ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಣ ಡೆಪಾಸಿಟ್ ಮಾಡುವರಿಗೆ ನಾಮ ಹಾಕುತ್ತಿದ್ದ ಹೈಟೆಕ್ ವಂಚಕನ ರೋಚಕ ಸ್ಟೋರಿ

|
Google Oneindia Kannada News

ಬೆಂಗಳೂರು, ಸೆ. 21: ಹೊಯ್ಸಳ ಸಿಬ್ಬಂದಿಗೆ ಉಚಿತ ಜಾಕೆಟ್ ಕೊಡಿಸುತ್ತೇನೆ ಎಂದು ನಂಬಿಸಿದ್ದ ಖತರ್‌ನಾಕ್ ಕಿಲಾಡಿಯೊಬ್ಬ ಇದೀಗ ಪೊಲೀಸರಿಂದಲೇ ಕೈಗೆ ಕೋಳ ಹಾಕಿಸಿಕೊಂಡು ಜೈಲು ಸೇರಿದ್ದಾನೆ. ಮುಗ್ಧ ಜನರಿಂದ ದುಡ್ಡು ಎಗರಿಸುವ ಆತ ಪೊಲೀಸರಿಗೆ ಉಚಿತ ಜಾಕೆಟ್ ಕೊಡುವ ಆಸೆ ಹುಟ್ಟಿಸಿ ಅದರಿಂದಲೇ ಸಿಕ್ಕಿಬಿದ್ದಿದ್ದಾನೆ.

ಆತನ ಹೆಸರು ನವೀನ್ ಕುಮಾರ್. ಆರ್. ಆರ್. ನಗರದ ನಿವಾಸಿ. ಮೂಲತಃ ಮಂಡ್ಯ ಜಿಲ್ಲೆಯ ನಾಗಮಂಗಲ ನಿವಾಸಿ. ಈತ ಬ್ಯಾಂಕ್‌ನ ಎಟಿಎಂ ಕೇಂದ್ರಗಳಲ್ಲಿ ಹಣ ಡೆಪಾಸಿಟ್ ಮಾಡಲು ಬರುವರನ್ನು ಟಾರ್ಗೆಟ್ ಮಾಡುತ್ತಿದ್ದ. ತುಂಬಾ ಒಳ್ಳೆಯ ಹುಡುಗನಂತೆ ಫೋಸ್ ಕೊಡುತ್ತಿದ್ದ. ನನ್ನದು ಹಣ ತೆಗೆಯುವ ಲಿಮಿಟ್ ಮುಗಿದು ಹೋಗಿದೆ. ನೀವು ನಗದು ಕೊಟ್ಟರೆ, ಈಗಲೇ ನಿಮ್ಮ ಖಾತೆಗೆ ಹಣ ಕಳುಹಿಸುತ್ತೇನೆ ಎಂದು ಹೇಳುತ್ತಿದ್ದ. ಈತನ ಮಾತು ನಂಬಿ ಯಾರಾದರೂ ಹಣ ಕೊಟ್ಟರೆ ನಗದು ಹಣ ಪಡೆಯುತ್ತಿದ್ದ. ಪಡೆದ ಹಣವನ್ನು ಬ್ಯಾಂಕ್‌ನಿಂದ ಕಳುಹಿಸದೇ ಮೊಬೈಲ್ ಆಪ್ ಸಹಾಯದಿಂದ ನಿಮ್ಮ ಬ್ಯಾಂಕ್ ಖಾತೆಗೆ ಹಣ ಸಂದಾಯವಾಗಿದೆ ಎಂದು ಹಣಕೊಟ್ಟವರ ಮೊಬೈಲ್ ನಂಬರ್‌ಗೆ ಸಂದೇಶ ರವಾನಿಸಿ ಹಣ ಎಗರಿಸಿ ಪರಾರಿಯಾಗುತ್ತಿದ್ದ.

