರಾಜ್ಯ ಸಂಚಾಲಕ ವಸೀಗರನ್ ಸಹ ಪಾಲ್ಗೊಂಡಿದ್ದರು.

ಆಮ್ ಆದ್ಮಿ ಪಾರ್ಟಿಯು ಇದುವರೆಗೂ ಅಭ್ಯರ್ಥಿಗಳ ಎರಡು ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಒಟ್ಟು 38 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹೆಸರಿಸಿದೆ.












Click it and Unblock the Notifications