ಬೆಂಗಳೂರು : ಬಲವಂತದಿಂದ 700 ವಲಸಿಗರ ಕುಟುಂಬ ಎತ್ತಂಗಡಿ
ಬೆಂಗಳೂರು, ಡಿಸೆಂಬರ್ 03 : ಬೆಂಗಳೂರಿನ ಪೂರ್ವ ಭಾಗದಲ್ಲಿ ಶೆಡ್‌ಗಳಲ್ಲಿ ವಾಸಿಸುತ್ತಿದ್ದ 700ಕ್ಕೂ ಅಧಿಕ ವಲಸಿಗರನ್ನು ಎತ್ತಂಗಡಿ ಮಾಡಲಾಗಿದೆ. ಬಲವಂತವಾಗಿ ಅವರ ಗುಡಿಸಲುಗಳನ್ನು ನಾಶ ಮಾಡಲಾಗಿದ್ದು, ಮಹಿಳೆಯರು, ಮಕ್ಕಳು, ವೃದ್ಧರ ಬದುಕು ಅತಂತ್ರವಾಗಿದೆ.
ದೇವರಬೀಸನಹಳ್ಳಿ, ವರ್ತೂರು, ಕರಿಯಮ್ಮನ ಅಗ್ರಹಾರ, ಬೆಳ್ಳಂದೂರು ಸೇರಿದಂತೆ ಅಕ್ಕಪಕ್ಕದ ಪ್ರದೇಶಗಳಲ್ಲಿ ವಾಸವಾಗಿದ್ದ ವಲಸಿಗರನ್ನು ಬಲವಂತವಾಗಿ ಖಾಲಿ ಮಾಡಿಸಲಾಗಿದೆ. ನವೆಂಬರ್ 30ರಂದು ಜೆಸಿಬಿ ಮೂಲಕ ಗುಡಿಸಲು ನಾಶ ಮಾಡಲಾಗಿದ್ದು, ಬೇರೆ ಜಾಗಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ.
ಪಶ್ಚಿಮ ಬಂಗಾಳ, ಒಡಿಸ್ಸಾ, ಬಾಂಗ್ಲಾದೇಶದಿಂದ ಬಂದ ನೂರಾರು ವಲಸಿಗರು ಗುಡಿಸಲುಗಳಲ್ಲಿ ನೆಲೆಸಿದ್ದರು. ಇವರಿಂದಾಗಿ ಈ ಪ್ರದೇಶದ ಸುತ್ತಮುತ್ತಲು ಅಪರಾಧ ಪ್ರಕರಣಗಳು ಹೆಚ್ಚಾಗಿವೆ ಎಂಬ ದೂರುಗಳಿತ್ತು. ಆದ್ದರಿಂದ, ಎಲ್ಲರನ್ನು ಎತ್ತಂಗಡಿ ಮಾಡಿಸಲಾಗಿದೆ.

ಸುಮಾರು 700 ಕುಟುಂಬಗಳಲ್ಲಿ 7 ಸಾವಿರಕ್ಕೂ ಅಧಿಕ ಜನರಿದ್ದರು. ಮಹಿಳೆಯರು, ಮಕ್ಕಳು, ವೃದ್ಧರು ಸಹ ಸೇರಿದ್ದರು. ವಿಧಾನಸಭೆ ಚುನಾವಣೆ ಸಮಯದಲ್ಲಿ ಇವರಿಗೆ ವೋಟರ್ ಐಡಿ ನೀಡಿ, ನಕಲಿ ಮತದಾನವನ್ನು ಮಾಡಿಸಲಾಗಿದೆ ಎಂಬ ಆರೋಪವೂ ಇದೆ.
ವಿಧಾನಸಭೆ ಚುನಾವಣೆಯಲ್ಲಿ ಇವರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದರು ಎಂಬ ವಿಚಾರ ಸ್ಥಳೀಯ ಬಿಜೆಪಿ ನಾಯಕರಿಗೆ ತಿಳಿದಿತ್ತು. ಇದರಿಂದ ಆಕ್ರೋಶಗೊಂಡ ಸ್ಥಳೀಯ ನಾಯಕರು ಅವರನ್ನು ಎತ್ತಂಗಡಿ ಮಾಡಿಸಿದ್ದಾರೆ ಎಂಬ ದೂರುಗಳು ಇವೆ.

ನವೆಂಬರ್ 30ರಂದು ಸಂಜೆ ಜೆಸಿಬಿಗಳ ಸಹಾಯದಿಂದ ಗುಡಿಸಲುಗಳನ್ನು ನಾಶ ಮಾಡಲಾಗಿದ್ದು, ಅಕ್ಕ-ಪಕ್ಕದ ಶೆಡ್‌ಗಳಲ್ಲಿ ಉಳಿದುಕೊಂಡು ಜನರು ರಾತ್ರಿ ಕಳೆದಿದ್ದಾರೆ. ಸೋಮವಾರದ ಬಳಿಕ ಈ ಸ್ಥಳದಲ್ಲಿ ಇರಬಾರದು ಎಂದು ಎಚ್ಚರಿಕೆಯನ್ನು ನೀಡಲಾಗಿದೆ.












Click it and Unblock the Notifications