ಹೆಬ್ಬಾಳ- ಸಿಲ್ಕ್ ಬೋರ್ಡ್ ಜಂಕ್ಷನ್ ಸುರಂಗ ಮಾರ್ಗ ಯೋಜನೆಗೆ ಸಾಲ ನೀಡಲು ಮುಂದಾದ 9 ಬ್ಯಾಂಕ್‌ಗಳು
ರಾಜ್ಯ ರಾಜಧಾನಿ ಬೆಂಗಳೂರು ಅಂದರೆ ಮೊದಲಿಗೆ ನೆನಪಾಗುವುದೇ ಟ್ರಾಫಿಕ್ ಸಿಟಿ ಅಂತಾ. ಈ ಟ್ರಾಫಿಕ್ ನಿಯಂತ್ರಣ ಮಾಡಲು ಬಿಬಿಎಂಪಿ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಲೇ ಇದೆ. ಇನ್ನು ಇದೀಗ ವಾಹನ ದಟ್ಟಣೆ ನಿಯಂತ್ರಣಕ್ಕಾಗಿ ಹೆಬ್ಬಾಳದ ಎಸ್ಟೀಮ್ ಮಾಲ್‌ನಿಂದ ಸಿಲ್ಕ್‌ಬೋರ್ಡ್ ಜಂಕ್ಷನ್‌ವರೆಗಿನ 18 ಕಿಲೋ ಮೀಟರ್ ಉದ್ದದ ಸುರಂಗ ಮಾರ್ಗ ನಿರ್ಮಾಣ ಮಾಡುತ್ತಿದೆ. ಹಾಗಾದರೆ ಇದು ಎಲ್ಲಿದೆ ಬಂದು ನಿಂತಿದೆ ಎಂದು ಇಲ್ಲಿ ತಿಳಿಯಿರಿ.
ಈ ಯೋಜನೆಗೆ ಬಿಬಿಎಂಪಿ೦ ಮುಕ್ತ ಮಾರುಕಟ್ಟೆಯಲ್ಲಿ ಸಾಲ ಪಡೆಯಲು ತೀರ್ಮಾನ ಮಾಡಿತ್ತು. ಆದರೆ, ಇದೀಗ 9 ಬ್ಯಾಂಕ್‌ಗಳು 19,000 ಕೋಟಿ ರೂಪಾಯಿ ಸಾಲ ನೀಡಲು ಮುಂದೆ ಬಂದಿವೆ. ಭಾರೀ ವಿರೋಧದ ನಡುವೆಯೂ ಸರ್ಕಾರ ಈ ಯೋಜನೆಗೆ ಹೆಚ್ಚಿನ ಆಸಕ್ತಿ ವಹಿಸಿದೆ.

ಹೆಬ್ಬಾಳದ ಎಸ್ಟೀಮ್ ಮಾಲ್-ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗಿನ 18 ಕಿಲೋ ಮೀಟರ್ ಮಾರ್ಗವನ್ನು ನಿರ್ಮಾಣ-ನಿರ್ವಹಣೆ- ವರ್ಗಾವಣೆ ಮಾದರಿಯಲ್ಲಿ ನಿರ್ಮಾಣ ಮಾಡಲಿದೆ. ಈ ಯೋಜನೆಗೆ ಬಿಡ್ ಸಲ್ಲಿಸಲು ಜನವರಿ ಅಂದರೆ ಇದೇ ತಿಂಗಳ 8ರ ವರೆಗೆ ಕಾಲಾವಕಾಶ ನೀಡಲಾಗಿದೆ.
ಬಿಬಿಎಂಪಿ ಮುಖ್ಯ ಇಂಜಿನಿಯರ್ ಬಿಎಸ್ ಪ್ರಹ್ಲಾದ್ ಈ ಬಗ್ಗೆ ಪ್ರತಿಕ್ರಿಯಿಸಿ, 9 ಬ್ಯಾಂಕ್‌ಗಳು ಸಾಲ ನೀಡಲು ಮುಂದೆ ಬಂದಿವೆ. ಆದರೆ ಇನ್ನೂ ಬಡ್ಡಿ ದರ ನಿಗದಿ ಆಗಿಲ್ಲ. ಒಮ್ಮೆ ಬಿಡ್‌ಗಳು ಸಲ್ಲಿಕೆಯಾದ ಬಳಿಕ ಸರ್ಕಾರ ಸ್ಪರ್ಧಾತ್ಮಕ ಬಿಡ್ ಸಲ್ಲಿಸಿದ ಬ್ಯಾಂಕ್ ಆಯ್ಕೆ ಮಾಡಲಾಗುತ್ತದೆ ಎಂದರು.
ಇಂಡಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಆರ್‌ಇಸಿ ಸಾಲ ನೀಡಲು ಆಸಕ್ತಿ ತೋರಿಸಿರುವ ಪ್ರಮುಖ ಬ್ಯಾಂಕ್‌ಗಳಾಗಿವೆ. ಆದರೆ ಯಾವುದೇ ವಿದೇಶಿ ಬ್ಯಾಂಕ್ ಬಿಡ್‌ನಲ್ಲಿ ಭಾಗವಹಿಸಿಲ್ಲ ಎಂದು ತಿಳಿದುಬಂದಿದೆ. ರಾಜ್ಯದ ಸರ್ಕಾರ ಶೇಕಡ 40ರಷ್ಟು ಅನುದಾನ ಕೊಡಲಿದ್ದು, ರಸ್ತೆಯು ಖಾಸಗಿ-ಸರ್ಕಾರಿ ಸಹಭಾಗಿತ್ವದಲ್ಲಿ ನಿರ್ಮಾಣ ಆಗಲಿದೆ. ಇನ್ನು ಈ ರಸ್ತೆಗೆ ಟೋಲ್ ನಿಗದಿ ಆಗುತ್ತದೆ ಎಂದು ಬಿಬಿಎಂಪಿ ತಿಳಿಸಿದೆ.
2024ರ ಆಗಸ್ಟ್‌ನಲ್ಲಿ ನಡೆದ ಸಚಿವ ಸಂಪುಟದಲ್ಲಿ ಸುರಂಗ ರಸ್ತೆ ನಿರ್ಮಾಣಕ್ಕೆ ನಿರ್ಧರಿಸಲಾಗಿತ್ತು. ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಈ ರಸ್ತೆ ನಿರ್ಮಾಣಕ್ಕೆ ಸಾಲ ಪಡೆಯಲು ಬಿಬಿಎಂಪಿಗೆ ಅನುಮತಿ ಮತ್ತು ಸಾಲಕ್ಕೆ ಖಾತ್ರಿ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿತ್ತು. ಈ ಯೋಜನೆ ಬೆಂಗಳೂರು ಉಸ್ತುವಾರಿ ವಹಿಸಿಕೊಂಡಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರ ಕನಸಿನ ಯೋಜನೆಯಾಗಿದೆ ಎಂದು ಹೇಳಲಾಗುತ್ತದೆ.
ಸುರಂಗ ರಸ್ತೆಗಳ ನಿರ್ಮಾಣದಿಂದ ಸಾರ್ವಜನಿಕರು ಸಾರ್ವಜನಿಕ ಸಾರಿಗೆಯಿಂದ ಖಾಸಗಿ ವಾಹನಗಳಿಗೆ ವರ್ಗಾವಣೆಗೊಳ್ಳಲು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂಬ ಟೀಕೆಗಳೂ ವ್ಯಕ್ತವಾಗಿವೆ. ಇದರ ನಡುವೆಯೂ ಯಾವುದೇ ಟೀಕೆಗಳಿಗೆ ತಲೆಗೊಡದೇ ಈ ಯೋಜನೆ ಪೂರ್ಣಗೊಳಿಸಲು ಸರ್ಕಾರ ಮುಂದಾಗಿದ ಎಂದು ತಿಳಿದುಬಂದಿದೆ.
ಇನ್ನು ಈ ಸುರಂಗ ರಸ್ತೆಯಲ್ಲಿ 3 ಇಂಟರ್ ಮೀಡಿಯೇಟ್ ಸ್ಥಳಗಳಲ್ಲಿ ರ‍್ಯಾಂಪ್‌ಗಳ ಮೂಲಕ ಮೇಖ್ರಿ ಸರ್ಕಲ್, ರೇಸ್ ಕೋರ್ಸ್ ರಸ್ತೆ ಮತ್ತು ಲಾಲ್ ಬಾಗ್‌ನಲ್ಲಿ ಆಗಮನ-ನಿರ್ಗಮನ ನಿರ್ಮಾಣ ಆಗಲಿದೆ. ಇದರಿಂದ ಪ್ರಯಾಣದ ಸಮಯ 90ರಿಂದ 20 ನಿಮಿಷಗಳಿಗೆ ಇಳಿಕೆಯಾಗುತ್ತದೆ. ಇನ್ನು ಮೂಲಗಳ ಪ್ರಕಾರ, 18 ಕಿಲೋ ಮೀಟರ್ ದೂರದ ಪ್ರಯಾಣಕ್ಕೆ 288 ರೂಪಾಯಿ ಟೋಲ್ ನಿಗದಿಪಡಿಸುವ ಸಾಧ್ಯತಯಿದೆ ಎಂದು ತಿಳಿದುಬಂದಿದೆ.












Click it and Unblock the Notifications