ಬೆಂಗಳೂರಲ್ಲಿ ಆನ್‌ಲೈನ್ ಕ್ಲಾಸ್‌ಗೆ ಪೋಷಕರ ಡಿಮಾಂಡ್ ಹೆಚ್ಚು!
ಬೆಂಗಳೂರು, ಆಗಸ್ಟ್ 23; ಕರ್ನಾಟಕ ಸರ್ಕಾರ ಶಾಲಾ-ಕಾಲೇಜುಗಳಲ್ಲಿ ಭೌತಿಕ ತರಗತಿಗಳನ್ನು ನಡೆಸಲು ಒಪ್ಪಿಗೆ ನೀಡಿದೆ. 9 ರಿಂದ ದ್ವಿತೀಯ ಪಿಯುಸಿ ವರೆಗಿನ ಶಾಲೆ-ಕಾಲೇಜುಗಳಲ್ಲಿ ಸೋಮವಾರ ತರಗತಿಗಳು ಆರಂಭವಾಗುತ್ತಿವೆ.
"ಶಾಲಾ-ಕಾಲೇಜುಗಳನ್ನು ತೆರೆಯಲು ಸರ್ಕಾರ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೇ ಶಾಲೆಗೆ ಬರಬಹುದು" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದ್ದಾರೆ.
ಆದರೆ ಬೆಂಗಳೂರು ನಗರಲ್ಲಿ ಆನ್‌ಲೈನ್ ಕ್ಲಾಸ್ ಮುಂದುವರೆಸಿ ಎಂದು ಪೋಷಕರು ಬೇಡಿಕೆ ಇಡುತ್ತಿದ್ದಾರೆ. ಈ ಕುರಿತು ಖಾಸಗಿ ಶಾಲೆಗಳಿಗೆ ಪೋಷಕರು ಸಂದೇಶಗಳನ್ನು ಕಳಿಸುತ್ತಿದ್ದಾರೆ. ಮಕ್ಕಳನ್ನು ಶಾಲೆಗೆ ಕಳಿಸುವ ವಿಚಾರದಲ್ಲಿ ಪೋಷಕರಲ್ಲಿ ಆತಂಕ ಇನ್ನೂ ದೂರವಾಗಿಲ್ಲ.

ಬೆಂಗಳೂರು ನಗರದ ಅನೇಕ ಖಾಸಗಿ ಶಾಲೆಗಳಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ಶೇ 85ರಷ್ಟು ಪೋಷಕರು ಆನ್‌ಲೈನ್ ಕ್ಲಾಸ್ ಮುಂದುವರೆಸಿ ಎಂದು ಬೇಡಿಕೆ ಇಟ್ಟಿದ್ದಾರೆ. ಮ್ಲಲೇಶ್ವರ, ರಾಜರಾಜೇಶ್ವರಿ ನಗರದ ಶಾಲೆಗಳ ಮುಖ್ಯಸ್ಥರು ಈ ಕುರಿತು ಮಾತನಾಡಿದ್ದಾರೆ.
"ಶೇ 70ಕ್ಕಿಂತ ಹೆಚ್ಚು ಪೋಷಕರು ಆನ್‌ಲೈನ್ ಕ್ಲಾಸ್ ಮುಂದುವರೆಸಿ ಎಂದು ಸಂದೇಶ ಕಳಿಸಿದ್ದಾರೆ. ಶಾಲೆ ಈಗಲೇ ಭೌತಿಕ ತರಗತಿಗಳನ್ನು ಆರಂಭಿಸದಿರಲು ತೀರ್ಮಾನಿಸಿದೆ" ಎಂದು ಮಲ್ಲೇಶ್ವರದ ಶಾಲೆಯೊಂದರ ಶಿಕ್ಷಕರು ತಿಳಿಸಿದ್ದಾರೆ.
ಹಲವು ಖಾಸಗಿ ಶಾಲೆಗಳು ಸೆಪ್ಟೆಂಬರ್ 1ರಿಂದ ತರಗತಿಗಳನ್ನು ಆರಂಭಿಸಲು ತೀರ್ಮಾನಿಸಿವೆ. ಆದ್ದರಿಂದ ಇನ್ನೂ ಒಂದು ವಾರಗಳ ಕಾಲ ಕಾದು ನೋಡಲಿವೆ. ಪೋಷಕರು ಒಪ್ಪಿಗೆ ನೀಡಿದರೆ ಶಾಲೆಗಳಲ್ಲಿಯೇ ತರಗತಿಗಳನ್ನು ನಡೆಸಲಾಗುತ್ತದೆ.