ಎರಡು ಕಡೆ ಎಗರಿಸಿದ್ದ ಭೂಪ: ಇತ್ತೀಚೆಗೆ ಮಹಿಳೆಯೊಬ್ಬರು ರಾಜರಾಜೇಶ್ವರಿ ನಗರದ ನಿಮಿಷಾಂಬ ದೇಗುಲ ಸಮೀಪ ಎಸ್‌ಬಿಐ ಸಿಡಿಎಂ ಕೇಂದ್ರಕ್ಕೆ ತೆರಳಿದ್ದರು. ತನ್ನ ಬಳಿಯಿದ್ದ ಹಣ ಬ್ಯಾಂಕ್ ಖಾತೆಗೆ ಡೆಪಾಸಿಟ್ ಮಾಡುತ್ತಿದ್ದ ಮಹಿಳೆಯನ್ನು ಮಾತನಾಡಿಸಿರುವ ನವೀನ್ ಕುಮಾರ್, ನನ್ನ ಲಿಮಿಟ್ ಮುಗಿದು ಹೋಗಿದೆ. ಹಣ ತೆಗೆಯಲು ಆಗುತ್ತಿಲ್ಲ. ನೀವು ನಗದು ಹಣ ಕೊಡಿ, ನಾನು ಅಷ್ಟು ಹಣವನ್ನು ನನ್ನ ಬ್ಯಾಂಕ್ ಖಾತೆಯಿಂದ ಕಳುಹಿಸುತ್ತೇನೆ ಎಂದು ನಂಬಿಸಿದ್ದಾನೆ. ನವೀನ್ ಮಾತು ನಂಬಿದ ಮಹಿಳೆ ನಗದು ಹಣ ಕೊಟ್ಟಿದ್ದಾಳೆ. ಇದಕ್ಕೆ ಪ್ರತಿಯಾಗಿ ಹಣ ಪಾವತಿಸದೇ ನವೀನ್ Vyapar ಎಂಬ ನಕಲಿ ಆಪ್ ಮೂಲಕ ಪೇಮೆಂಟ್ ಔಟ್ ಎಂಬ ಸಂದೇಶ ತೋರಿಸಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಹಣ ಬ್ಯಾಂಕ್ ಖಾತೆಗೆ ಡೆಪಾಸಿಟ್ ಆಗಿದೆ ಎಂದು ಮಹಿಳೆಯೂ ಮನೆಗೆ ಹೋಗಿದ್ದಾಳೆ. ಬ್ಯಾಂಕ್ ಖಾತೆಯಲ್ಲಿ ಪರಿಶೀಲಿಸಿದಾಗ ಮೋಸ ಹೋಗಿರುವುದು ಗೊತ್ತಾಗಿದೆ. ಇದೇ ರೀತಿ ವಿಜಯನಗರದಲ್ಲಿ ಕೂಡ ವ್ಯಕ್ತಿಯೊಬ್ಬರಿಗೆ ಮೋಸ ಮಾಡಿ ನವೀನ್ ಪರಾರಿಯಾಗಿದ್ದಾನೆ.

Bengaluru: a Man Arrested for defrauding those who come to deposit money in CDM

ಜಾಕೆಟ್ ಕೊಡ್ತೀನಿ ಎಂದು ಹೋಗಿದ್ದ!:

ಹೀಗೆ ಎಟಿಎಂ ಕೇಂದ್ರಗಳಲ್ಲಿರುವ ಸಿಡಿಎಂನಲ್ಲಿ ಹಣ ಡೆಪಾಸಿಟ್ ಮಾಡಲು ಹೋಗುವರನ್ನು ಟಾರ್ಗೆಟ್ ಮಾಡಿ ಹಣ ಪಡೆದು ಪರಾರಿಯಾಗುತ್ತಿದ್ದ ನವೀನ್ ಕುಮಾರ್ ಇತ್ತೀಚೆಗೆ ಚನ್ನಸಂದ್ರದ ಬಳಿ ಹೊಯ್ಸಳ ಸಿಬ್ಬಂದಿಯನ್ನು ಪರಿಚಯ ಮಾಡಿಕೊಂಡು, ನಿಮಗೆಲ್ಲರಿಗೂ ತುಂಬಾ ಚೆನ್ನಾಗಿರುವ ಜಾಕೆಟ್ ಕೊಡಿಸುತ್ತೇನೆ ಎಂದು ನಂಬಿಸಿದ್ದಾನೆ. ಈತನ ಮರ್ಮ ಗೊತ್ತಿಲ್ಲದೇ ಹೊಯ್ಸಳ ಸಿಬ್ಬಂದಿ, ನೀವು ಜಾಕೆಟ್ ಕೊಡುವುದಿದ್ದರೆ ನಮ್ಮ ಪೊಲೀಸ್ ಇನ್‌ಸ್ಪೆಕ್ಟರ್‌ನ್ನು ಭೇಟಿ ಮಾಡಿ ಮಾತನಾಡಿ ಎಂದು ಹೇಳಿದಾಗ ಆತ ಯಾವಾಗಾದ್ರೂ ಬರುತ್ತೇನೆ ಎಂದು ಹೇಳಿ ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದಾನೆ.