ಕೋವಿಡ್ ಪರಿಸ್ಥಿತಿ ಬಗ್ಗೆ ಪೋಷಕರು ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರವೇ ವಾರಾಂತ್ಯದ ಕರ್ಫ್ಯೂ, ನೈಟ್ ಕರ್ಫ್ಯೂ ಜಾರಿಗೊಳಿಸಿ ಸೋಂಕು ಹರಡುವಿಕೆ ತಡೆಯಲು ಪ್ರಯತ್ನ ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿ ಮಕ್ಕಳನ್ನು ಶಾಲೆಗೆ ಕಳಿಸುವುದು ಹೇಗೆ? ಎಂದು ಪ್ರಶ್ನೆ ಮಾಡಿದ್ದಾರೆ.
ಸರ್ಕಾರಿ ಶಾಲೆಗಳು ಆರಂಭವಾದರೂ ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ ಯೋಜನೆ ಆರಂಭಗೊಳ್ಳುವುದಿಲ್ಲ. ಆದ್ದರಿಂದ ಸರ್ಕಾರಿ ಶಾಲೆಗಳಲ್ಲಿ ಸಹ ಹಾಜರಾತಿ ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸೋಮವಾರ ಶಾಲೆಗಳು ಬಾಗಿಲು ತೆರೆಯುವುದಿಲ್ಲ. ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ 2ಕ್ಕಿಂತಲೂ ಹೆಚ್ಚಿರುವುದರಿಂದ ಜಿಲ್ಲೆಯಲ್ಲಿ ಸದ್ಯ ಶಾಲೆಗಳನ್ನು ತೆರೆಯುವುದಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಈ ಕುರಿತು ಮಾಹಿತಿ ನೀಡಿದ್ದಾರೆ, "ಜಿಲ್ಲೆಯಲ್ಲಿ ಸದ್ಯಕ್ಕೆ ಕೋವಿಡ್ ಪಾಸಿಟಿವಿಟಿ ದರ ಶೇ 2.5 ಇದೆ. ಅದು ಶೇ 2ಕ್ಕಿಂತ ಕೆಳಗಿಳಿದ ಬಳಿಕವೇ ಶಾಲೆಗಳನ್ನು ತೆರೆಯುವ ಬಗ್ಗೆ ಪರಿಶೀಲಿಸುತ್ತೇವೆ" ಎಂದು ಹೇಳಿದ್ದಾರೆ.
9-12 ತರಗತಿಗಳು ಇಂದಿನಿಂದ ಆರಂಭವಾಗಲಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಬೆಂಗಳೂರು ನಗರದ ಕೆಲವು ಶಾಲೆಗಳಿಗೆ ಭೇಟಿ ನೀಡಲಿದ್ದಾರೆ. ಸಚಿವರು ಸಹ ತಮ್ಮ ಜಿಲ್ಲೆಯಲ್ಲಿ ಶಾಲೆಗಳಿಗೆ ಭೇಟಿ ನೀಡಲು ಮುಖ್ಯಮಂತ್ರಿಗಳು ಸೂಚನೆ ಕೊಟ್ಟಿದ್ದಾರೆ.
ಖಾಸಗಿ ಶಾಲೆಗಳು ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ತರಗತಿಗಳ ಆಯ್ಕೆಯನ್ನು ಮಕ್ಕಳಿಗೆ ನೀಡಿವೆ. ಬೆಂಗಳೂರು ನಗರದಲ್ಲಿ ಶೇ 85ರಷ್ಟು ಪೋಷಕರು ಆನ್‌ಲೈನ್ ತರಗತಿಗಳನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.
ಬೆಂಗಳೂರು ನಗರದಲ್ಲಿ ಖಾಸಗಿ ಶಾಲೆಗಳು ಮಕ್ಕಳನ್ನು ಕರೆದುಕೊಂಡು ಬರಲು ಶಾಲಾ ವಾಹನಗಳ ವ್ಯವಸ್ಥೆಯನ್ನು ಸಹ ಮಾಡಿವೆ. ಪೋಷಕರು ಮಕ್ಕಳನ್ನು ತಾವೇ ಕರೆದುಕೊಂಡು ಬಂದು ಬಿಡುವ ಆಯ್ಕೆಯನ್ನು ಸಹ ನೀಡಿವೆ.
"ಇದು ಬಹಳ ನಿಧಾನವಾದ ಪ್ರಕ್ರಿಯೆ. ನಾವು ಪೋಷಕರಿಗೆ ಧೈರ್ಯ ತುಂಬಬೇಕು. ಮಕ್ಕಳು ಶಾಲೆಗೆ ಬಂದರೆ ಲ್ಯಾಬ್, ಪ್ರಾಕ್ಟಿಕಲ್‌ಗಳನ್ನು ನಡೆಸಲು ಸಹ ಅನುಕೂಲವಾಗುತ್ತದೆ" ಎಂದು ಶಿಕ್ಷಕರೊಬ್ಬರು ಹೇಳಿದ್ದಾರೆ.












Click it and Unblock the Notifications