ಕಳೆದ ಎರಡು ದಿನದ ಹಿಂದೆ ಇದೇ ವ್ಯಕ್ತಿ ಹೊಯ್ಸಳ ಸಿಬ್ಬಂದಿ ಕಣ್ಣಿಗೆ ಬಿದ್ದಿದ್ದಾನೆ. ಎಟಿಎಂನಲ್ಲಿ ಹಣ ಡೆಪಾಸಿಟ್ ಮಾಡುವವರನ್ನು ಯಾಮಾರಿಸಿ ಹಣ ತೆಗೆದುಕೊಂಡು ಹೋಗಿದ್ದ ಪ್ರಕರಣದ ಬಗ್ಗೆ ಮಾಹಿತಿ ಹೊಂದಿದ್ದ ಪೊಲೀಸರು, ಅನುಮಾನದ ಮೇಲೆ ನವೀನ್ ಕುಮಾರ್‌ನನ್ನು ವಶಕ್ಕೆ ಪಡೆದು ಪೊಲೀಸ್ ಇನ್‌ಸ್ಪೆಕ್ಟರ್ ಮುಂದೆ ಹಾಜರು ಪಡಿಸಿದ್ದಾರೆ. ವಿಚಾರಣೆ ನಡೆಸಿದಾಗ ಸಿಡಿಎಂನಲ್ಲಿ ಹಣ ಡೆಪಾಸಿಟ್ ಮಾಡಲು ಬರುತ್ತಿದ್ದವರನ್ನು ಯಾಮಾರಿಸಿ ಹಣ ಪಡೆದು ಮೋಸ ಮಾಡುತ್ತಿದ್ದ ಸಂಗತಿಯನ್ನು ಬಾಯಿ ಬಿಟ್ಟಿದ್ದಾನೆ. ಸದ್ಯಕ್ಕೆ ಎರಡು ಪ್ರಕರಣ ಬೆಳಕಿಗೆ ಬಂದಿದ್ದು, ಈತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ರಾಜರಾಜೇಶ್ವರಿನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತನ ಬಳಿಯಿದ್ದ 55 ಸಾವಿರ ರೂ. ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.

ಪಿಎಸ್ಐಗಳಿಗೆ ಯಾಮಾರಿಸಿದ್ದ ಭೂಪ: ಇನ್ನು, ಈ ನವೀನ್ ಕುಮಾರ್ ಪೊಲೀಸ್ ಸಿಬ್ಬಂದಿಯನ್ನು ಮಾತ್ರವಲ್ಲ, ಪೊಲೀಸ್ ಸಬ್‌ ಇನ್ಸಪೆಕ್ಟರ್‌ಗಳಿಗೆ ಯಾಮಾರಿಸುತ್ತಿದ್ದ. ನಾನು ಇಂತಹ ಪ್ರಕರಣದ ಆರೋಪಿಯನ್ನು ಈ ಹಿಂದೆ ಹಿಡಿದು ಕೊಟ್ಟಿದ್ದೆ. ನಿಮಗೂ ಒಳ್ಳೆಯ ಪ್ರಕರಣದ ಆರೋಪಿಯನ್ನು ಹಿಡಿದು ಕೊಡುತ್ತೇನೆ ಎಂದು ಪೊಲೀಸ್ ಸಬ್‌ ಇನ್ಸಪೆಕ್ಟರ್‌ಗಳನ್ನು ಭೇಟಿ ಮಾಡಿ ಅವರ ಸ್ನೇಹ ಗಳಿಸುತ್ತಿದ್ದ. ಅನೇಕ ಪೊಲೀಸ್ ಸಿಬ್ಬಂದಿಯ ಸಂಪರ್ಕ ಸಾಧಿಸಿದ್ದಾನೆ. ಪೊಲೀಸರ ಜತೆ ಹೀಗೆ ಸಂಪರ್ಕ ಬೆಳೆಸಿಕೊಂಡೇ ಸಿಡಿಎಂ ಕೇಂದ್ರಗಳಲ್ಲಿ ಹಣ ಡೆಪಾಸಿಟ್ ಮಾಡುವರ ಬಳಿ ಹಣ ಪಡೆದು ವಂಚನೆ ಮಾಡುತ್ತಿದ್ದ. ಈತನ ಬಗ್ಗೆ ಅನುಮಾನಗೊಂಡು ಹಿಡಿದುಕೊಟ್ಟ ಅಪರಾಧ ಸಿಬ್ಬಂದಿಗೆ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಎಂ. ಪಾಟೀಲ್ ನಗದು ಬಹುಮಾನ ಘೋಷಣೆ ಮಾಡಿದ್ದಾರೆ.

ಎಟಿಎಂ ಕೇಂದ್ರಗಳಲ್ಲಿ ಹಣ ತುಂಬುವಾಗ, ಇಲ್ಲವೇ ಡ್ರಾ ಮಾಡುವಾಗ ಅಪರಿಚಿತರ ಜತೆ ಮಾತನಾಡಬೇಡಿ. ಗಮನ ಬೇರೆಡೆ ಸೆಳೆದು ಹಣ ಪಡೆದು ಮೋಸ ಮಾಡುತ್ತಾರೆ. ಎಟಿಎಂ ಕೇಂದ್ರದಲ್ಲಿ ಹಣದ ವಹಿವಾಟು ನಡೆಸುವಾಗ ಸಾರ್ವಜನಿಕರು ತಮ್ಮ ಗಮನ ಬೇರೆಡೆ ಕೊಡಬಾರದು ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಎಂ. ಪಾಟೀಲ್ ಕಿವಿಮಾತು ಹೇಳಿದ್ದಾರೆ.

English summary
Rajarajeswari Nagara police have arrested a person for defrauding those who come to deposit money in CDM knwo more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X